ವಿರಾಟ್ ವೃತ್ತಿಜೀವನದ ಅತ್ಯಂತ ಕೆಟ್ಟ ಹೊಡೆತ; ಕೊಹ್ಲಿ ಔಟಾದ ಪರಿಗೆ ಮಂಜ್ರೇಕರ್ ಅಚ್ಚರಿಯ ಪ್ರತಿಕ್ರಿಯೆ
Virat Kohli Dismissal: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅಸಾಮಾನ್ಯ ರೀತಿಯಲ್ಲಿ ಔಟಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಜಯ್ ಮಂಜ್ರೇಕರ್, ಇದನ್ನು ವಿರಾಟ್ ವೃತ್ತಿಜೀವನದ ಕೆಟ್ಟ ಹೊಡೆತ ಎಂದು ಕರೆದಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಭಾರಿ ಸಂಕಷ್ಟದಲ್ಲಿದೆ. ಮೊದಲ ದಿನದಾಟದಲ್ಲಿ ಕಿವೀಸ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಮಿಂಚಿದ್ದ ಭಾರತ, ಎರಡನೇ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದೆ. ಅನುಭವಿ ಆಟಗಾರರೇ ಅಲ್ಪಮೊತ್ತಕ್ಕೆ ವಿಕೆಟ್ ಕೈಚೆಲ್ಲಿ ತಂಡದ ಗೆಲುವನ್ನು ಮತ್ತಷ್ಟು ಕಷ್ಟಕರವಾಗಿಸಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ರೋಹಿತ್ ಶರ್ಮಾ ಶೂನ್ಯ ಸಂಪಾದಿಸಿ ಕ್ಲೀನ್ ಬೋಲ್ಡ್ ಆಗಿದ್ದರು. ಇದೀಗ ಎರಡನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಕೂಡಾ 9 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿ, ಅನಿರೀಕ್ಷಿತ ಹೊಡೆತಕ್ಕೆ ಕೈ ಹಾಕಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಮೊದಲ ದಿನದಾಟಕ್ಕೆ ಭಾರತವು 16/1 ರನ್ ಗಳಿಸಿತ್ತು. ಎರಡನೇ ದಿನದ ಆರಂಭದಲ್ಲಿ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ತಂಡದ ಮೊತ್ತವನ್ನು 50ಕ್ಕೆ ಏರಿಸಿದರು. ಗಿಲ್ 30 ರನ್ ಗಳಿಸಿ ಔಟಾದ ನಂತರ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು. ಈ ವೇಳೆ ಪುಣೆ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳು ಜೋರಾಗಿ ಚಪ್ಪಾಳೆ ತಟ್ಟಿದರು. ಅನುಭವಿ ಆಟಗಾರ ತಂಡದ ಮೊತ್ತವನ್ನು ಹೆಚ್ಚಿಸಬಲ್ಲರು ಎಂಬ ನಿರೀಕ್ಷೆ ಅಭಿಮಾನಿಗಳಿಗಿತ್ತು. ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದ ಕೊಹ್ಲಿ, ಅತ್ಯಂತ ವಿಚಿತ್ರವಾದ ಶಾಟ್ ಆಡಲು ಹೋಗಿ ಪ್ರೇಕ್ಷಕರನ್ನು ದಗ್ಭ್ರಮೆಗೊಳಿಸಿದರು. ಸ್ಯಾಂಟ್ನರ್ ಎಸೆದ ಚೆಂಡು ಸ್ಟಂಪ್ಸ್‌ಗೆ ತಗುಲಿ ಬೇಲ್ಸ್ ಹಾರುತ್ತಿದ್ದಂತೆಯೇ ಸಂಪೂರ್ಣ ಮೈದಾನ ಮೌನಕ್ಕೆ ಜಾರಿತು.
ಮಿಚೆಲ್ ಸ್ಯಾಂಟ್ನರ್ ಎಸೆದ ಲೋ ಫುಲ್ ಟಾಸ್ ಎಸೆತವನ್ನು ಹೊಡೆಯಲು ಕೊಹ್ಲಿ ವಿಫಲರಾದರು. ಈ ವೇಳೆ ಸ್ಟಂಪ್ಸ್‌ಗೆ ಚೆಂಡು ಬಡಿದಾಗ ವಿರಾಟ್ ಗೊಂದಲಕ್ಕೊಳಗಾದರು. ಕೊಹ್ಲಿ ಅತ್ಯಂತ ವಿಲಕ್ಷಣ ರೀತಿಯಲ್ಲಿ ಔಟ್ ಆದರು. ಕಳೆದ ಐಪಿಎಲ್ ಸಮಯದಲ್ಲಿ ಅವರು ಸೊಂಟದ ಎತ್ತರದ ಎಸೆತಕ್ಕೆ ಔಟಾಗಿ ಅಚ್ಚರಿ ಮೂಡಿಸಿದ್ದರು.
ಇವೆಲ್ಲದರ ಮಧ್ಯೆ ಪುಣೆಯಲ್ಲಿ ಕೊಹ್ಲಿಔಟಾದ ರೀತಿಗೆ ದಿಗ್ಗಜರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಆಘಾತಕಾರಿ ಔಟ್ ಕುರಿತು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೊಹ್ಲಿಯ ವೃತ್ತಿಜೀವನದ ಅತ್ಯಂತ ಕೆಟ್ಟ ಶಾಟ್ ಎಂದು ಕರೆದಿದ್ದಾರೆ. 2021ರಿಂದ ಏಷ್ಯಾದಲ್ಲಿ ಸ್ಪಿನ್ ಬೌಲಿಂಗ್‌ಗೆ ಕೊಹ್ಲಿ 21ನೇ ಬಾರಿ ಔಟ್ ಆಗಿದ್ದು, ಅವರ ಸ್ಟ್ರೈಕ್ ರೇಟ್ ಕೇವಲ 28.85ರಷ್ಟಿದೆ.
“ಅರೇ, ವಿರಾಟ್ ಅವರು ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಶಾಟ್ ಆಡಿ ಔಟಾಗಿದ್ದಾರೆ ಎಂಬುದು ಅವರಿಗೆ ಖುದ್ದು ಅರಿವಾಗುತ್ತದೆ. ಅವರ ಬಗ್ಗೆ ಬೇಜಾರಾಗುತ್ತಿದೆ. ಏಕೆಂದರೆ ಎಂದಿನಂತೆ ಅವರು ದೃಢ ಮತ್ತು ಪ್ರಾಮಾಣಿಕ ಉದ್ದೇಶದೊಂದಿಗೆ ಮೈದಾನಕ್ಕಿಳಿದಿದ್ದರು,” ಎಂದು ಮಂಜ್ರೇಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ವಿಕೆಟ್ ಬೀಳುವುದರೊಂದಿಗೆ ಭಾರತ 56-3ಕ್ಕೆ ಕುಸಿಯಿತು. ಮಧ್ಯಾಹ್ನದ ಊಟದ ವಿರಾಟಮದ ವೇಳೆಗೆ ತಂಡವು 107 ರನ್ ವೇಳೆಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭಾರತದ ಸ್ಪಿನ್ನರ್‌ಗಳಂತೆಯೇ, ಕಿವೀಸ್ ತಂಡಕ್ಕೂ ಗ್ಲೆನ್ ಫಿಲಿಪ್ಸ್ ಮತ್ತು ಮಿಚೆಲ್ ಸ್ಯಾಂಟ್ನರ್ ವರದಾನವಾದರು. ಸ್ಯಾಂಟ್ನರ್ 4 ವಿಕೆಟ್ ಪಡೆದರು. ಸರ್ಫರಾಜ್ ಖಾನ್ 11 ರನ್ ಗಳಿಸಿದರೆ, ಭರವಸೆಯ ಬ್ಯಾಟರ್ ರಿಷಭ್ ಪಂತ್ 18 ರನ್ ಗಳಿಸಿ ಕ್ಲೀನ್ ಬೋಲ್ಡ್ ಆದರು. ರವಿಚಂದ್ರನ್ ಅಶ್ವಿನ್ 4 ರನ್ ಗಳಿಸಿ ನಿರ್ಗಮಿಸಿದರು.
ಬೆಂಗಳೂರಿನಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿದ್ದ ಕಿವೀಸ್, ಇದೀಗ ಎರಡನೇ ಪಂದ್ಯದಲ್ಲೂ ಗೆದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆ ಮೂಲಕ 12 ವರ್ಷಗಳಲ್ಲಿ ಭಾರತವನ್ನು ಅದರದ್ದೇ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ ಸೋಲಿಸಿದ ಮೊದಲ ತಂಡ ಎಂಬ ಸಾಧನೆ ಮಾಡಲು ಹವಣಿಸುತ್ತಿದೆ.