ಕನ್ನಡ ಸುದ್ದಿ  /  Cricket  /  Sam Curran Liam Livingstone Helps Punjab Kings To Beat Delhi Capitals In Ipl 2024 Indian Premier League Dc Vs Pbks Jra

IPL 2024: ಸ್ಯಾಮ್‌ ಕರನ್‌, ಲಿವಿಂಗ್‌ಸ್ಟನ್‌ ಅಬ್ಬರಕ್ಕೆ ಬೆದರಿದ ಡೆಲ್ಲಿ; ಗೆಲುವಿನೊಂದಿಗೆ ಪಂಜಾಬ್‌ ಕಿಂಗ್ಸ್‌ ಶುಭಾರಂಭ

DC vs PBKS: ಚಂಡೀಗಢದಲ್ಲಿ ನಡೆದ ಐಪಿಎಲ್‌ 2024ರ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ ಆಂಗ್ಲ ಬ್ಯಾಟರ್‌ಗಳಾದ ಸ್ಯಾಮ್‌ ಕರನ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟನ್‌ ತಂಡದ ಗೆಲುವಿಗೆ ನೆರವಾಗಿದ್ದಾರೆ.

ಸ್ಯಾಮ್‌ ಕರನ್‌, ಲಿವಿಂಗ್‌ಸ್ಟನ್‌
ಸ್ಯಾಮ್‌ ಕರನ್‌, ಲಿವಿಂಗ್‌ಸ್ಟನ್‌ (AP)

ಹೊಸ ತವರು ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಶುಭಾರಂಭ ಮಾಡಿದೆ. ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ವಿರುದ್ಧದ ಮೊದಲ ಪಂದ್ಯದಲ್ಲಿ, ಶಿಖರ್‌ ಧವನ್‌ ಪಡೆ 4 ವಿಕೆಟ್‌ಗಳ ಜಯ ಸಾಧಿಸಿದೆ. ಇಂಗ್ಲೆಂಡ್‌ ಆಲ್‌ರೌಂಡರ್‌ಗಳಾದ ಸ್ಯಾಮ್‌ ಕರನ್‌ ಮತ್ತು ಲಿವಿಂಗ್‌ಸ್ಟನ್‌ ಸ್ಫೋಟಕ ಆಟದ ನೆರವಿನೊಂದಿಗೆ ತಂಡವು ಸುಲಭವಾಗಿ ಗೆಲುವಿನ ನಗೆ ಬೀರಿದೆ.

ಚಂಡೀಗಢದ ಮಹಾರಾಜ ಯಾದವಿಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ, 9 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌, 19.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 177 ರನ್‌ ಗಳಿಸಿ ಗುರಿ ತಲುಪಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್‌ ಮಾರ್ಷ್‌ ತಂಡಕ್ಕೆ ಉತ್ತಮ ಆರಂಭ ಕೊಟ್ಟರು. ವಾರ್ನರ್‌ 29 ರನ್‌ ಗಳಿಸಿದರೆ, ಮಿಚೆಲ್ ಮಾರ್ಷ್ 20 ರನ್‌ ಕಲೆ ಹಾಕಿ ಔಟಾದರು. ಶಾಯ್ ಹೋಪ್ 25 ಎಸೆತಗಳಲ್ಲಿ 33 ರನ್ ಸಿಡಿಸಿದರು. 14 ತಿಂಗಳ ಬಳಿಕ ಮೈದಾನಕ್ಕಿಳಿದ ಡೆಲ್ಲಿ ನಾಯಕ ರಿಷಭ್ ಪಂತ್ 18 ರನ್ ಸಿಡಿಸಿ ವಿಕೆಟ್‌ ಒಪ್ಪಿಸಿದರು. ರಿಕಿ ಭುಯಿ 3 ರನ್‌ ಗಳಿಸಿ ಔಟಾದರೆ, ಟ್ರಿಸ್ಟಾನ್ ಸ್ಟಬ್ಸ್ 5 ರನ್‌ ಗಳಿಸಲಷ್ಟೇ ಶಕ್ತರಾದರು. ಅಕ್ಷರ್ ಪಟೇಲ್ 21 ರನ್ ಕಲೆ ಹಾಕಿದರೆ, ಸುಮಿತ್ ಕುಮಾರ್ ಕೂಡಾ 2 ರನ್‌ ಗಳಿಸಿ ನಿರ್ಗಮಿಸಿದರು.

ಇದನ್ನೂ ಓದಿ | Video: ಹರ್ಷಲ್ ಪಟೇಲ್ ಓವರ್‌ನಲ್ಲಿ 25 ರನ್‌ ಸಿಡಿಸಿದ ಅಭಿಷೇಕ್ ಪೊರೆಲ್; ಇಂಪ್ಯಾಕ್ಟ್‌ ಮೂಡಿಸಿದ 21ರ ಹರೆಯದ ಡೆಲ್ಲಿ ಆಟಗಾರ

ಇಂಪ್ಯಾಕ್ಸ್‌ ಸಬ್ಸ್ಟಿಟ್ಯೂಟ್ ಆಗಿ ಕಣಕ್ಕಿಳಿದ 21 ವರ್ಷದ ಯುವ ಆಟಗಾರ ಅಭಿಷೇಕ್ ಪೊರೆಲ್ ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದರು. ಹರ್ಷಲ್ ಪಟೇಲ್‌ ಎಸೆದ ಕೊನೆಯ ಓವರ್‌ನಲ್ಲಿ ಬರೋಬ್ಬರಿ 25 ರನ್ ಕಲೆ ಹಾಕಿದರು. ಎದುರಿಸಿದ 10 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಎರಡು ಸ್ಫೋಟಕ ಸಿಕ್ಸರ್‌ಗಳ ನೆರವಿಂದ ಅಜೇಯ 32 ರನ್ ಸಿಡಿಸಿದರು.ಹೀಗಾಗಿ ಡೆಲ್ಲಿ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲು ಸಾಧ್ಯವಾಯ್ತು.

ಕರನ್‌, ಲಿವಿಂಗ್‌ಸ್ಟನ್‌ ಅಬ್ಬರದಾಟ

ಬೃಹತ್‌ ಮೊತ್ತ ಚೇಸಿಂಗ್‌ಗಿಳಿದ ಪಂಜಾಬ್‌ ಆರಂಭದಿಂದಲೇ ಅಬ್ಬರದ ಆಟವಾಡಿತು. ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದರೂ ರನ್‌ ರೇಟ್‌ ಕಾಪಾಡಿಕೊಳ್ಳುತ್ತಾ ಸಾಗಿತು. ಮೊದಲ ಓವರ್‌ನಿಂದಲೇ ಸಿಡಿದ‌ ನಾಯಕ ಶಿಖರ್ ಧವನ್‌ 22 ರನ್‌ ಗಳಿಸಿದರು. ಆಂಗ್ಲ ಆಟಗಾರ ಬೇರ್‌ಸ್ಟೋ 9 ರನ್‌ ಗಳಿಸಿದ್ದಾಗ ದುರದೃಷ್ಟಕರ ರೀತಿಯಲ್ಲಿ ರನೌಟ್‌ ಆದರು. ಪ್ರಭ್‌ಸಿಮ್ರಾನ್‌ ಸಿಂಗ್‌ 26 ರನ್‌ ಗಳಿಸಿದರೆ, ಜಿತೇಶ್‌ ಶರ್ಮಾ 9 ರನ್‌ ಗಳಿಸಿ ನಿರಾಶೆ ಮೂಡಿಸಿದರು.

ಈ ವೇಳೆ ಒಂದಾದ ಆಂಗ್ಲ ಆಲ್‌ರೌಂಡರ್‌ಗಳಾದ ಸ್ಯಾಮ್‌ ಕರನ್‌ ಹಾಗೂ ಲಿವಿಂಗ್‌ಸ್ಟನ್‌ ಜವಾಬ್ದಾರಿಯುತ ಆಟವಾಡಿದರು. ಆಕರ್ಷಕ ಅರ್ಧಶತಕ ಸಿಡಿಸಿದ ಕರನ್‌, ಗೆಲುವಿನ ಅಂಚಿನಲ್ಲಿ ಔಟಾದರು. 47 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 63 ರನ್‌ ಗಳಿಸಿದರು. ಉತ್ತಮ ಬ್ಯಾಟಿಂಗ್‌ ನಡೆಸಿದ ಲಿವಿಂಗ್‌ಸ್ಟನ್‌ 21 ಎಸೆತಗಳಲ್ಲಿ 3 ಸಿಕ್ಸರ್‌ ಸಹಿತ ಅಜೇಯ 38 ರನ್‌ ಗಳಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಭ್ ಪಂತ್(w/c), ರಿಕಿ ಭುಯಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ.

ಪಂಜಾಬ್ ಕಿಂಗ್ಸ್ ಆಡುವ ಬಳಗ

ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ಶಶಾಂಕ್ ಸಿಂಗ್.