ಲೆಜೆಂಡರಿ ಕ್ರಿಕೆಟರ್ಸ್ ಮೂರ್ಖರೇ? ಸಚಿನ್, ದ್ರಾವಿಡ್, ಗಂಗೂಲಿ, ಪಾಂಟಿಂಗ್ ಸಲಹೆ ನೀಡಿದರೂ ಬುದ್ದಿ ಕಲಿಯದ ಪೃಥ್ವಿ ಶಾ!
Prithvi Shaw: ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ರಿಕಿ ಪಾಂಟಿಂಗ್ ಹಂಚಿಕೊಂಡ ಸಲಹೆಗಳನ್ನು ಯುವ ಕ್ರಿಕೆಟಿಗ ಪೃಥ್ವಿ ಶಾ ಕಡೆಗಣಿಸಿದ್ದಾರೆ ಎಂದು ಬಿಸಿಸಿಐ ಮಾಜಿ ಆಯ್ಕೆದಾರರೊಬ್ಬರು ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ಭಾರತ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ಸಂಚಲನ ಸೃಷ್ಟಿಸಿದ್ದ ಯುವ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಅವರನ್ನು ಐಪಿಎಲ್ 2025 ಮೆಗಾ ಹರಾಜಿನಲ್ಲಿ (IPL 2025 Mega Auction) ಖರೀದಿಸಲು ಯಾವೊಂದು ತಂಡವೂ ಮುಂದೆ ಬರಲಿಲ್ಲ. ಅವರ ಅದೃಷ್ಟ ಕೈ ಹಿಡಿಯುತ್ತಿಲ್ಲ. ಭವಿಷ್ಯದ ಸಚಿನ್ ತೆಂಡೂಲ್ಕರ್ (Sachin Tendulkar) ಎಂದು ಕರೆಸಿಕೊಳ್ಳುತ್ತಿದ್ದ ಪೃಥ್ವಿ, ತಾನು ಮಾಡಿದ ತಪ್ಪುಗಳಿಂದ ಶಿಕ್ಷೆ ಅನುಭವಿಸುವಂತಾಗಿದೆ. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಒಂದಲ್ಲ, ಎರಡು ಬಾರಿ. ಅನ್ಸೋಲ್ಡ್ ಆಗಿದ್ದಾರೆ. ಕಳೆದ ಐಪಿಎಲ್ನಲ್ಲಿ ಉಳಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಬಿಡುಗಡೆ ಮಾಡಿತು. 25 ವರ್ಷದ ಕ್ರಿಕೆಟಿಗ ತನ್ನನ್ನು ತಾನು ಕಂಡುಕೊಳ್ಳಲು ಪರದಾಡುತ್ತಿದ್ದಾರೆ.
ಫಿಟ್ನೆಸ್ ಕಡೆ ಗಮನ ಕೊಡದ ಮತ್ತು ಬ್ಯಾಟಿಂಗ್ ಲಯ ಕಂಡುಕೊಳ್ಳದ ಪೃಥ್ವಿ, ಮಾಜಿ ಕ್ರಿಕೆಟಿಗರು ನೀಡಿದ ಸಲಹೆಗಳನ್ನು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದರು. 2020ರಲ್ಲಿ ಡೋಪಿಂಗ್ ಹಗರಣದಲ್ಲಿ ಸಿಲುಕಿದ್ದರು. ಈ ವೇಳೆ ಪೃಥ್ವಿ ಶಾಗೆ ಧೈರ್ಯ ತುಂಬಿದ್ದು ಬೇರೆ ಯಾರೂ ಅಲ್ಲ, ಸಚಿನ್ ತೆಂಡೂಲ್ಕರ್. ಅಂದು ಪ್ರತಿಭೆಗಿಂತ ಶಿಸ್ತು ಮುಖ್ಯ ಎಂದು ಸಚಿನ್ ಸಲಹೆ ನೀಡಿದ್ದರಂತೆ. ಭಾರತದಲ್ಲಿ ಪ್ರತಿಭಾವಂತ ಕ್ರಿಕೆಟಿಗರ ಸಾವು ಇಲ್ಲ. ಶಿಸ್ತು, ಸ್ವಯಂ ನಿಯಂತ್ರಣಗಳು ಆಟಗಾರನ ಬೆಳವಣಿಗೆ ನಾಂದಿ ಎಂದಿದ್ದಂತೆ. ಸಚಿನ್ ಅವರ ಸ್ನೇಹಿತ ವಿನೋದ್ ಕಾಂಬ್ಳಿ ಇದೇ ರೀತಿ ವೃತ್ತಿಜೀವನ ಹಾಳು ಮಾಡಿಕೊಂಡಿದ್ದರು. ಇದನ್ನು ಅವರು ಕಣ್ಣಾರೆ ನೋಡಿದ್ದರು. ಹೀಗಾಗಿ ಪೃಥ್ವಿಗೆ ಸಲಹೆ ನೀಡಿದ್ದರು.
ಪೃಥ್ವಿ ಶಾ ಸಹ ಕಾಂಬ್ಳಿ ಹಾದಿಯಲ್ಲೇ ಸಾಗಿ ಅಪಾಯ ಎದುರಿಸುತ್ತಿದ್ದಾರೆ. ಕಳಪೆ ಫಿಟ್ನೆಸ್ ಮತ್ತು ದೇಹದಲ್ಲಿ ಕೊಬ್ಬು ಬೆಳೆಸಿಕೊಂಡಿರುವ ಶಾ ಅವರನ್ನು ಇತ್ತೀಚೆಗೆ ಮುಂಬೈನ ರಣಜಿ ಟ್ರೋಫಿ ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲಾಯಿತು. ಇಲ್ಲಿ ಪ್ರಮುಖ ಸಮಸ್ಯೆ ಅಂದರೆ ಶಿಸ್ತು. ದಿಗ್ಗಜ ಸಚಿನ್ ಅಷ್ಟೆಲ್ಲಾ ಸಲಹೆ ನೀಡಿದ್ದರೂ ಸಹ ಅವೆಲ್ಲವನ್ನೂ ನಿರ್ಲಕ್ಷಿಸಿದ್ದಾರೆ. ಇದು ದುರಂಹಕಾರದ ಪರಮಾವಧಿ ಎಂದು ಕ್ರಿಕೆಟ್ ಫ್ಯಾನ್ಸ್ ಮತ್ತು ಮಾಜಿ ಕ್ರಿಕೆಟಿಗರು ಪೃಥ್ವಿ ನಡೆಗೆ ಕಿಡಿಕಾರಿದ್ದರು. ಆತನ ಕ್ರಿಕೆಟ್ ಭವಿಷ್ಯ ಉತ್ತಮವಾಗಿರಲೆಂದು ಹೇಳಿದ ಸಲಹೆಗಳನ್ನು ಧಿಕ್ಕರಿಸಿರುವುದು ಎಂದು ಬಿಸಿಸಿಐನ ಮಾಜಿ ಆಯ್ಕೆದಾರರೊಬ್ಬರು ಕಿಡಿಕಾರಿದ್ದಾರೆ.
ದಿಗ್ಗಜ ಕ್ರಿಕೆಟಿಗರು ಮೂರ್ಖರೇ?
ಹೆಸರೇಳಲು ಇಚ್ಛಿಸದ ಮಾಜಿ ಆಯ್ಕೆದಾರರೊಬ್ಬರು, ಪೃಥ್ವಿ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಡಿಸಿಯಲ್ಲಿಯೇ, ಅವರು ತಮ್ಮ ಅಂಡರ್ -19 ಭಾರತದ ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರೊಂದಿಗೆ ಸಂವಹನ ನಡೆಸುವ ಮತ್ತು ಕಲಿಯುವ ಅವಕಾಶವನ್ನು ಕಳೆದುಕೊಂಡರು. ಅವರ ಸಲಹೆಗಳನ್ನು ಕಡೆಗಣಿಸಿದರು. ಇದಕ್ಕಿಂತ ದುರಂತ ಮತ್ತೊಂದಿಲ್ಲ. ದಿಗ್ಗಜ ಕ್ರಿಕೆಟಿಗರೇ ಆತನಿಗೆ ಮಾರ್ಗದರ್ಶಕರಾಗಿದ್ದರು. ಆದರೂ ಕಲಿತಿದ್ದು ಶೂನ್ಯ. ಪೃಥ್ವಿ ಜೊತೆಗೆ ಸಚಿನ್ ಮಾತಾಡಿದ್ದಾರೆ ಎಂಬುದು ಮುಂಬೈ ಕ್ರಿಕೆಟ್ನಲ್ಲಿ ಬಹಿರಂಗ ರಹಸ್ಯವಾಗಿದೆ. ಹಾಗಿದ್ದರೆ ಸಲಹೆ ನೀಡಿದ ಈ ಲೆಜೆಂಡರಿ ಕ್ರಿಕೆಟಿಗರು ಮೂರ್ಖರೇ? ಇಷ್ಟೆಲ್ಲಾ ಬೆಂಬಲ ಇದ್ದರೂ ಆತನಲ್ಲಿ ಏನಾದರೂ ಬದಲಾವಣೆ ನೋಡುತ್ತಿದ್ದೀರಾ? ಎಂದು ಆಯ್ಕೆದಾರರು ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಪರ ಕೊನೆಯದಾಗಿ ಆಡಿದ್ದು 2021ರಲ್ಲಿ!
ಶಾ ಕೊನೆಯ ಬಾರಿಗೆ 3 ವರ್ಷಗಳ ಹಿಂದೆ ಅಂದರೆ ಜುಲೈ 2021ರಲ್ಲಿ ಭಾರತದ ಪರ ಆಡಿದ್ದರು. ಬಳಿಕ ಆತನನ್ನು ಕೇವಲ ಒಂದು ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. 2022ರ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗೆ ಟಿ20ಐ ತಂಡದಲ್ಲಿ ಸ್ಥಾನ ಪಡೆದಿದ್ದರು. ರಣಜಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ 379 ರನ್ ಗಳಿಸಿದ್ದ ಅವರು, ಕಳೆದ ವರ್ಷ ಏಕದಿನ ಕಪ್ನಲ್ಲಿ ನಾರ್ಥಾಂಪ್ಟನ್ಶೈರ್ ಪರ ಒಂದೆರಡು ಅದ್ಭುತ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಒಂದು ಶತಕ ಮತ್ತು ದ್ವಿಶತಕ ಗಳಿಸಿದ್ದರು. ಆದರೆ ಇನ್ನೇನು ಲಯಕ್ಕೆ ಮರಳುತ್ತಿದ್ದಾರೆ ಎನ್ನುವಾಗ ಗಾಯಗೊಂಡು, ಆಟದಿಂದಲೇ ಹಲವು ತಿಂಗಳ ಕಾಲ ದೂರ ಸರಿದರು.
ಕಳೆದ ತಿಂಗಳು ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಇರಾನಿ ಕಪ್ನಲ್ಲಿ ಮುಂಬೈ ಪರ 2ನೇ ಇನ್ನಿಂಗ್ಸ್ನಲ್ಲಿ 76 ರನ್ ಗಳಿಸಿದ್ದ ಪೃಥ್ವಿ ಶಾ, ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.