ಪಂಜಾಬ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಐಪಿಎಲ್ ಅಂಕಪಟ್ಟಿಯಲ್ಲಿ ಅಂತಿಮ ಅಗ್ರ 2 ಸ್ಥಾನಕ್ಕೆ ಇನ್ನಷ್ಟು ಟ್ವಿಸ್ಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಐಪಿಎಲ್ ಅಂಕಪಟ್ಟಿಯಲ್ಲಿ ಅಂತಿಮ ಅಗ್ರ 2 ಸ್ಥಾನಕ್ಕೆ ಇನ್ನಷ್ಟು ಟ್ವಿಸ್ಟ್

ಪಂಜಾಬ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಐಪಿಎಲ್ ಅಂಕಪಟ್ಟಿಯಲ್ಲಿ ಅಂತಿಮ ಅಗ್ರ 2 ಸ್ಥಾನಕ್ಕೆ ಇನ್ನಷ್ಟು ಟ್ವಿಸ್ಟ್

ಐಪಿಎಲ್‌ 2025ರ ಆವೃತ್ತಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಯಾವುವು ಎಂಬ ಕುತೂಹಲ ಇನ್ನೂ ಮುಂದುವರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ ಸೋಲಿನಿಂದ ಪಂದ್ಯಾವಳಿ ಇನ್ನೂ ರೋಚಕವಾಗಿದೆ.

ಪಂಜಾಬ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಐಪಿಎಲ್ ಅಂಕಪಟ್ಟಿಯಲ್ಲಿ ಅಂತಿಮ ಅಗ್ರ 2 ಸ್ಥಾನಕ್ಕೆ ಇನ್ನಷ್ಟು ಟ್ವಿಸ್ಟ್
ಪಂಜಾಬ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಐಪಿಎಲ್ ಅಂಕಪಟ್ಟಿಯಲ್ಲಿ ಅಂತಿಮ ಅಗ್ರ 2 ಸ್ಥಾನಕ್ಕೆ ಇನ್ನಷ್ಟು ಟ್ವಿಸ್ಟ್ (AP)

ಐಪಿಎಲ್‌ 2025ರ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಪಂಜಾಬ್‌ ಕಿಂಗ್ಸ್‌ ತಂಡದ ಕನಸಿಗೆ ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ಅಡ್ಡಿಯಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಕೊನೆಯ ಪಂದ್ಯ ಆಡಿದ ಡಿಸಿ, ಗೆಲುವಿನೊಂದಿಗೆ ತನ್ನ ಅಭಿಯಾನ ಮುಗಿಸಿದೆ. ಅತ್ತ‌, ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಪಂಜಾಬ್‌, ಈ ಪಂದ್ಯ ಗೆದ್ದರೆ ಅಗ್ರ ಎರಡು ಸ್ಥಾನದೊಳಗೆ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ, ಈ ಸೋಲಿನಿಂದಾಗಿ ಇದು ಸಾಧ್ಯವಾಗಿಲ್ಲ. ಸದ್ಯ ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಇನ್ನೂ ತಲಾ ಒಂದು ಪಂದ್ಯಗಳಲ್ಲಿ ಆಡಲಿವೆ. ಆ ಬಳಿಕವಷ್ಟೇ ಅಗ್ರ ಎರಡು ತಂಡಗಳು ನಿರ್ಧಾರವಾಗಬೇಕಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌, 206 ರನ್‌ ಗಳಿಸಿತು. ಬೃಹತ್‌ ಮೊತ್ತವನ್ನು ಚೇಸ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.3 ಓವರ್‌ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ 6 ವಿಕೆಟ್‌ಗಳಿಂದ ಗೆದ್ದು ಬೀಗಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶ್‌ ಆರ್ಯ ಕೇವಲ 6 ರನ್‌ ಗಳಿಸಿ ಔಟಾದರು. ಅಬ್ಬರಿಸಿದ ಜೋಶ್‌ ಇಂಗ್ಲಿಸ್‌ 12 ಎಸೆತಗಳಲ್ಲಿ 32 ರನ್‌ ಗಳಿಸಿ ಔಟಾದರು. ಪ್ರಭ್‌ಸಿಮ್ರಾನ್‌ ಸಿಂಗ್‌ 28 ರನ್‌ ಗಳಿಸಿದರು. ನೇಹಾಲ್‌ ವಧೇರಾ 16 ರನ್‌ ಗಳಿಸಿದರೆ, ಶಶಾಂಕ್‌ ಸಿಂಗ್‌ 11 ರನ್‌ ಗಳಿಸಿದರು. ನಾಯಕನ ಆಟವಾಡಿದ ಶ್ರೇಯಸ್‌ ಅಯ್ಯರ್‌ ಮತ್ತೊಂದು ಅರ್ಧಶತಕ ಸಿಡಿಸಿ ಮಿಂಚಿದರು. 34 ಎಸೆತಗಳಲ್ಲಿ 53 ರನ್‌ ಪೇರಿಸಿದರು. ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಸ್ಟೋಯ್ನಿಸ್‌ 16 ಎಸೆತಗಳಲ್ಲಿ 44 ರನ್‌ ಸಿಡಿಸಿದರು. ಕೊನೆಯಲ್ಲಿ ಬಂದ ಹರ್ಪ್ರೀತ್‌ ಬ್ರಾರ್‌ 7 ರನ್‌ ಗಳಿಸಿದರು. ಹೀಗಾಗಿ ತಂಡದ ಮೊತ್ತ 206 ರನ್‌ಗಳಿಗೆ ಮುಟ್ಟಿತು.

ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ಡೆಲ್ಲಿ ಉತ್ತಮ ಆರಂಭ ಪಡೆಯಿತು. ಕೆಎಲ್‌ ರಾಹುಲ್‌ ಹಾಗೂ ಫಾಫ್‌ ಡುಪ್ಲೆಸಿಸ್ ಮೊದಲ ವಿಕೆಟ್‌ಗೆ 55‌ ರನ್‌ ಗಳಿಸಿದರು. ಕನ್ನಡಿಗ ರಾಹುಲ್‌ 35 ರನ್‌ ಗಳಿಸಿ ಔಟಾದರು. ಫಾಫ್‌ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಕರುಣ್‌ ನಾಯರ್‌ ಜೊತೆಗೂಡಿದ ಸಿದ್ದೀಕುಲ್ಲಾ 22 ರನ್‌ ಗಳಿಸಿ ದುಬೆಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಸುಲಭ ಚೇಸಿಂಗ್

ಈ ವೇಳೆ ಕರುಣ್‌ ನಾಯರ್‌ ಹಾಗೂ ಸಮೀರ್‌ ರಿಜ್ವಿ ಆಕರ್ಷಕ ಜೊತೆಯಾಟವಾಡಿದರು. ವೇಗದ ಆಟಕ್ಕೆ ಮಣೆ ಹಾಕಿ ರನ್‌ ರೇಟ್‌ ಹೆಚ್ಚಿಸಿಕೊಂಡರು. ಇಬ್ಬರಿಂದ ಅರ್ಧಶತಕದ ಜೊತೆಯಾಟ ಬಂತು. ಉತ್ತಮ ಆಟವಾಡುತ್ತಿದ್ದ ಕರುಣ್‌, 44 ರನ್‌ ಗಳಿಸಿದ್ದಾಗ ಔಟಾದರು. ಕೊನೆಯಲ್ಲಿ ಸಮೀರ್‌ ರಿಜ್ವಿ ಹಾಗೂ ಟ್ರಿಸ್ಟಾನ್‌ ಸ್ಟಬ್ಸ್‌ ಆಕರ್ಷಕ ಆಟದಿಂದ ತಂಡದ ಗೆಲುವು ಸುಲಭವಾಯ್ತು.‌ ರಿಜ್ವಿ ಅಜೇಯ 58 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.