ವಿನೋದ್ ಕಾಂಬ್ಳಿ ಶೋಚನಿಯ ಸ್ಥಿತಿಗೆ ಸಚಿನ್ ತೆಂಡೂಲ್ಕರ್ ಕಾರಣರೇ? ಪರಮಾಪ್ತ ಗೆಳೆಯನ ಕೈ ಹಿಡಿಯಲಿಲ್ಲವೇ ದಿಗ್ಗಜ, ಹೇಗಿತ್ತು ಸ್ನೇಹ?
Sachin Tendulkar and Vinod Kambli: ಯಾರು ಏನೇ ಹೇಳಲಿ ವಿನೋದ್ ಕಾಂಬ್ಳಿ ಅವರ ಪ್ರಸ್ತುತ ಬಿಕ್ಕಟ್ಟಿಗೆ ಅವರನ್ನು ಹೊರತುಪಡಿಸಿ ಬೇರೆ ಯಾರೂ ದೂಷಿಸುವ ಅಗತ್ಯ ಇಲ್ಲ. ಅದರಲ್ಲೂ ಖಂಡಿತವಾಗಿ ಗೆಳೆಯ ಸಚಿನ್ ತೆಂಡೂಲ್ಕರ್ ಅಲ್ಲ!
ವಿನೋದ್ ಕಾಂಬ್ಳಿ.. ಟೀಮ್ ಇಂಡಿಯಾದ ಎಡಗೈ ಬ್ಯಾಟರ್. ಕ್ರಿಕೆಟ್ ಪ್ರವೇಶಿಸಿದಾಗ ಇವರು ಮುಟ್ಟಿದ್ದೆಲ್ಲಾ ಚಿನ್ನ. ಎದುರಾಳಿ ಬೌಲರ್ಗಳಿಗೆ ಕಾಂಬ್ಳಿ ಅಂದರೆ ಭೀತಿ. ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪರಮಾಪ್ತ ಗೆಳೆಯ! ಸುವರ್ಣ ಆರಂಭ ಪಡೆದಿದ್ದ ಕಾಂಬ್ಳಿ ವಿಶ್ವ ಶ್ರೇಷ್ಠ ಕ್ರಿಕೆಟಿಗನಾಗಬೇಕಿತ್ತು. ಆದರೆ, ಕುಡಿತದ ದಾಸನಾಗಿ ತನ್ನ ಜೀವನವನ್ನೇ ಕೆಡಿಸಿಕೊಂಡರು. ತನ್ನ ಆರಂಭದಲ್ಲೇ ಕ್ರಿಕೆಟ್ ಬದುಕನ್ನು ಮುಗಿಸಿದ! ಹೇಗಿದ್ದವನು ಹೇಗಾದ ನೋಡಿ ಕ್ರಿಕೆಟರ್ ವಿನೋದ್ ಕಾಂಬ್ಳಿ!
ಕಾಂಬ್ಳಿ ಅವರ ಇತ್ತೀಚಿನ ವಿಡಿಯೋವೊಂದು ನೋಡಿ ಕರುಳು ಕಿತ್ತು ಬಂತು. ತನ್ನ ಗೆಳೆಯ ಸಚಿನ್ ತೆಂಡೂಲ್ಕರ್ರನ್ನೇ ಗುರುತು ಹಿಡಿಯಲು ಕಷ್ಟಪಟ್ಟಿದ್ದು ನಿಜವಾಗಲೂ ನೋವು ಕೊಟ್ಟಿತು. ಶಾಲಾ ದಿನಗಳಿಂದ ಗೆಳೆಯರಾಗಿದ್ದ ಸಚಿನ್-ಕಾಂಬ್ಳಿ, ಕ್ರಿಕೆಟ್ ಲೋಕದಲ್ಲೂ ಗೆಳೆಯರಾಗಿ ಮಿಂಚಿದ್ದರು. ಹೀಗಿದ್ದ ಜೋಡಿ, ಬೇರ್ಪಟ್ಟರು. ಶಿಸ್ತು, ಅಶಿಸ್ತಿನ ನಡುವೆ ಒಬ್ಬರು ಆರಕ್ಕೇರಿದರೆ, ಮತ್ತೊಬ್ಬರು ಮೂರಕ್ಕೆ ಇಳಿದರು. ಹೌದು, ಸಚಿನ್ ವಿಶ್ವಶ್ರೇಷ್ಠನಾದರೆ, ಕಾಂಬ್ಳಿ ಜೀವನ ಹಾಳು ಮಾಡಿಕೊಂಡರು.
ವಿನೋದ್ ಮತ್ತು ಸಚಿನ್ ಸ್ನೇಹ ಶ್ರೀಕೃಷ್ಣ-ಕುಚೇಲನಿಗೆ ಹೋಲುತ್ತಿತ್ತು. ಇದ್ದರೆ ಇಂತಹ ಸ್ನೇಹ ಇರಬೇಕು ಎಂಬ ಮಾತು ಕ್ರಿಕೆಟ್ ಲೋಕದಲ್ಲಿ ಚಾಲ್ತಿಯಲ್ಲಿರುವಂತೆ ಮಾಡಿತು. ಎಲ್ಲರಿಗೆ ಒಂದು ಮಾದರಿಯಾಗಿತ್ತು. ಆದರೆ ಹೀಗಿದ್ದ ಜೋಡಿಯ ನಡುವೆ ಸಂಬಂಧ ಹಳಸಿತ್ತು. ಅದಕ್ಕೆ ಕಾರಣ ಬೇರೆ ಬೇರೆ ಇರಬಹುದು. ಆದರೆ ಪುಕಾರು ಎದ್ದಿದ್ದು, ಸಚಿನ್ ವಿರುದ್ಧ. ಸಚಿನ್ ಗೆಳೆಯನನ್ನು ನಿರ್ಲಕ್ಷಿಸಿದರು. ಆತನ ಕರಿಯರ್ ಹಾಳು ಮಾಡಿದ್ರು ಎಂದೆಲ್ಲಾ ವದಂತಿಗಳುಬ ಹಬ್ಬಿದವು.
ಆದರೆ ಕಾಂಬ್ಳಿ ಅವರ ಪ್ರಸ್ತುತ ಬಿಕ್ಕಟ್ಟಿಗೆ ತನ್ನನ್ನು ಹೊರತುಪಡಿಸಿ ಬೇರೆ ಯಾರನ್ನೂ ದೂಷಿಸುವ ಅಗತ್ಯ ಇಲ್ಲ. ಗೆಳೆಯರಾದರೂ ಸಚಿನ್ ಆಯ್ಕೆ ಮಾಡಿಕೊಂಡ ದಾರಿಯೇ ಬೇರೆ, ಕಾಂಬ್ಳಿ ಆಯ್ಕೆ ಮಾಡಿಕೊಂಡ ದಾರಿಯೇ ಬೇರೆ! ಸಚಿನ್ ಶಿಸ್ತಿನ ದಾರಿಯಲ್ಲಿ ನಡೆದರೆ, ಕಾಂಬ್ಳಿ ಅಶಿಸ್ತಿನ ದಾರಿಯಲ್ಲಿ ಹೆಜ್ಜೆ ಹಾಕಿ, ಕುಡಿತದ ದಾಸನಾದರು. ಎಲ್ಲಾ ಕೆಟ್ಟ ಚಟ ಅಳವಡಿಸಿಕೊಂಡರು. ಬೇಡವೆಂದರೂ ಯಾರ ಮಾತೂ ಕೇಳಲಿಲ್ಲ!
ಸಚಿನ್-ಕಾಂಬ್ಳಿ ಶಾಲಾ ದಿನಗಳಿಂದ ಭಾರತ ತಂಡಕ್ಕೆ...
ಇಬ್ಬರ ಶಾಲಾ ದಿನಗಳಲ್ಲಿ ಸ್ಥಾಪಿಸಲಾದ ಕ್ರಿಕೆಟ್ ಬಂಧವು ನಿಜವಾದ ಸ್ನೇಹವಾಗಿ ಅರಳಿತು. ಸೇಂಟ್ ಕ್ಸೇವಿಯರ್ ಕಾಲೇಜು ವಿರುದ್ಧ ಶಾರದಾಶ್ರಮ ಶಾಲೆಯ ಪರ ಸಚಿನ್-ಕಾಂಬ್ಳಿ ಜೋಡಿ ಬರೋಬ್ಬರಿ 664 ರನ್ಗಳ ಜೊತೆಯಾಟವಾಡಿತು. ಇದಾದ ಒಂದು ವರ್ಷದೊಳಗೆ, ಸಚಿನ್ 1989ರಲ್ಲಿ ಪಾಕಿಸ್ತಾನದಲ್ಲಿ 16 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆದರೆ ಕಾಂಬ್ಳಿ ಮೂರುವರೆ ವರ್ಷಗಳ ನಂತರ ಭಾರತ ತಂಡಕ್ಕೆ ಆಯ್ಕೆಯಾದರು.
1993ರ ಹೊತ್ತಿಗೆ ಭಾರತದ ಪರ ಜೊತೆಯಾಗಿ ಆಡುತ್ತಿದ್ದ ಇಬ್ಬರು, ಉತ್ತಮ ಪ್ರದರ್ಶನ ನೀಡುತ್ತಿದ್ದರು. ಕಾಂಬ್ಳಿ ಕ್ರಿಕೆಟ್ಗೆ ಕಾಲಿಟ್ಟ ತಮ್ಮ ಮೊದಲ ವರ್ಷದಲ್ಲಿ ಎರಡು ದ್ವಿಶತಕ ಬಾರಿಸಿದ್ದರು (ಇಂಗ್ಲೆಂಡ್ ವಿರುದ್ಧ 224, ಜಿಂಬಾಬ್ವೆ ವಿರುದ್ಧ 227 ರನ್). ಆದರೆ ಸಚಿನ್ 1999ರ ತನಕ ಸಚಿನ್ ದ್ವಿಶತಕ ದಾಖಲಿಸಿರಲಿಲ್ಲ. ಗೆಳೆಯ ಸಚಿನ್ರನ್ನೇ ಮೀರಿಸುವಷ್ಟರ ಮಟ್ಟಿಗೆ ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದರು ಕಾಂಬ್ಳಿ.
ವಿಭಿನ್ನ ದಿಕ್ಕುಗಳಲ್ಲಿ ಸಾಗಿದ ಇಬ್ಬರ ಕ್ರಿಕೆಟ್ ಬದುಕು
ಕಾಂಬ್ಳಿ-ಸಚಿನ್ ಸ್ನೇಹ ಕ್ರಿಕೆಟ್ನಲ್ಲಿ ಗಾಢವಾಗುತ್ತಿತ್ತು. ಆದರೆ ಕಾಂಬ್ಳಿ ಅವರ ಮೈದಾನದ ಹೊರಗಿನ ಅತಿರೇಕಗಳು ಪ್ರದರ್ಶನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದವು. 1996ರ ವಿಶ್ವಕಪ್ ಮತ್ತು ಅದರ ನಂತರ ಅವರ ತಡರಾತ್ರಿಯ ಅತಿರೇಕಗಳು ಹೆಚ್ಚಾದವು. ಕುಡಿತವನ್ನೇ ಚಟ ಮಾಡಿಕೊಂಡರು. ಇದು ಅವರನ್ನು ದುರ್ಬಲರನ್ನಾಗಿಸಿಬಿಟ್ಟಿತು. ಬ್ಯಾಟಿಂಗ್ ಟೆಕ್ನಿಕ್, ಸ್ಕಿಲ್ಸ್, ಕ್ರಿಕೆಟ್ ಮೇಲಿನ ಬದ್ಧತೆಯ ಬಗ್ಗೆ ಅವರ ಮೋಹವು ಅವನತಿಗೆ ಮತ್ತಷ್ಟು ವೇಗ ನೀಡಿತು.
ಇಲ್ಲಿಂದ ಕಾಂಬ್ಳಿ ಕ್ರಿಕೆಟ್ ಬದುಕು ಅಂತ್ಯದತ್ತ ಸಾಗಿತು. 17 ಟೆಸ್ಟ್ ಪಂದ್ಯಗಳಲ್ಲಿ 54.20 ಸರಾಸರಿ ಹೊಂದಿದ್ದರೂ ನವೆಂಬರ್ 1995ರ ನಂತರ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅವಕಾಶ ಪಡೆಯಲಿಲ್ಲ. ಆದರೆ, ಸಚಿನ್ ಅವರ ವೃತ್ತಿಜೀವನದಲ್ಲಿ 200 ಟೆಸ್ಟ್, 51 ಟೆಸ್ಟ್ ಶತಕ, 100 ಅಂತಾರಾಷ್ಟ್ರೀಯ ಶತಕ, ವಿಶ್ವಕಪ್ ಕೂಡ ಗೆದ್ದರು. ಇನ್ನೂ ಅದೆಷ್ಟೋ ಹೇಳಲಾಗದಷ್ಟು ಸಾಧನೆ ಮಾಡಿದರು. ರೋಲ್ ಮಾಡೆಲ್ ಆದರು.
ಕಾಂಬ್ಳಿ ಅವರ ಕ್ರಿಕೆಟ್ ವೃತ್ತಿಜೀವನವು ಇದಕ್ಕೆ ವ್ಯತಿರಿಕ್ತವಾಗಿತ್ತು. ಏನೂ ಈಡೇರದ ಭರವಸೆಯ ಕಥೆಯಾಗಿ ಉಳಿಯಿತು. ತಾನು ಕುಡಿತದ ಚಟಕ್ಕೆ ಒಳಗಾದಂತೆ ಸಚಿನ್ ಜೊತೆಗಿನ ಸ್ನೇಹವೂ ದೂರವಾಯಿತು. ಯಾರಿಗೂ ಬೇಡವಾದ ಕಥೆಯಾಗಿ ಉಳಿದುಬಿಟ್ಟರು ಕಾಂಬ್ಳಿ. ತಾನೇ ಮಾಡಿಕೊಂಡ ತಪ್ಪುಗಳಿಂದ ತನ್ನ ಕ್ರಿಕೆಟ್ ಜೀವನ ಹಾಳಾಯಿತು. ಯಾರೂ ಸಹ ಅವರನ್ನು ಹಾಳು ಮಾಡಲಿಲ್ಲ. ಆದರೆ ಸಚಿನ್ ಶಿಸ್ತು ಅಳವಡಿಸಿಕೊಂಡು ವಿಶ್ವ ಸಾಮ್ರಾಟನಾದರು.
1996ರಲ್ಲಿ ಈಡನ್ ಗಾರ್ಡನ್ಸ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಭಾರತದ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಪ್ರೇಕ್ಷಕರ ತೊಂದರೆಯಿಂದ ರದ್ದುಗೊಳಿಸಲಾಗಿತ್ತು. ಬಳಿಕ ಆ ಪಂದ್ಯದ ಗೆಲುವನ್ನು ಲಂಕಾಗೆ ನೀಡಿದ ನಂತರ ಕಾಂಬ್ಳಿ ಕಣ್ಣೀರು ಹಾಕಿದ್ದರು. ಹಲವು ವರ್ಷಗಳಿಂದ, ಕಾಂಬ್ಳಿ ಮದ್ಯದ ಅಮಲಿನಲ್ಲಿ ಯಾವುದೇ ನಿಯಂತ್ರಣವಿಲ್ಲದೆ, ಯಾವುದೇ ನಿಯಂತ್ರಣವಿಲ್ಲದೆ ತಿರುಗಾಡುತ್ತಿರುವ ವಿಡಿಯೋಗಳು ಹೊರಬಂದಿವೆ.
ಕಾಂಬ್ಳಿ ನೆರವಿಗೆ ನಿಂತಿದ್ದೇ ಸಚಿನ್ ತೆಂಡೂಲ್ಕರ್
ಇದಾದ ಬಳಿಕ ಸಚಿನ್ ಅವರ ಸ್ನೇಹವನ್ನು ಸಂಪೂರ್ಣ ಕಳೆದುಕೊಂಡ ಕಾಂಬ್ಳಿಗೆ ಮತ್ತೆ ಅವರಿಂದ ಬೆಂಬಲವೇ ಸಿಗಲಿಲ್ಲ. ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ವಿನೋದ್ ಕಾಂಬ್ಳಿಗೆ ಮತ್ತೆ ನೆರವಾಗಿದ್ದು ಸಚಿನ್. 2017ರಲ್ಲಿ ಕಾಂಬ್ಳಿಯನ್ನು ಕ್ರಿಕೆಟ್ಗೆ ಮರಳಲು ಪ್ರೋತ್ಸಾಹಿಸಿದ್ದು ತೆಂಡೂಲ್ಕರ್. ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಅಕಾಡೆಮಿಯಲ್ಲಿ ಕಾಂಬ್ಳೆಗೆ ಕೋಚಿಂಗ್ ಕೆಲಸ ಕೊಡಿಸಿದರು. 2018ರಲ್ಲಿ ಕಾಂಬ್ಳಿ ಉದ್ಘಾಟನಾ ಮುಂಬೈ ಟಿ20 ಪ್ರೀಮಿಯರ್ ಲೀಗ್ನ ರನ್ನರ್ ಅಪ್ ಸ್ಥಾನ ಪಡೆದ ಶಿವಾಜಿ ಪಾರ್ಕ್ ಲಯನ್ಸ್ಗೆ ಮಾರ್ಗದರ್ಶಕರಾಗಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಸಚಿನ್-ಕಾಂಬ್ಳಿ ಅಪ್ಪುಗೆ ನಿಜವಾಗಲೂ ಎಲ್ಲರನ್ನೂ ಭಾವುಕವಾಗಿಸಿತ್ತು. ಅಲ್ಲಿ, ಇಬ್ಬರು ಒಟ್ಟಿಗೆ ಆಡಿದ, ಶಾಲಾ ದಿನಗಳಲ್ಲಿ ಬ್ಯಾಟಿಂಗ್ ಮಾಡಿದ ಕ್ಷಣಗಳನ್ನು ನೆನದರು. ಆದಾಗ್ಯೂ, ಕಾಂಬ್ಳಿ ಅವರಿಗೆ ಅವಕಾಶದ ಬಾಗಿಲುಗಳು ಸಾಕಷ್ಟು ತೆರೆದರೂ ಅದನ್ನು ಉಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ನಿಷ್ಠೆಯೊಂದಿಗೆ, ನೇರ ಮತ್ತು ಸಂಕುಚಿತತೆಗೆ ಹೆಚ್ಚು ಕಾಲ ಅಂಟಿಕೊಳ್ಳಲು ಸಾಧ್ಯವಾಗಲಿಲ್ಲ.
ಕಾಂಬ್ಳಿ ಅವರಿಗೆ ಖ್ಯಾತಿ, ಯಶಸ್ಸು, ಸ್ಥಾನಮಾನ ಎಲ್ಲವೂ ಇತ್ತು. ಬ್ಯಾಂಕ್ ಬ್ಯಾಲೆನ್ಸ್ ಏರಿಸಿಕೊಳ್ಳುವ ಎಲ್ಲಾ ಅವಕಾಶಗಳು ಮುಂದಿದ್ದವು. ಅದನ್ನು ಉಪಯೋಗಿಸಿಕೊಳ್ಳಲಿಲ್ಲ. ಒಂದು ವೇಳೆ ಶಿಸ್ತಿನ ದಾರಿಯಲ್ಲಿ ಸಾಗಿದ್ದರೆ ಸಚಿನ್ರನ್ನೇ ಮೀರಿಸುತ್ತಿದ್ದರು ಎಂಬುದು ಕ್ರಿಕೆಟ್ ತಜ್ಞರ ಮಾತುಗಳು. ಆದರೆ, ಕೆಟ್ಟ ಚಟಗಳಿಂದ ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕಾಂಬ್ಳಿ, ಪ್ರಸ್ತುತ ಹಲವು ರೋಗಗಳಿಂದ ನರಳುತ್ತಿದ್ದಾರೆ. ಕುಟುಂಬ ಬೆಂಬಲವೂ ಇಲ್ಲದೆ ಪರದಾಡುತ್ತಿದ್ದಾರೆ...