ನಿರೀಕ್ಷೆಗಿಂತ ಹೆಚ್ಚು ಸಾಧಿಸಿದ್ದೇನೆ, ಆದರೂ ನತದೃಷ್ಟ ಕ್ರಿಕೆಟಿಗ ಎಂದು ಕರೆಯುವುದೇಕೆ; ಸ್ಯಾಮ್ಸನ್ ಬೇಸರ
ಕನ್ನಡ ಸುದ್ದಿ  /  ಕ್ರಿಕೆಟ್  /  ನಿರೀಕ್ಷೆಗಿಂತ ಹೆಚ್ಚು ಸಾಧಿಸಿದ್ದೇನೆ, ಆದರೂ ನತದೃಷ್ಟ ಕ್ರಿಕೆಟಿಗ ಎಂದು ಕರೆಯುವುದೇಕೆ; ಸ್ಯಾಮ್ಸನ್ ಬೇಸರ

ನಿರೀಕ್ಷೆಗಿಂತ ಹೆಚ್ಚು ಸಾಧಿಸಿದ್ದೇನೆ, ಆದರೂ ನತದೃಷ್ಟ ಕ್ರಿಕೆಟಿಗ ಎಂದು ಕರೆಯುವುದೇಕೆ; ಸ್ಯಾಮ್ಸನ್ ಬೇಸರ

Sanju Samson on Rohit Sharma: ಕಳೆದೆರಡು ವರ್ಷಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ದೊಡ್ಡ ಟೂರ್ನಿಗಳಿಗೆ ಭಾರತ ತಂಡದಿಂದ ಆಯ್ಕೆಯಾಗದಿದ್ದರೂ ಅವರಿಂದ ಸತತ ಬೆಂಬಲ ಪಡೆದಿದ್ದೇನೆ ಎಂದು ಸಂಜು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ.

ಸಂಜು ಸ್ಯಾಮ್ಸನ್.
ಸಂಜು ಸ್ಯಾಮ್ಸನ್.

ಏಕದಿನ ವಿಶ್ವಕಪ್ 2023 ತಂಡದಲ್ಲಿ (ODI World Cup 2023) ಮತ್ತು ಆಸ್ಟ್ರೇಲಿಯಾ ವಿರುದ್ಧ (India vs Australia) ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಗೆ ಸ್ಥಾನ ಪಡೆಯದ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson), ಕ್ಯಾಪ್ಟನ್​ ರೋಹಿತ್​ ಶರ್ಮಾ (Rohit Sharma) ಅವರಿಂದ ಸಿಕ್ಕ ಬೆಂಬಲದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಹಾಗೆಯೇ ಬಿಸಿಸಿಐಗೆ (BCCI) ಪರೋಕ್ಷವಾಗಿ ಛಾಟಿ ಬೀಸುವ ಮನ ಗಮನ ಸೆಳೆದಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ರೋಹಿತ್ ನಾಯಕತ್ವದಲ್ಲಿ ದೊಡ್ಡ ಟೂರ್ನಿಗಳಿಗೆ ಭಾರತ ತಂಡದಿಂದ ಆಯ್ಕೆಯಾಗದಿದ್ದರೂ ಅವರಿಂದ ಸತತ ಬೆಂಬಲ ಪಡೆದಿದ್ದೇನೆ ಎಂದು ಸ್ಯಾಮ್ಸನ್ ಬಹಿರಂಗಪಡಿಸಿದ್ದಾರೆ. 36 ವರ್ಷದ ಹಿಟ್​ಮ್ಯಾನ್​, ಕರೆ ಮಾಡಿ ತಮ್ಮ ಬ್ಯಾಟಿಂಗ್ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂಬ ವಿಚಾರವನ್ನು ಸಂಜು ತಿಳಿಸಿದರು. ಅಲ್ಲದೆ ನಾನು ನಿರೀಕ್ಷೆಗಿಂತ ಹೆಚ್ಚಿನದ್ದನ್ನು ಸಾಧಿಸಿದ್ದೇನೆಂದರು.

ಏನ್ ಸಮಾಚಾರ ಎಂದು ಶ್ಲಾಘಿಸಿದ್ದ ರೋಹಿತ್

ಧನ್ಯ ವರ್ಮಾ ಅವರ ಟೂಬ್ಯೂಟ್​ ಟಾಕ್‌ ಶೋನಲ್ಲಿ ಮಾತನಾಡಿದ ಸಂಜು, ರೋಹಿತ್ ಶರ್ಮಾ ಅವರು ನನ್ನೊಂದಿಗೆ ಬಂದು ಮಾತಾಡಿದ ಮೊದಲ ಅಥವಾ 2ನೇಯ ವ್ಯಕ್ತಿ. 'ಹೇ ಸಂಜು, ಏನ್ ಸಮಾಚಾರ, ನೀವು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ. ಮುಂಬೈ ಇಂಡಿಯನ್ಸ್ ವಿರುದ್ಧ ಹಲವು ಸಿಕ್ಸರ್‌ಗಳನ್ನು ಬಾರಿಸಿದ್ದೀರಿ. ನೀವು ನಿಜವಾಗಿಯೂ ಅದ್ಭುತ ಬ್ಯಾಟ್ ಮಾಡುತ್ತೀರಿ ಎಂದು ಕೊಂಡಾಡಿದ್ದರು. ನನಗೆ ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.

ಬ್ಯಾಟ್ಸ್​ಮನ್​ ಆಗಿ ತುಂಬಾ ಪ್ರತಿಭೆ ಹೊಂದಿದ್ದರೂ ಸಂಜು ತನ್ನ ಕೌಶಲ್ಯಗಳನ್ನು ಭಾರತ ತಂಡದಲ್ಲಿ ಪ್ರದರ್ಶಿಸಲು ಅವಕಾಶಗಳು ಸಿಗುತ್ತಿಲ್ಲ. ಆದರೆ, ಅನೇಕರು ಸ್ಯಾಮ್ಸನ್​ರನ್ನು ದುರದೃಷ್ಟಕರ ಕ್ರಿಕೆಟಿಗ ಎಂದೇ ಪರಿಗಣಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ 28 ವರ್ಷದ ಕೇರಳ ಬ್ಯಾಟರ್, ನಾನು ಅಂದುಕೊಂಡದ್ದಕ್ಕಿಂತ ಹೆಚ್ಚು ಸಾಧಿಸಿದ್ದೇನೆ ಎಂದರು.

‘ನತದೃಷ್ಟ ಕ್ರಿಕೆಟಿಗನಲ್ಲ’

ಜನರು ನನ್ನನ್ನು ಅದೃಷ್ಟವಿಲ್ಲ ಅಥವಾ ನತದೃಷ್ಟ ಕ್ರಿಕೆಟಿಗ ಎಂದು ಕರೆಯುತ್ತಾರೆ. ಆದರೆ, ಸದ್ಯ ನಾನು ಎಲ್ಲಿದ್ದೇನೆ ಎಂಬುದನ್ನು ನೋಡಿ. ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನೇ ಸಾಧಿಸಿದ್ದೇನೆ ಎಂದು ಭಾರತ ತಂಡದಿಂದ ಕೈಬಿಟ್ಟಿದ್ದರ ನೋವನ್ನು ಪರೋಕ್ಷವಾಗಿ ಹೊರ ಹಾಕಿದರು. 16ನೇ ಆವೃತ್ತಿಯ ಐಪಿಎಲ್​ನಲ್ಲಿ ಸ್ಯಾಮ್ಸನ್‌ ರಾಜಸ್ಥಾನ್‌ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆಡಿದ 14 ಪಂದ್ಯಗಳಿಂದ ಸಂಜು, 153.39 ಸ್ಟ್ರೈಕ್​​ರೇಟ್‌ನಲ್ಲಿ 362 ರನ್‌ಗಳನ್ನು ಕಲೆ ಹಾಕಿದ್ದರು.

ಸಂಜು ಸ್ಯಾಮ್ಸನ್ 2015ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದರು. ಆದರೆ ಅಂದಿನಿಂದ 13 ಏಕದಿನ ಮತ್ತು 24 ಟಿ20ಗಳಲ್ಲಿ ಮಾತ್ರ ಆಡುವಲ್ಲಿ ಯಶಸ್ವಿಯಾಗಿದ್ದಾರೆ, ಇದರಲ್ಲಿ ಅವರು ಕ್ರಮವಾಗಿ 390 ಮತ್ತು 374 ರನ್ ಗಳಿಸಿದ್ದಾರೆ. ಏಷ್ಯಾಕಪ್​​ಗೆ ಸಂಜು ಸ್ಯಾಮ್ಸನ್​​ರನ್ನು ಮೀಸಲು ಆಟಗಾರನಾಗಿ ಆಯ್ಕೆಯಾದರು. ಆದರೆ, ಮುಖ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು. ಏಕದಿನ ವಿಶ್ವಕಪ್​ಗೂ ಆಯ್ಕೆಯಾಗಲಿಲ್ಲ. ಇದೀಗ ಟಿ20 ಸರಣಿಗೂ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು.

Whats_app_banner