ಸಂಜು ಸ್ಯಾಮ್ಸನ್, ಮೊಹಮ್ಮದ್ ಶಮಿ ಇನ್; ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐಗೆ ಭಾರತದ ಸಂಭಾವ್ಯ XI
Indias Likely XI: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾರಿಗೆಲ್ಲಾ ಆಡುವ ಅವಕಾಶ ಸಿಗಲಿದೆ? ಯಾರು ಬೆಂಚ್ ಕಾಯಬಹುದು ಎಂಬುದರ ವಿವರ ಇಲ್ಲಿದೆ. ಹೀಗಿದೆ ನೋಡಿ ಭಾರತದ ಸಂಭಾವ್ಯ XI.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಟಿ20ಐ ಪಂದ್ಯ ಜನವರಿ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ಕಳೆದ ಟಿ20ಐ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಯಂಗ್ ಇಂಡಿಯಾ, ಇದೀಗ ಬ್ರಿಟಿಷರ ಬೇಟೆಗೆ ಸಜ್ಜಾಗಿದೆ. 2026ರ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಸಜ್ಜುಗೊಳಿಸಬೇಕಿರುವ ಕಾರಣ ಪ್ಲೇಯಿಂಗ್ 11 ಆಯ್ಕೆ ಮಾಡುವುದು ಮ್ಯಾನೇಜ್ಮೆಂಟ್ಗೆ ಸವಾಲಾಗಿ ಪರಿಣಮಿಸಿದೆ. ಮೊದಲ ಟಿ20ಐ ಪಂದ್ಯದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು ಎಂಬುದನ್ನು ಈ ಮುಂದೆ ನೋಡೋಣ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಅವರು ನಿರ್ದಯವಾಗಿ ಬ್ಯಾಟಿಂಗ್ ನಡೆಸಿದ್ದರು. ಎರಡು ಶತಕ ಸಿಡಿಸಿ ಮಿಂಚಿದ್ದ ಸಂಜು, ಇಂಗ್ಲೆಂಡ್ ವಿರುದ್ಧವೂ ಓಪನಿಂಗ್ ಬರಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಸರಣಿ ಹೊಂದಿರದ ಅಭಿಷೇಕ್ ಶರ್ಮಾ, ಸ್ಯಾಮ್ಸನ್ ಜತೆಗೆ ಇನ್ನಿಂಗ್ಸ್ ಆರಂಭಿಸಬಹುದು. ದಕ್ಷಿಣ ಆಫ್ರಿಕಾ ನೆಲದಲ್ಲಿ ಮಿಂಚಿದ್ದ ತಿಲಕ್ ವರ್ಮಾ ಮತ್ತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಅಂದು ಎರಡು ಶತಕ ಸಿಡಿಸಿ ಪ್ರಮುಖ ಸ್ಕೋರರ್ ಆಗಿದ್ದರು.
ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿಯುವುದು ಖಚಿತ. ರಿಂಕು ಸಿಂಗ್ ಫಿನಿಷರ್ ಜವಾಬ್ದಾರಿ ನಿರ್ವಹಿಸಬಹುದು. ಹಾರ್ದಿಕ್ ಪಾಂಡ್ಯ ವೇಗದ ಆಲ್ರೌಂಡರ್ ಆಗಿ ಅವಕಾಶ ಪಡೆಯುವುದು ಖಚಿತ. ಹೀಗಾಗಿ ಆಸೀಸ್ ನೆಲದಲ್ಲಿ ಮಿಂಚಿದ್ದರೂ ನಿತೀಶ್ ಕುಮಾರ್ ರೆಡ್ಡಿ ಒಂದೆರಡು ಪಂದ್ಯಗಳಲ್ಲಿ ಬೆಂಚ್ ಕಾಯಬಹುದು. ಸ್ಯಾಮ್ಸನ್ ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಕಾರಣ ಧ್ರುವ್ ಜುರೆಲ್ಗೆ ಅವಕಾಶ ಸಿಗುವುದಿಲ್ಲ ಎನ್ನಬಹುದಾಗಿದೆ.
ಉಪನಾಯಕನೂ ಆಗಿರುವ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ನಡುವೆ ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ 2023ರ ಏಕದಿನ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಶಮಿಗೆ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಸಾಥ್ ನೀಡಲಿದ್ದಾರೆ. ವಾಷಿಂಗ್ಟನ್ ಸುಂದರ್ ಸಹ ಅವಕಾಶ ಬೆಂಚ್ ಕಾಯಬಹುದು.
ಟಿ20 ವಿಶ್ವಕಪ್ಗೆ ಈಗಿನಿಂದಲೇ ಸಿದ್ಧತೆ
2026ರಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ತಂಡವನ್ನು ಈಗಿನಿಂದಲೇ ಬಿಸಿಸಿಐ ಸಜ್ಜುಗೊಳಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬ ಆಟಗಾರರಿಗೆ ಪ್ರತಿ ಪಂದ್ಯವೂ ಅಗ್ನಿಪರೀಕ್ಷೆಯಾಗಿದೆ. ಯಾರು, ಹೇಗೆ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಬಿಸಿಸಿಐ ಆಯ್ಕೆದಾರರು ಸೂಕ್ಷ್ಮವಾಗಿ ಗಮನ ಹರಿಸಲಿದ್ದಾರೆ. ಹಾಗಾಗಿ ಆಟಗಾರರು ತಮಗೆ ಸಿಕ್ಕ ಉತ್ತಮ ಅವಕಾಶವನ್ನು ಕೈಚೆಲ್ಲದೆ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ.
ಮೊದಲ ಟಿ20ಐಗೆ ಭಾರತದ ಸಂಭಾವ್ಯ XI
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ , ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
