ಸಮೀರ್ ರಿಜ್ವಿ ಮತ್ತೊಂದು ದ್ವಿಶತಕ; ಭಾರತೀಯ ದೇಶೀಯ ಕ್ರಿಕೆಟ್‌ಲ್ಲಿ ಗರಿಷ್ಠ ರನ್ ಚೇಸಿಂಗ್ ದಾಖಲೆ ನಿರ್ಮಿಸಿದ ಉತ್ತರ ಪ್ರದೇಶ
ಸಮೀರ್ ರಿಜ್ವಿ ಆಕರ್ಷಕ ದ್ವಿಶತಕದ ನೆರವಿನಿಂದ ಉತ್ತರ ಪ್ರದೇಶ ತಂಡವು ವಿದರ್ಭ ವಿರುದ್ಧದ ಏಕದಿನ ಪಂದ್ಯದಲ್ಲಿ 407 ರನ್‌ಗಳನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದೆ. ಆ ಮೂಲಕ ಭಾರತೀಯ ದೇಶಿಯ ಕ್ರಿಕೆಟ್‌ನಲ್ಲಿ ನೂತನ ದಾಖಲೆ ನಿರ್ಮಿಸಿದೆ.
ವಡೋದರದಲ್ಲಿ ನಡೆದ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ಉತ್ತರ ಪ್ರದೇಶದ ಅಂಡರ್ -23 ತಂಡವು ವಿದರ್ಭ ವಿರುದ್ಧ 407 ರನ್ ಚೇಸಿಂಗ್ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದೆ. ಇದು ಭಾರತದ ದೇಶೀಯ ಏಕದಿನ ಪಂದ್ಯದಲ್ಲಿ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್ ಆಗಿದೆ. ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಯುಪಿ ತಂಡವು ಬೃಹತ್ ಗುರಿಯನ್ನು ಲೀಲಾಜಾಲವಾಗಿ ತಲುಪಿದೆ. ಕೇವಲ 41.2 ಓವರ್‌ಗಳಲ್ಲಿ ಪಂದ್ಯ ಗೆಲ್ಲುವ ಮೂಲಕ, ಇನ್ನೂ 52 ಎಸೆತಗಳನ್ನು ಉಳಿಸಿ ಗೆದ್ದು ಬೀಗಿತು. ಪಂದ್ಯದ ಹೀರೋ ಆಗಿ ಮಿಂಚಿದವರು ಸಮೀರ್ ರಿಜ್ವಿ. ಅಜೇಯ 202 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೆಲವೇ ದಿನಗಳ ಅಂತರದಲ್ಲಿ ಎರಡನೇ ದ್ವಿಶತಕ ಸಿಡಿಸಿದ ರಿಜ್ವಿ, ಯಾವುದೇ ವಯೋಮಾನದ ಪಂದ್ಯದಲ್ಲಿಯೂ ತಾನು ಅಬ್ಬರಿಸುವುದಾಗಿ ಸಾಬೀತು ಮಾಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಕೇವಲ ಆರು ಪಂದ್ಯಗಳಲ್ಲಿ ನಾಲ್ಕನೇ ಶತಕ ಗಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಮಹಿಳಾ ಏಕದಿನ ಪಂದ್ಯಾವಳಿಯಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಬಂಗಾಳ ಮಹಿಳಾ ತಂಡವು 390 ರನ್ ಚೇಸಿಂಗ್ ಮಾಡಿ ಗೆದ್ದಿತ್ತು. ಇದು ಈವರೆಗೆ ಭಾರತ ದೇಶೀಯ ಕ್ರಿಕೆಟ್‌ನಲ್ಲಿ ದಾಖಲಾದ ಯಶಸ್ವಿ ಗರಿಷ್ಠ ರನ್ ಚೇಸಿಂಗ್ ಆಗಿತ್ತು. ಉಳಿದಂತೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ವಿರುದ್ಧ ಆಂಧ್ರಪ್ರದೇಶ ತಂಡವು 384 ರನ್‌ಗಳನ್ನು ಬೆನ್ನಟ್ಟಿ ಗೆದ್ದಿದ್ದು, ಪುರುಷರ ದೇಶೀಯ ಕ್ರಿಕೆಟ್‌ನ ಗರಿಷ್ಠ ಚೇಸಿಂಗ್ ಆಗಿದೆ. ಈ ಕುರಿತು ಬಿಸಿಸಿಐ ಪೋಸ್ಟ್ ಮಾಡಿದೆ.
ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಿಜ್ವಿ ಆಡಿದ 8 ಪಂದ್ಯಗಳಲ್ಲಿ ಕೇವಲ 136 ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಉತ್ತರ ಪ್ರದೇಶದ ಹಿರಿಯರ ವಿಜಯ್ ಹಜಾರೆ ಟ್ರೋಫಿ ತಂಡದಿಂದ ಕೈಬಿಡಲಾಯಿತು. ಆದರೆ, ಅಂಡರ್ -23 ತಂಡಕ್ಕೆ ನಾಯಕನಾಗಿ ಆಯ್ಕೆಯಾದಾಗಿನಿಂದ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಕೇವಲ 105 ಎಸೆತಗಳಲ್ಲಿ 10 ಬೌಂಡರಿ ಮತ್ತು 18 ಸ್ಫೋಟಕ ಸಿಕ್ಸರ್ ಸಹಿತ ಅಜೇಯ 202 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಅಜೇಯ 296 ರನ್‌ಗಳ ಜೊತೆಯಾಟ
ಪಂದ್ಯದಲ್ಲಿ ಆರಂಭಿಕ ಆಟಗಾರರಾದ ಶೌರ್ಯ ಸಿಂಗ್ ಮತ್ತು ಸ್ವಸ್ತಿಕ್ ಅವರು ಕೇವಲ 10.4 ಓವರ್‌ಗಳಲ್ಲಿ 106 ರನ್‌ಗಳ ಉತ್ತಮ ಜೊತೆಯಾಟವನ್ನು ನೀಡಿದರು. ಮೂರನೇ ಕ್ರಮಾಂಕದ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಶೋಯೆಬ್ ಸಿದ್ದಿಕಿ, 73 ಎಸೆತಗಳಲ್ಲಿ ಅಜೇಯ 96 ರನ್ ಗಳಿಸಿದರು. ರಿಜ್ವಿ ಹಾಗೂ ಸಿದ್ದಿಕಿ ಜೊತೆಗೂಡಿ ಅಜೇಯ 296 ರನ್‌ಗಳ ಜೊತೆಯಾಟವಾಡಿದರು.
ಈ ವಾರದ ಆರಂಭದಲ್ಲಿ ಕೊತಂಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತ್ರಿಪುರಾ ವಿರುದ್ಧವೂ ರಿಜ್ವಿ ದ್ವಿಶತಕ ಬಾರಿಸಿದ್ದರು. ಕೇವಲ 97 ಎಸೆತಗಳಲ್ಲಿ 201 ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೇ ವೇಳೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿರುದ್ಧ ಶತಕ ಗಳಿಸಿದ್ದರು.
ಐಪಿಎಲ್ 2024ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬರೋಬ್ಬರಿ 8.4 ಕೋಟಿ ಕೊಟ್ಟು ಖರೀದಿಸಿದಾಗ, ರಿಜ್ವಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದರು. ಆದರೆ ಟೂರ್ನಿಯಲ್ಲಿ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 95 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.