ಸ್ಕಾಟ್ ಬೋಲ್ಯಾಂಡ್ ಇನ್, ಹೇಜಲ್​ವುಡ್ ಔಟ್-ಟ್ರಾವಿಸ್ ಹೆಡ್ ಡೌಟ್; 4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಕಾಟ್ ಬೋಲ್ಯಾಂಡ್ ಇನ್, ಹೇಜಲ್​ವುಡ್ ಔಟ್-ಟ್ರಾವಿಸ್ ಹೆಡ್ ಡೌಟ್; 4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ Xi

ಸ್ಕಾಟ್ ಬೋಲ್ಯಾಂಡ್ ಇನ್, ಹೇಜಲ್​ವುಡ್ ಔಟ್-ಟ್ರಾವಿಸ್ ಹೆಡ್ ಡೌಟ್; 4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ XI

Australias Likely XI: ಟೀಮ್ ಇಂಡಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗುವ ನಿರೀಕ್ಷೆ ಇದೆ. ಏಕೆಂದರೆ ಜೋಶ್ ಹೇಜಲ್​ವುಡ್ ಸರಣಿಯಿಂದ ಹೊರಬಿದ್ದಿದ್ದು, ಅವರ ಸ್ಥಾನವನ್ನು ಸ್ಕಾಟ್ ಬೋಲ್ಯಾಂಡ್ ತುಂಬಲಿದ್ದಾರೆ ಎಂದು ವರದಿಯಾಗಿದೆ.

ಸ್ಯಾಮ್ ಕೊಂಟಾಸ್, ಸ್ಕಾಟ್ ಬೋಲ್ಯಾಂಡ್ ಇನ್, ಹೇಜಲ್​ವುಡ್ ಔಟ್-ಟ್ರಾವಿಸ್ ಹೆಡ್ ಡೌಟ್; 4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ XI
ಸ್ಯಾಮ್ ಕೊಂಟಾಸ್, ಸ್ಕಾಟ್ ಬೋಲ್ಯಾಂಡ್ ಇನ್, ಹೇಜಲ್​ವುಡ್ ಔಟ್-ಟ್ರಾವಿಸ್ ಹೆಡ್ ಡೌಟ್; 4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ XI

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy 2025) ಬ್ರಿಸ್ಬೇನ್ ಟೆಸ್ಟ್ ಪಂದ್ಯ ಡ್ರಾ ಸಾಧಿಸಿದ ಕಾರಣ ಸರಣಿಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗದೆ ಆಸ್ಟ್ರೇಲಿಯಾ (Australia Cricket Team) ತೀವ್ರ ನಿರಾಸೆ ಅನುಭವಿಸಿತು. ಗಬ್ಬಾ ಮೈದಾನದಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯರು, ಭಾರತದ ವಿರುದ್ಧ (India vs Australia) ಪ್ರಾಬಲ್ಯ ಸಾಧಿಸಿದರೂ ಮಳೆಯ ಕಾರಣ ಡ್ರಾನಲ್ಲಿ ಕೊನೆಗೊಂಡಿದೆ. ಪಂದ್ಯದ 5 ದಿನಗಳು ಮಳೆ ಕಾಣಿಸಿಕೊಂಡಿತ್ತು. ಸರಣಿಯು 1-1ರಲ್ಲಿ ಸಮಬಲಗೊಂಡಿದ್ದು, ಮೆಲ್ಬೋರ್ನ್​​ನಲ್ಲಿ 4ನೇ ಟೆಸ್ಟ್ ನಡೆಯಲಿದೆ.

ಆರಂಭಿಕ ಟೆಸ್ಟ್​​​ನಲ್ಲಿ ಸೋತರೂ ದ್ವಿತೀಯ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಕಂಬ್ಯಾಕ್ ಮಾಡಿದೆ. ಗಬ್ಬಾ ಮೈದಾನದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮಳೆ ಗೆಲುವಿನ ಕನಸಿಗೆ ಅಡ್ಡಿಯಾಯಿತು. ಸರಣಿಯಲ್ಲಿ ಮುನ್ನಡೆ ಪಡೆಯಲು ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಇದರ ಮಧ್ಯೆ ಆಸೀಸ್​ಗೆ ಭಾರೀ ಹೊಡೆತ ಬಿದ್ದಿದೆ. ಪ್ರಮುಖ ವೇಗಿ ಗಾಯದ ಕಾರಣ ಸರಣಿಯಿಂದಲೇ ಹೊರಬಿದ್ದಿದ್ದರೆ, ಮತ್ತೊಬ್ಬ ಆಟಗಾರ ಗಾಯದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ವೇಗಿ ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆಯಿಂದ ಮೆಲ್ಬೋರ್ನ್ ಟೆಸ್ಟ್‌ನಿಂದ ಹೊರ ಬಿದ್ದಿದ್ದು, ಅವರ ಸ್ಥಾನ ತುಂಬಲು ಮೂವರು ಪೈಪೋಟಿ ನಡೆಸುತ್ತಿದ್ದಾರೆ. ಸ್ಕಾಟ್ ಬೋಲ್ಯಾಂಡ್, ಬ್ರೆಂಡನ್ ಡೊಗ್ಗೆಟ್ ಮತ್ತು ಬ್ಯೂ ವೆಬ್‌ಸ್ಟರ್ ರೇಸ್​ನಲ್ಲಿದ್ದಾರೆ. ಈಗಾಗಲೇ ಸರಣಿಯಲ್ಲಿ ಆಡಿದ ಬೋಲ್ಯಾಂಡ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಹೇಜಲ್​ವುಡ್ ಸ್ಥಾನಕ್ಕೆ ಪ್ಲೇಯಿಂಗ್​ 11ನಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಲಾಗಿದೆ.

ಟ್ರಾವಿಸ್ ಹೆಡ್ ಆಡಲಿದ್ದಾರೆಯೇ?

ಬ್ರಿಸ್ಬೇನ್ ಟೆಸ್ಟ್​​ನಲ್ಲಿ ಟ್ರಾವಿಸ್ ಹೆಡ್​ ಗಾಯದ ಸಮಸ್ಯೆ ಎದುರಿಸಿದರು. 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವಾಗ ಕುಂಟುತ್ತಿದ್ದರು. ಅಲ್ಲದೆ, ಭಾರತ ಚೇಸಿಂಗ್​ ವೇಳೆ ಹೆಡ್ ಫೀಲ್ಡಿಂಗ್​ಗೆ ಬಂದಿರಲಿಲ್ಲ. ಇದು ಆಸೀಸ್​ಗೆ ಮತ್ತೊಂದು ಅಪಾಯವನ್ನು ತಂದೊಡ್ಡಿದೆ ಎಂದು ವರದಿಯಾಗಿದೆ. ಆದರೆ ನಾಯಕ ಪ್ಯಾಟ್ ಕಮಿನ್ಸ್ ಮಾತನಾಡಿ, ಹೆಡ್​ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ. 4ನೇ ಟೆಸ್ಟ್​ಗೂ ಮುನ್ನ ಚೇತರಿಸಿಕೊಂಡು ಮರಳಲಿದ್ದಾರೆ. ಗಂಭೀರವಾದ ಗಾಯವಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಟ್ರಾವಿಡ್ ಹೆಡ್ ಆಡುವುದು ಖಚಿತ ಎನ್ನಲಾಗುತ್ತಿದೆ.

ಹೆಡ್ ಅವರು ಮೂರು ಟೆಸ್ಟ್​​ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎರಡು ಶತಕ, 1 ಅರ್ಧಶತಕ ಸಿಡಿಸಿದ್ದಾರೆ. ಉತ್ತಮ ಲಯದಲ್ಲಿರುವ ಹೆಡ್​ ಇಂಜುರಿಯಿಂದ ಹೊರಬಿದ್ದರೆ ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹೊಡೆತ ಬಿದ್ದರೂ ಅಚ್ಚರಿ ಇಲ್ಲ. ಮತ್ತೊಂದೆಡೆ ಆರಂಭಿಕ ಆಟಗಾರ ನಾಥನ್ ಮೆಕ್‌ಸ್ವೀನಿ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಇದುವರೆಗೂ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಅವರ ಸ್ಥಾನಕ್ಕೆ ಸ್ಯಾಮ್ ಕೊಂಟಾಸ್ ಅವಕಾಶ ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಉಭಯ ತಂಡಗಳಿಗೂ ಗೆಲುವು ಅನಿವಾರ್ಯ

ಉಭಯ ತಂಡಗಳಿಗೂ ಉಳಿದ 2 ಪಂದ್ಯಗಳನ್ನು ಗೆಲ್ಲಲೇಬೇಕು. ಅದರಲ್ಲೂ ಭಾರತ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಆಸೀಸ್ ಸೋತರೂ ಮತ್ತೊಂದು ಅವಕಾಶ ಹೊಂದಿದೆ. ಆದರೆ ಭಾರತ ತಂಡಕ್ಕೆ ಇದೇ ಕೊನೆಯ ಸರಣಿಯಾಗಿದೆ. ಭಾರತ ಉಳಿದ ಎರಡು ಪಂದ್ಯ ಗೆದ್ದರೆ, ಡಬ್ಲ್ಯುಟಿಸಿ ಫೈನಲ್​ಗೇರಲು ಉತ್ತಮ ಅವಕಾಶ ಹೊಂದಿದೆ. ಒಂದು ವೇಳೆ ಪಂದ್ಯ ಸೋತು, ಮತ್ತೊಂದು ಪಂದ್ಯ ಗೆದ್ದರೂ ಕಷ್ಟವಾಗಲಿದೆ. ಆಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎರಡೂ ಪಂದ್ಯಗಳನ್ನು ಶ್ರೀಲಂಕಾ ಗೆದ್ದರೆ ಭಾರತಕ್ಕೆ ಫೈನಲ್​ಗೆ ಹೋಗುವ ಅವಕಾಶ ಪಡೆದುಕೊಳ್ಳಲಿದೆ.

4ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ XI

ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ/ಸ್ಯಾಮ್ ಕೊಂಟಾಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ನಾಥನ್ ಲಿಯಾನ್.

Whats_app_banner