ಸಚಿನ್ ತೆಂಡೂಲ್ಕರ್ ಟೀಕಿಸೋ ವ್ಯಕ್ತಿ ಇದ್ದರೆ ವಿನೋದ್ ಕಾಂಬ್ಳಿ ಮಾತ್ರ; ಆತ್ಮೀಯನ ಕ್ಯಾರೆಕ್ಟರ್ ಬಹಿರಂಗ
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ನಡತೆ, ಸ್ವಾಭಾವ ಎಂಥದ್ದು ಎಂಬ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮಾತನಾಡಿದ್ದಾರೆ. ಸ್ನೇಹಿತ ಸಚಿನ್ ತೆಂಡೂಲ್ಕರ್ ಅವರ ಕುರಿತ ಘಟನೆ ವಿವರಿಸುವಾಗ ಕಾಂಬ್ಳಿ ಬಗ್ಗೆ ಹೇಳಿಕೊಂಡಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಜೊತೆಯಾಗಿ ಆಡಿ, ಕ್ರಿಕೆಟ್ ಲೋಕದಲ್ಲಿ ಮನೆಮಾತಾಗಿದ್ದ ಗೆಳೆಯರು ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್. 10 ವರ್ಷದವರಿದ್ದಾಗಿನಿಂದ ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು, ಆತ್ಮೀಯ ಸ್ನೇಹಿತರಾಗಿ ಬೆಳೆದವರು ಕ್ರಿಕೆಟ್ ದೇವರು ಮತ್ತು ಕಾಂಬ್ಳಿ. ಆದರೆ, ಇತ್ತೀಚೆಗೆ ಕಾಂಬ್ಳಿ ಬದುಕಿನಲ್ಲಿ ಏನೇನಾಗಿದೆ ಎಂಬುದರ ಕುರಿತು ಅರಿಯದರು ಕಡಿಮೆ. ಒಬ್ಬರು ಕ್ರಿಕೆಟ್ ಲೋಕವನ್ನೇ ಆಳಿ, ಕ್ರಿಕೆಟ್ ದೇವರು ಎನಿಸುವಂಥ ದಿಗ್ಗಜನಾಗಿ ಮೆರೆದರೆ, ಇನ್ನೊಬ್ಬರು ಹೇಳಹೆಸರಿಲ್ಲದಂತೆ ಆಗಿಬಿಟ್ಟರು. ಕಾಂಬ್ಳಿ ಬದುಕಿನಲ್ಲಿ ಆದ ಹಿನ್ನಡೆಗೆ ಕಾಂಬ್ಳಿಯೇ ಕಾರಣ ಎಂದರೆ ತಪ್ಪಾಗಲಾರದು.
ಒಂದು ಕಾಲದಲ್ಲಿ ಇಬ್ಬರೂ ಜೊತೆಯಾಗಿ ಆಡಿ ಹಲವು ಮೈಲಿಗಲ್ಲುಗಳನ್ನು ತಲುಪಿದ್ದರೆ, ಕೆಲವೊಮ್ಮೆ ಏರಿಳಿತಗಳನ್ನು ಕೂಡಾ ಎದುರಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಚಿನ್-ಕಾಂಬ್ಳಿ ಸ್ನೇಹಿತರಾಗಿ ಉಳಿದಿಲ್ಲ. ರಿಯಾಲಿಟಿ ಶೋ ಒಂದರಲ್ಲಿ ಕಾಂಬ್ಳಿ ಹೇಳಿದ ಮಾತುಗಳಿಂದ ನೊಂದ ಸಚಿನ್, ಅವರಿಂದ ದೂರವಾದರು. ತನ್ನ ಅತ್ಯುತ್ತಮ ಸ್ನೇಹಿತನು ತನ್ನ ಕುಸಿತದ ಸಮಯದಲ್ಲಿ ಬೆಂಬಲಕ್ಕೆ ಬರಲಿಲ್ಲ ಎಂದು ಆರೋಪಿಸಿದ್ದ ಕಾಂಬ್ಳಿ, ಆತ್ಮೀಯ ಸ್ನೇಹಿತನೊಬ್ಬನನ್ನು ಕಳೆದುಕೊಂಡರು. ಇಬ್ಬರೂ ಕೆಲವು ವರ್ಷಗಳ ಕಾಲ ಮಾತನಾಡಲಿಲ್ಲ.
ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತರಾದಾಗ, ಕಾಂಬ್ಳಿ ಕುರಿತು ಮಾತನಾಡಲೇ ಇಲ್ಲ. ನಿವೃತ್ತಿಯ ನಂತರದ ಪಾರ್ಟಿಗೂ ಸಚಿನ್ ತಮ್ಮ ಬಾಲ್ಯದ ಸ್ನೇಹಿತನನ್ನು ಕರೆಯಲಿಲ್ಲ. ಇದಕ್ಕೆ ಮುನ್ನುಡಿ ಬರೆದಿದ್ದೇ ಕಾಂಬ್ಳಿ. ಕ್ರಿಕೆಟ್ ಹೊರತಾಗಿ ಮದ್ಯವ್ಯಸನ ದಾಸನಾದ ಕಾಂಬ್ಳಿ, ತಮ್ಮದೇ ನಡವಳಿಕೆಯಿಂದಾಗಿ ಕ್ರಿಕೆಟ್ ಲೋಕದ ಟೀಕೆಗೊಳಗಾದರು. ಅದು ಅವರ ಸ್ನೇಹಕ್ಕೂ ಕುತ್ತು ತಂದಿತು.
ಇದಾಗಿ ಹಲವು ವರ್ಷಗಳೇ ಕಳೆದಿವೆ. ಈಗ ಕಾಂಬ್ಳಿ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಮುಂಬೈನಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕದ ಉದ್ಘಾಟನೆಯ ಸಂದರ್ಭದಲ್ಲಿ ಕಾಣಿಸಿಕೊಂಡ ನಂತರ, ಕಾಂಬ್ಳಿ ಅವರ ಅನಾರೋಗ್ಯದ ಕುರಿತ ವರದಿಗಳು ಮುನ್ನೆಲೆಗೆ ಬಂದಿವೆ. ಅದಾದ ನಂತರ ಕಾಬ್ಳಿ ಅವರನ್ನು ಸಚಿನ್ ಭೇಟಿಯಾಗಿದ್ದಾರೆ. ಈಗ ಕ್ರಿಕೆಟ್ ದಿಗ್ಗಜರಿಬ್ಬರು ಮತ್ತೆ ಒಂದಾಗಿದ್ದಾರೆ.
ಕಾಂಬ್ಳಿ ಕ್ಯಾರೆಕ್ಟರ್ ವಿವರಿಸಿದ ಸಂಜಯ್ ಮಂಜ್ರೇಕರ್
ಈ ನಡುವೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಕಾಂಬ್ಳಿ ಅವರ ನಡವಳಿಕೆಯ ಬಗ್ಗೆ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಸ್ಪೋರ್ಟ್ಸ್ ಕೀಡಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ್ದ ಮಂಜ್ರೇಕರ್, ಕಾಂಬ್ಳಿ ಅವರ ಆರಂಭಿಕ ಕ್ರಿಕೆಟ್ ಬದುಕು ಹಾಗೂ ಅವರ ಮತ್ತು ಸಚಿನ್ ತೆಂಡೂಲ್ಕರ್ ಒಡನಾಟದ ಬಗ್ಗೆ ಮಾತನಾಡಿದರು. ಆಗ ಕಾಂಬ್ಳಿ ಭಾರತದ ಪ್ಲೇಯಿಂಗ್ ಇಲೆವೆನ್ ಭಾಗವಾಗಿರಲಿಲ್ಲ.
“ಇದು 1992ರ ವಿಶ್ವಕಪ್‌ನಲ್ಲಿ ವಿನೋದ್ ಕಾಂಬ್ಳಿ ಭಾರತ ವಿಶ್ವಕಪ್ ತಂಡದಲ್ಲಿದ್ದಾಗ ನಡೆದ ಕಥೆ. ಕಾಂಬ್ಳಿ ನನ್ನ ಮತ್ತು ಸಚಿನ್ ಅವರೊಂದಿಗೆ ತುಂಬಾ ಸ್ನೇಹಪರರಾಗಿದ್ದರು. ವಿಶ್ವಕಪ್‌ನ ಮೊದಲ ಕೆಲವು ಪಂದ್ಯಗಳಲ್ಲಿ ಅವರು ಆಡುತ್ತಿರಲಿಲ್ಲ. ಆಗ ಅವರು ಸ್ವಲ್ಪ ಅಸಮಾಧಾನಗೊಂಡರು. ಸಚಿನ್ ಮತ್ತು ನಾನು ಇಬ್ಬರು ಆಗ ನೆಲೆಯೂರಿದ್ದ ಆಟಗಾರರು. ಹೀಗಾಗಿ ನಾವಿಬ್ಬರು ಎಲ್ಲಾ ಪಂದ್ಯಗಳಲ್ಲಿ ಅವಕಾಶ ಪಡೆಯುತ್ತಿದ್ದೆವು. ಆದರೆ ಪ್ರತಿ ಪಂದ್ಯದ ನಂತರ, ಕಾಂಬ್ಳಿ ನಮ್ಮ ಹಿಂದೆ ಬಂದು ಟೀಕಿಸುತ್ತಿದ್ದರು. 'ಏನು ಬ್ಯಾಟಿಂಗ್ ಇದು? ನೀವು ಇನ್ನೂ ವೇಗವಾಗಿ ಆಡಬಹುದಿತ್ತು' ಎಂದು ಹೇಳುತ್ತಿದ್ದರು. ಅವರು ಸಚಿನ್ ಅವರನ್ನು ಕೂಡಾ ಬಿಡಲಿಲ್ಲ,” ಎಂದು ಮಂಜ್ರೇಕರ್ ಮೆಲುಕು ಹಾಕಿದ್ದಾರೆ.
ವಿನೋದ್ ಕಾಂಬ್ಳಿಯಿಂದ ಮಾತ್ರ ಸಚಿನ್ ಟೀಕಿಸಲು ಸಾಧ್ಯ
“ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನಾನು ಮತ್ತು ಸಚಿನ್ ಉತ್ತಮ ಜೊತೆಯಾಟವಾಡಿದ್ದೆವು. ಅದು ಸಣ್ಣ ಗುರಿಯಾಗಿತ್ತು. ಅಲ್ಲದೆ ನಾವು ಪಂದ್ಯವನ್ನು ಗೆದ್ದೆವು ಕೂಡಾ. ಅದರ ಹೊರತಾಗಿಯೂ, ಸಂಜೆ ಮಾತನಾಡಿದ ಕಾಂಬ್ಳಿ 'ನಾವು ಪಂದ್ಯವನ್ನು ಮೊದಲೇ ಗೆಲ್ಲಬಹುದಿತ್ತು' ಎಂದರು. 'ಜಾನ್ ಟ್ರೈಕೋಸ್ ಅಂತಹ ಸಾಮಾನ್ಯ ಬೌಲರ್. ನೀವು ಅವನ ಎಸೆತಕ್ಕೆ ಸಿಕ್ಸ್ ಹೊಡೆಯಬಹುದಿತ್ತು. ನೀವು ನೋಡಿದರೆ ಸಿಂಗಲ್ಸ್ ತೆಗೆದುಕೊಳ್ಳುತ್ತಿದ್ದಿರಿ' ಎಂದು ಸಚಿನ್‌ಗೆ ದೂರಿದರು. ಪಂದ್ಯವನ್ನು ಗೆಲ್ಲುವುದು ಮಾತ್ರ ನಮ್ಮ ಗುರಿಯಾಗಿತ್ತು ಎಂದು ಸಚಿನ್ ಹೇಳಿದರು. ಆದರೆ ವಿನೋದ್ ಅದರಿಂದಲೂ ಕಲಿಯಲಿಲ್ಲ. ಸಚಿನ್ ಅವರನ್ನು ಅಸಮಾಧಾನಗೊಳಿಸುವ ಒಬ್ಬ ವ್ಯಕ್ತಿ ಇದ್ದರೆ, ಅದು ವಿನೋದ್ ಕಾಂಬ್ಳಿ ಮಾತ್ರ” ಎಂದು ಮಂಜ್ರೇಕರ್ ಹೇಳಿದ್ದಾರೆ.