ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದೊಡ್ಡ ಪ್ರಮಾದ; ದಂಡದ ಭೀತಿಗೆ ಸಿಲುಕಿದ ಸ್ಯಾಮ್ ಕಾನ್ಸ್ಟಾಸ್, ಅಂಥ ದೊಡ್ಡ ತಪ್ಪೇನು ಮಾಡಿದ್ರು?
Sam Konstas: ಭಾರತ ತಂಡದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ ದಂಡದ ಭೀತಿಗೆ ಸಿಲುಕಿದ್ದಾರೆ. ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದೊಡ್ಡ ಪ್ರಮಾದವೊಂದನ್ನು ಎಸಗಿ ಅಪಾಯ ಮೈಮೇಲೆ ಎಳೆದುಕೊಂಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆಗೈದು ಅದ್ಭುತ ಅರ್ಧಶತಕದ (60) ಮೂಲಕ ಸಂಚಲನ ಸೃಷ್ಟಿಸಿರುವ ಆಸ್ಟ್ರೇಲಿಯಾ 19 ವರ್ಷದ ಸ್ಯಾಮ್ ಕಾನ್ಸ್ಟಾಸ್ಗೆ (Sam Konstas) ಇದೀಗ ದಂಡದ ಭೀತಿ ಎದುರಾಗಿದೆ. ಭಾರತದ ಬೌಲರ್ಗಳ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಾನ್ಸ್ಟಾಸ್, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಆಸ್ಟ್ರೇಲಿಯಾದ 2ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಹೊರತಾಗಿಯೂ ಯುವ ಆಟಗಾರ ಇದೀಗ ದಂಡದ ಭೀತಿಗೆ ಸಿಲುಕಿದ್ದಾರೆ.
ವಿಶ್ವದ ಘಟಾನುಘಟಿ ಬ್ಯಾಟರ್ಗಳಿಗೇ ಭಯ ಹುಟ್ಟಿಸಿರುವ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ (Jasprit Bumrah) ಬೌಲಿಂಗ್ನಲ್ಲಿ ರಿವರ್ಸ್ ಸ್ಕೂಪ್ ಮಾಡಿ ಗಮನ ಸೆಳೆದ ಕಾನ್ಸ್ಟಾಸ್, ಒಂದೇ ಓವರ್ನಲ್ಲಿ 18 ರನ್ ಚಚ್ಚಿದರು. 65 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 60 ರನ್ ಬಾರಿಸಿದ ಆಸೀಸ್ ಆಟಗಾರ ಸ್ಯಾಮ್, ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ, ತಾನು ಸಿಡಿಸಿದ 60 ರನ್ಗಳ ಪೈಕಿ ಜಸ್ಪ್ರೀತ್ ಬುಮ್ರಾ ಹಾಕಿದ ಬೌಲಿಂಗ್ನಲ್ಲೇ 34 ರನ್ (33 ಎಸೆತಗಳಲ್ಲಿ) ಬಂದಿರುವುದು ವಿಶೇಷ. ಆ ಮೂಲಕ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ.
ಸ್ಯಾಮ್ ಕಾನ್ಸ್ಟಾಸ್ಗೆ ದಂಡದ ಭೀತಿಯೇಕೆ?
ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾನ್ಸ್ಟಾಸ್, ಆಫ್ ದಿ ಫೀಲ್ಡ್ನಲ್ಲಿ ಅಂದರೆ ಮೈದಾನದ ಹೊರಗೆ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬರಾದ ಕಾನ್ಸ್ಟಾಸ್ ತಾನು ಔಟಾದ ಬಳಿಕ ದೊಡ್ಡ ಪ್ರಮಾದವೊಂದನ್ನು ಎಸಗಿದ್ದಾರೆ. ಅವರು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಸೆಲ್ಫಿ, ಆಟೋಗ್ರಾಫ್ ನೀಡುವ ಮೂಲಕ ಐಸಿಸಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕಾನ್ಸ್ಟಾಸ್ ತನ್ನ ಚೊಚ್ಚಲ ಪಂದ್ಯದಲ್ಲೇ ಇಂತಹ ತಪ್ಪನ್ನು ಮಾಡಿದ್ದು, ಅದಕ್ಕಾಗಿ ಶಿಕ್ಷೆಗೆ ಗುರಿಯಾಗಬಹುದು ಎಂದು ಹೇಳಲಾಗಿದೆ.
ಐಸಿಸಿ ನಿಯಮ ಹೇಳುವುದೇನು?
ಕಾನ್ಸ್ಟಾಸ್ ಔಟ್ ಆದ ನಂತರ ಡಗೌಟ್ ಬಳಿ ಚಾನೆಲ್-7ಗೆ ಸಂದರ್ಶನ ನೀಡುತ್ತಿದ್ದರು. ಸಂದರ್ಶನ ಮುಗಿದ ಬೆನ್ನಲ್ಲೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು, ಅವರ ಹೆಸರನ್ನು ಕೂಗಿ ತಮ್ಮ ಕಡೆಗೆ ಕರೆದರು. ಅಲ್ಲಿಗೆ ತೆರಳಿದ ಸ್ಯಾಮ್ ಅಭಿಮಾನಿಯ ಫೋನ್ ಅನ್ನು ಕೈಗೆ ಪಡೆದು ಸೆಲ್ಫಿ ತೆಗೆದುಕೊಂಡರು. ಇದು ನಿಯಮಗಳಿಗೆ ವಿರುದ್ಧವಾಗಿದೆ. ಐಸಿಸಿ ಭ್ರಷ್ಟಾಚಾರ ವಿರೋಧಿ ನಿಯಮಗಳ ಪ್ರಕಾರ, ಆಟದ ಮಧ್ಯೆ ಯಾವುದೇ ಆಟಗಾರ ಅಥವಾ ಪಂದ್ಯದ ಅಧಿಕಾರಿ ಯಾರನ್ನೂ ಭೇಟಿ ಮಾಡುವಂತಿಲ್ಲ. ಇದಕ್ಕೆ ಭ್ರಷ್ಟಾಚಾರ-ವಿರೋಧಿ ಮ್ಯಾನೇಜರ್ ಅನುಮತಿ ಅಗತ್ಯ.
ಆಟಗಾರರು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಆಟಗಾರರು ಮತ್ತು ಅಧಿಕಾರಿಗಳಿಗೆ ಗೊತ್ತುಪಡಿಸಿದ ಪ್ರದೇಶ (Players and Match Officials Areas-PMOA) ತೊರೆಯುವಂತಿಲ್ಲ. ಪಂದ್ಯದ ನಡುವೆ ಯಾವುದೇ ಆಟಗಾರರು ಮೊಬೈಲ್ ಫೋನ್ ಅಥವಾ ಯಾವುದೇ ರೀತಿಯ ಸಂವಹನ ಸಾಧನ (ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಸಾಧನ) ಬಳಸುವಂತಿಲ್ಲ. ಇದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಅನುಮತಿ ಪಡೆದು ಪಂದ್ಯದ ಪ್ರದೇಶ ತೊರೆಯಲು ಅವಕಾಶ ಇದೆ. ಇಲ್ಲದಿದ್ದರೆ ದಂಡಕ್ಕೆ ಗುರಿಯಾಗಬಹುದು. ಇದೀಗ ಕಾನ್ಸ್ಟಾಸ್ ಸಹ ನಿಯಮ ಉಲ್ಲಂಘಿಸಿರುವುದು ಸಾಬೀತಾದರೆ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.