ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿ ಕುಸಿದ ರಾಜಸ್ಥಾನ್ ರಾಯಲ್ಸ್; ಎದ್ದುಬಿದ್ದು ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್
PBKS vs RR Highlights: 17ನೇ ಆವೃತ್ತಿಯ ಐಪಿಎಲ್ನ 65ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿತು.
ಸ್ಯಾಮ್ ಕರನ್ ಅವರ ಆಲ್ರೌಂಡ್ ಆಟಕ್ಕೆ ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ತಲೆಬಾಗಿತು. ಆದರೆ ಅಗ್ರಸ್ಥಾನಕ್ಕೆ ಏರುವ ಹುಮ್ಮಸ್ಸಿನಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಸತತ ನಾಲ್ಕನೇ ಸೋಲಿಗೆ ಶರಣಾಗಿದೆ. ಟೂರ್ನಿಯ ಆರಂಭದಲ್ಲಿ ಸತತ ಗೆಲುವುಗಳೊಂದಿಗೆ ಮುನ್ನುಗ್ಗಿದ ಆರ್ಆರ್, ಕೊನೆಯ ಪಂದ್ಯಗಳಲ್ಲಿ ಸತತ ಸೋಲುಗಳು ಕಾಣುತ್ತಿದೆ. ಪಿಬಿಕೆಎಸ್ ತನ್ನ ಔಪಚಾರಿಕ ಪಂದ್ಯದಲ್ಲಿ ದಿಗ್ವಿಜಯ ಸಾಧಿಸಿ ಅಂಕಪಟ್ಟಿಯಲ್ಲಿ 10 ರಿಂದ 9ನೇ ಸ್ಥಾನಕ್ಕೇರಿದೆ.
ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಆರ್, ಪಿಬಿಕೆಎಸ್ ಬೌಲರ್ಗಳ ದಾಳಿಗೆ ತತ್ತರಿಸಿತು. ರಿಯಾನ್ ಪರಾಗ್ (28) ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, 18.5 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯದ್ಭುತ ಪ್ರದರ್ಶನ ನೀಡಿದ ಸ್ಯಾಮ್ ಕರನ್ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.
ಸ್ಯಾಮ್ ಕರನ್ ಮಿಂಚು
145 ರನ್ಗಳ ಗುರಿ ಬೆನ್ನಟ್ಟಿದ ಪಿಬಿಕೆಎಸ್ಗೆ ಆರಂಭಿಕ ವಿಘ್ನ ಎದುರಾಯಿತು. ಪ್ರಭುಸಿಮ್ರಾನ್ ಸಿಂಗ್ (6), ಜಾನಿ ಬೈರ್ಸ್ಟೋ (14), ರಿಲಿ ರೊಸೊ (22) ಮತ್ತು ಶಶಾಂಕ್ ಸಿಂಗ್ (0) ಬೇಗನೇ ವಿಕೆಟ್ ಒಪ್ಪಿಸಿದರು. ಆವೇಶ್ ಖಾನ್ ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದು ಆರ್ಆರ್ಗೆ ಮುನ್ನಡೆ ತಂದುಕೊಟ್ಟರು. ಆದರೆ ಸಂಕಷ್ಟದಲ್ಲಿದ್ದ ಹಂತದಲ್ಲಿ ಸ್ಯಾಮ್ ಕರನ್-ಜಿತೇಶ್ ಶರ್ಮಾ ಅರ್ಧಶತಕ ಜೊತೆಯಾಟವಾಡಿದರು. ಟೂರ್ನಿಯುದ್ದಕ್ಕೂ ನಿರಾಸೆ ಮೂಡಿಸಿದ್ದ ಜಿತೇಶ್ ಶರ್ಮಾ, ಭರವಸೆ ಮೂಡಿಸಿ 22ಕ್ಕೆ ಆಟ ಮುಗಿಸಿದರು.
ಯುಜ್ವೇಂದ್ರ ಚಹಲ್ ಈ ಜೋಡಿಯನ್ನು ಬೇರ್ಪಡಿಸಿತು. ಆದರೆ ಸ್ಯಾಮ್ ಕರನ್ ತನ್ನ ಹೋರಾಟ ಮುಂದುವರೆಸಿದರು. ಅಲ್ಲದೆ, ಬೊಂಬಾಟ್ ಅರ್ಧಶತಕವನ್ನೂ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕರನ್ 41 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 63 ರನ್ ಸಿಡಿಸಿದರು. ಕೊನೆಯಲ್ಲಿ ಆಶುತೋಷ್ ಶರ್ಮಾ ಕೂಡ ಅಜೇಯ 17 ರನ್ ಸಿಡಿಸಿದರು. ಚಹಲ್, ಆವೇಶ್ ಖಾನ್ ತಲಾ 2 ವಿಕೆಟ್ ಪಡೆದರು.
ರಿಯಾನ್ ಪರಾಗ್ ಮತ್ತೊಮ್ಮೆ ಉತ್ತಮ ಪ್ರದರ್ಶನ
ಟಾಸ್ ಗೆದ್ದು ರಾಜಸ್ಥಾನ್ ರಾಯಲ್ಸ್, ಮೊದಲು ಬ್ಯಾಟಿಂಗ್ ನಡೆಸಿತು. ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿದ್ದ ಆರ್ಆರ್ ನೀಡಿದ್ದು, ನೀರಸ ಪ್ರದರ್ಶನ. ಜೈಸ್ವಾಲ್ ಮೊದಲ ಓವರ್ನಲ್ಲೇ ಕ್ಲೀನ್ ಬೋಲ್ಡ್ ಆದರೆ, ಜೋಸ್ ಬಟ್ಲರ್ ಅಲಭ್ಯತೆಯಲ್ಲಿ ಕಣಕ್ಕಿಳಿದ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಅವರು ರನ್ ಗಳಿಸಲು ಪರದಾಡಿದರು. 23 ಎಸೆತಗಳಲ್ಲಿ 18 ರನ್ ಗಳಿಸಿ ರಾಹುಲ್ ಚಹರ್ ಬೌಲಿಂಗ್ನಲ್ಲಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ ಸಹ 18ಕ್ಕೆ ಆಟ ಮುಗಿಸಿದರು.
ಅಗ್ರ ಕ್ರಮಾಂಕದ ವೈಫಲ್ಯ ನಂತರ ರಿಯಾನ್ ಪರಾಗ್ ಮತ್ತು 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್ ಅವರು ಚೇತರಿಕೆ ನೀಡುವ ಯತ್ನಕ್ಕೆ ಕೈ ಹಾಕಿದರು. ನಾಲ್ಕನೇ ವಿಕೆಟ್ಗೆ 50 ರನ್ಗಳ ಸೊಗಸಾದ ಜೊತೆಯಾಟ ಮೂಡಿಬಂತು. ಇದರ ನಡುವೆಯೂ ಪಂಜಾಬ್ ಬೌಲರ್ಗಳು ಮೇಲುಗೈ ಸಾಧಿಸಿದರು. ಆದರೆ ಪರಾಗ್ (48)ಶತಕದ ಅಂಚಿನಲ್ಲಿ ಎಡವಿದರೆ, ಅಶ್ವಿನ್ ಉಪಯುಕ್ತ 28 ರನ್ ಕಾಣಿಕೆ ನೀಡಿದರು.
ಧ್ರುವ್ ಜುರಲ್ (0), ರೊವ್ಮನ್ ಪೊವೆಲ್ (4), ಡೊನೊವನ್ ಫೆರೆರಾ (7) ತೀವ್ರ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಟ್ರೆಂಟ್ ಬೋಲ್ಟ್ 12 ರನ್ಗಳ ಕೊಡುಗೆ ನೀಡಿದರು. 144 ರನ್ಗಳಿಗೆ ಕಟ್ಟಿ ಹಾಕಿದ ಪಿಬಿಕೆಎಸ್ ಪರ ಸ್ಯಾಮ್ ಕರನ್, ಹರ್ಷಲ್ ಪಟೇಲ್, ರಾಹುಲ್ ಚಹರ್ ತಲಾ 2, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್ ತಲಾ 1 ವಿಕೆಟ್ ಪಡೆದರು.