ಸಂಜು ಸ್ಯಾಮ್ಸನ್ಗೆ ಸಿಹಿ-ಕಹಿ; ಇಂಗ್ಲೆಂಡ್ ಟಿ20ಐ ಸರಣಿಗೆ ಆಯ್ಕೆ, ಚಾಂಪಿಯನ್ಸ್ ಟ್ರೋಫಿಯಿಂದ ಹೊರಕ್ಕೆ? ಹೀಗಿದೆ ಕಾರಣ
Sanju Samson: ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯ ಜೊತೆಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.
ಆಸ್ಟ್ರೇಲಿಯಾದ ಟೆಸ್ಟ್ ಪ್ರವಾಸ ಮುಗಿಸಿರುವ ಭಾರತ ತಂಡ, ಈಗ ಸೀಮಿತ ಓವರ್‌ಗಳ ಕಡೆಗೆ ವಾಲುತ್ತಿದೆ. ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಮತ್ತು ಫೆಬ್ರವರಿ 6ರಿಂದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಭಾರತ ತಂಡ ಸಿದ್ಧತೆ ನಡೆಸುತ್ತಿದೆ. ಇಂಗ್ಲೆಂಡ್ ಈಗಾಗಲೇ ತನ್ನ ತಂಡ ಪ್ರಕಟಿಸಿದೆ. ಆದರೆ ಬಿಸಿಸಿಐ, ತಮ್ಮ ತಂಡವನ್ನು ಪ್ರಕಟಿಸಲು ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಅಭಿಮಾನಿಗಳಿಗೆ ಸಿಹಿಯ ಜತೆಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.
ಭಾರತದ ಪರ ಇತ್ತೀಚೆಗೆ ಟಿ20ಐ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ಅವರನ್ನು ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ಪರಿಗಣಿಸದಿರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅದಕ್ಕೆ ಕಾರಣ ದೇಶೀಯ ಕ್ರಿಕೆಟ್ನಲ್ಲಿ ಅವರ ಕಳಪೆ ಫಾರ್ಮ್. ಕಳೆದ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಸ್ಯಾಮ್ಸನ್ ಇದೀಗ ಏಕದಿನ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಆದರೆ ಅವರು ಐದು ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗುವುದು ಬಹುತೇಕ ಖಚಿತ.
ವರದಿಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20ಐ ಸರಣಿಗೆ ಭಾರತ ತಂಡದಲ್ಲಿ ಸ್ಯಾಮ್ಸನ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಕದಿನ ಸರಣಿಗೆ ಮಾತ್ರವಲ್ಲ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅವಕಾಶ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಏಕದಿನ ಸರಣಿಗೆ ಪ್ರಕಟಿಸುವ ತಂಡವೇ ಚಾಂಪಿಯನ್ಸ್ ಟ್ರೋಫಿಗೂ ಆಗಿರಲಿದೆ. ತಂಡದಲ್ಲಿ ಕೆಎಲ್ ರಾಹುಲ್ ಅವರಿಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಇದೇ ಕಾರಣಕ್ಕೆ ಸಂಜು ಸ್ಯಾಮ್ಸನ್ ಆಯ್ಕೆ ಕಷ್ಟ?
ಆಯ್ಕೆದಾರರ ಮೊದಲ ಆಯ್ಕೆಯೂ ರಿಷಭ್ ಪಂತ್ ಅವರೇ ಆಗಿರುವುದು ಸ್ಯಾಮ್ಸನ್ ಅವಕಾಶ ಪಡೆಯದಿರಲು ಕಾರಣ ಎನ್ನಬಹುದು. ಏಕದಿನಕ್ಕೆ ಸ್ಯಾಮ್ಸನ್ ಆಯ್ಕೆ ಆಗದಿರಲು ಪ್ರಮುಖ ಕಾರಣವೆಂದರೆ, ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡದಿರುವುದು. ಕೇರಳ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡಿದ ಸ್ಯಾಮ್ಸನ್ ವಿಜಯ್ ಹಜಾರೆ ಟ್ರೋಫಿಗೆ ತಂಡಕ್ಕೆ ಆಯ್ಕೆಯಾಗಲಿಲ್ಲ. ಏಕೆಂದರೆ ಟೂರ್ನಿ ಆರಂಭಕ್ಕೂ ಮುನ್ನ ವಯನಾಡಿನಲ್ಲಿ ಆಯೋಜಿಸಿದ್ದ 3 ದಿನಗಳ ತರಬೇತಿ ಶಿಬಿರಕ್ಕೆ ಸ್ಯಾಮ್ಸನ್ ಗೈರಾಗಿದ್ದರು. ಹೀಗಾಗಿ, ತಂಡದಿಂದ ಕೈಬಿಡಲಾಯಿತು.
ಇದರ ನಂತರ ಸ್ಯಾಮ್ಸನ್ ತನ್ನನ್ನು ತಾನು ಲಭ್ಯವೆಂದು ಘೋಷಿಸಿದ್ದರು. ಆದರೆ ಆಡಳಿತ ಮಂಡಳಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ ಅಬ್ಬರಿಸಿದರೆ ಸ್ಯಾಮ್ಸನ್ಗೆ ಏಕದಿನ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಹೇಗೆಂದರೆ ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ತಂಡಗಳನ್ನು ಸಲ್ಲಿಸಲು ಜನವರಿ 12 ಡೆಡ್ ಲೈನ್ ಆಗಿದೆ. ಆದರೆ ಫೆಬ್ರವರಿ 13ರ ತನಕ ಬದಲಾವಣೆಗೆ ಮಾಡಲು ಅವಕಾಶ ಇರುವ ಕಾರಣ, ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ ವಿಕೆಟ್ ಕೀಪರ್ಗಳ ಪೈಕಿ ಯಾರಾದರೂ ಗಾಯಗೊಂಡರೆ ಸಂಜುಗೆ ಅದೃಷ್ಟ ಒಲಿಯಬಹುದು.