ಟಿ20 ವಿಶ್ವಕಪ್: ವಿಕೆಟ್ ಕೀಪರ್ ಸ್ಥಾನಕ್ಕೆ ಹಲವರ ಪೈಪೋಟಿ; ಸಂಜು ಸ್ಯಾಮ್ಸನ್‌ಗಿಂತ ರಿಷಭ್ ಪಂತ್ ನೆಚ್ಚಿನ ಆಟಗಾರ-sanju samson is in battle with rishabh pant for wicket keeper spot in t20 world cup 2024 spot ipl 2024 performance jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್: ವಿಕೆಟ್ ಕೀಪರ್ ಸ್ಥಾನಕ್ಕೆ ಹಲವರ ಪೈಪೋಟಿ; ಸಂಜು ಸ್ಯಾಮ್ಸನ್‌ಗಿಂತ ರಿಷಭ್ ಪಂತ್ ನೆಚ್ಚಿನ ಆಟಗಾರ

ಟಿ20 ವಿಶ್ವಕಪ್: ವಿಕೆಟ್ ಕೀಪರ್ ಸ್ಥಾನಕ್ಕೆ ಹಲವರ ಪೈಪೋಟಿ; ಸಂಜು ಸ್ಯಾಮ್ಸನ್‌ಗಿಂತ ರಿಷಭ್ ಪಂತ್ ನೆಚ್ಚಿನ ಆಟಗಾರ

ಐಪಿಎಲ್‌ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಆರಂಭವಾಗಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡದಲ್ಲಿ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿದೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ನಡುವೆ ಪೈಪೋಟಿ ಇದೆ.

 ಸಂಜು ಸ್ಯಾಮ್ಸನ್‌ಗಿಂತ ರಿಷಭ್ ಪಂತ್ ನೆಚ್ಚಿನ ಆಟಗಾರ
ಸಂಜು ಸ್ಯಾಮ್ಸನ್‌ಗಿಂತ ರಿಷಭ್ ಪಂತ್ ನೆಚ್ಚಿನ ಆಟಗಾರ

ಐಪಿಎಲ್‌ ಪಂದ್ಯಾವಳಿಯ ನಡುವೆ, ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ಆಯ್ಕೆ ಕುರಿತು ಬಿಸಿಸಿಐ ಯೋಚನೆಯಲ್ಲಿದೆ. 15 ಆಟಗಾರರ ತಂಡದ ಆಯ್ಕೆಗೆ ಭಾರತೀಯರ ನಡುವೆ ವ್ಯಾಪಕ ಪೈಪೋಟಿ ಇದೆ. ಅಲ್ಲದೆ, ಪ್ರತಿಯೊಂದು ಸ್ಥಾನಕ್ಕೂ ಕನಿಷ್ಠ 2ಕ್ಕಿಂತ ಹೆಚ್ಚು ಆಟಗಾರರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಐಪಿಎಲ್‌ ಪಂದ್ಯಾವಳಿಯಲ್ಲಿ ಆಟಗಾರರು ತೋರುವ ಪ್ರದರ್ಶನದ ಆಧಾರದಲ್ಲಿ ವಿಶ್ವಕಪ್‌ ತಂಡದ ಆಯ್ಕೆಗೆ ಬಿಸಿಸಿಐ ಮುಂದಾಗಿದೆ. ಆದರೂ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್ ಸ್ಥಾನಗಳಿಗಾಗಿ ಭಾರಿ ಪೈಪೋಟಿ ಇದೆ. ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ಸೇರಿಕೊಂಡು ಅಂತಿಮ ತಂಡ ರಚನೆಗೆ ತಂತ್ರ ರೂಪಿಸಿದ್ದಾರೆ. ಇವರಲ್ಲಿ, ವಿಶ್ವಕಪ್‌ ವೇಳೆ ಸ್ಟಂಪ್‌ಗಳ ಹಿಂದೆ ನಿಂತು ವಿಕೆಟ್‌ ಕೀಪಿಂಗ್‌ ಮಾಡುವವರು ಯಾರು ಎಂಬ ಗೊಂದಲ ಸಹಜವಾಗಿಯೇ ಮನೆ ಮಾಡಿದೆ.

ವಿಕೆಟ್‌ ಕೀಪರ್‌ ಆಗಿ ಸ್ಥಾನ ಪಡೆಯಲು ಕೆಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮಾತ್ರವಲ್ಲದೆ ರಿಷಭ್ ಪಂತ್ ನಡುವೆ ಪೈಪೋಟಿ ಇದೆ. ಅತ್ತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಜಿತೇಶ್ ಶರ್ಮಾ ಹಾಗೂ ಧ್ರುವ್ ಜುರೆಲ್ ಕೂಡಾ ಕಣದಲ್ಲಿದ್ದಾರೆ. ಕಳೆದ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್‌ ಕೀಪರ್‌ ಹಾಗೂ ಬ್ಯಾಟರ್ ಆಗಿ ಆಡಿದ್ದ ಕೆಎಲ್‌ ರಾಹುಲ್‌ ಆಯ್ಕೆ ಬಹುತೇಕ‌ ಖಚಿತ. ಕೀಪಿಂಗ್‌ ಮಾಡದಿದ್ದರೂ, ಒಬ್ಬ ಬ್ಯಾಟರ್‌ ಆಗಿ ರಾಹುಲ್‌ ಪರಿಗಣನೆ ಮಾಡಬಹುದು.

ಇದನ್ನೂ ಓದಿ | 2016ರಲ್ಲಿ ಇದೇ ರೀತಿ ಪ್ಲೇಆಫ್ ಪ್ರವೇಶಿಸಿತ್ತು ಆರ್​ಸಿಬಿ; 2024ರಲ್ಲೂ ಕುದುರುತ್ತಾ ಅದೇ ಲಕ್? ಆದರೆ ಅಸಾಧ್ಯವಂತೂ ಅಲ್ಲ!

ಸದ್ಯ, ಸ್ಯಾಮ್ಸನ್ ಮತ್ತು ರಿಷಬ್ ಪಂತ್ ವಿಕೆಟ್‌ ಕೀಪರ್‌ ಸ್ಥಾನದ ಇಬ್ಬರು ಪ್ರಮುಖ ಅಭ್ಯರ್ಥಿಗಳು. ಇವರ ನಡುವೆ ಇಶಾನ್ ಕಿಶನ್‌ ಆಯ್ಕೆ ಸಾಧ್ಯತೆ ಅಷ್ಟೊಂದಿಲ್ಲ. ಐಪಿಎಲ್‌ನಲ್ಲಿ ಈವರೆಗೆ ನಡೆದ ಮೊದಲ ಮೂರು ವಾರಗಳ ಪ್ರದರ್ಶನದ ಆಧಾರದಲ್ಲಿ ನೋಡುವುದಾದರೆ, ಸ್ಯಾಮ್ಸನ್ ಹಾಗೂ ಪಂತ್ ಆಯ್ಕೆಯತ್ತ ಒಲವು ಹೆಚ್ಚಾಗುವುದು ಖಚಿತ.

ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಯಾನ್ ಪರಾಗ್ ನಂತರ, ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಂಜು, ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದ್ದಾರೆ. 29 ವರ್ಷದ ಸ್ಯಾಮ್ಸನ್, ಇದುವರೆಗೆ ಆಡಿದ 25 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 18.70ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದಾರೆ. ಈವರೆಗೆ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಸ್ಯಾಮ್ಸನ್ ಹೆಚ್ಚು ಜವಾಬ್ದಾರಿಯುತ ಹಾಗೂ ಪ್ರಬುದ್ಧ ಆಟವಾಡಿದ್ದಾರೆ. ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 155.29ರ ಸ್ಟ್ರೈಕ್ ರೇಟ್‌ನಲ್ಲಿ 264 ರನ್ ಗಳಿಸಿದ್ದಾರೆ. ಎದುರಿಸಿದ 170 ಎಸೆತಗಳಲ್ಲಿ 25 ಬೌಂಡರಿ ಹಾಗೂ 11 ಸಿಕ್ಸರ್‌ ಸಿಡಿಸಿದ್ದಾರೆ.

ಪಂತ್‌ ಆಯ್ಕೆಗೆ ಹೆಚ್ಚು ಒಲವು

ಸ್ಯಾಮ್ಸನ್‌ ಹೊರತಾಗಿ ವಿಶ್ವಕಪ್‌ಗೆ ಹೆಚ್ಚು ಹತ್ತಿರವಿರುವ ಆಟಗಾರ ರಿಷಬ್‌ ಪಂತ್. ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಸುದೀರ್ಘ 14 ತಿಂಗಳ ನಂತರ, ಸಂಪೂರ್ಣವಾಗಿ ಫಿಟ್ ಆಗಿ ಪಂತ್‌ ಐಪಿಎಲ್‌ಗೆ ಮರಳಿದ್ದಾರೆ. ನಿರೀಕ್ಷೆಯಂತೆಯೇ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕನಾಗಿ ಪರಿಣಾಮಕಾರಿಯಾಗಿ ಕೀಪಿಂಗ್ ಮಾಡುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ನೀರಸ ಆರಂಭ ಪಡೆದರೂ, ನಂತರ ಲಯ ಕಂಡುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಿದ 123 ಎಸೆತಗಳಲ್ಲಿ 157.72ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಪಂತ್, 16 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 194 ರನ್ ಗಳಿಸಿದ್ದಾರೆ. ವರ್ಷಕ್ಕೂ ಹೆಚ್ಚು ಕಾಲ ಮೈದಾನಕ್ಕಿಳಿಯದಿದ್ದರೂ, ಆ ಬಳಿಕ ಅವರು ಲಯ ಕಂಡುಕೊಂಡ ಬಗೆಗೆ ಅನುಭವಿ ಕ್ರಿಕೆಟಿಗರೇ ಶ್ಲಾಘಿಸಿದ್ದಾರೆ.