ಇಂಡೋ-ಆಸೀಸ್ 3ನೇ ಟೆಸ್ಟ್ ವೀಕ್ಷಿಸಿದ ಸಾರಾ ತೆಂಡೂಲ್ಕರ್; ಶುಭ್ಮನ್ ಗಿಲ್ ಬೆಂಬಲಿಸಲು ಬಂದರೇ ಸಚಿನ್ ಪುತ್ರಿ?
Sara Tendulkar: ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಜರಿ ಹಾಕಿದ್ದಾರೆ. ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.
ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಬೆಂಬಲ ನೀಡಲು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಗಬ್ಬಾ ಮೈದಾನಕ್ಕೆ ಆಗಮಿಸಿದ್ದಾರೆ. ಪಂದ್ಯವನ್ನು ವೀಕ್ಷಿಸುತ್ತಿದ್ದ ಸಾರಾ ದೃಶ್ಯಗಳನ್ನು ಕ್ಯಾಮೆರಾಗಳು ಸೆರೆ ಹಿಡಿದಿವೆ. ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಳಪೆ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ಗೆ ಚಿಯರ್ಸ್ ಹೇಳಲು ಬಂದಿದ್ದಾರೆ ಎಂದು ನೆಟ್ಟಿಗರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಆಸ್ಟ್ರೇಲಿಯಾ ಇನ್ನಿಂಗ್ಸ್ನ 10ನೇ ಓವರ್ನಲ್ಲಿ ಆತಿಥೇಯರು 24/0 ಸ್ಕೋರ್ ಮಾಡಿದ್ದ ಅವಧಿಯಲ್ಲಿ ಸಾರಾ ತೆಂಡೂಲ್ಕರ್ ಅವರನ್ನು ಕ್ಯಾಮೆರಾಗಳು ಸೆರೆ ಹಿಡಿದವು. ಆಗ ಸಾರಾ ಸ್ಟ್ಯಾಂಡ್ನಲ್ಲಿ ಕುಳಿತಿರುವುದು ಕಾಣಬಹುದು. ಆಕೆಯ ಹಿಂದೆ ಭಾರತದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರನ್ನೂ ಕಾಣಬಹುದು. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ದೃಶ್ಯದಲ್ಲಿ ಸಾರಾ, ತನ್ನ ಮೊಬೈಲ್ ಫೋನ್ ನೋಡುತ್ತಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಸಾರಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಮೂರನೇ ಟೆಸ್ಟ್ ನಡೆಯುವ ಗಬ್ಬಾ ಮೈದಾನಕ್ಕೆ ಹೋಗುತ್ತಿರುವ ದೃಶ್ಯ ಇದಾಗಿದೆ. ಆದರೆ, ಮಳೆ ಕಾಟದಿಂದ ಮೊದಲ ದಿನ ರದ್ದಾಗಿದ್ದು, ಅವರಿಗೆ ನಿರಾಸೆಯಾಗಿದೆ.
ಗಿಲ್-ಸಾರಾ ವದಂತಿಗೆ ಪುಷ್ಠಿ
ಟೀಮ್ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ಸಚಿನ್ ಪುತ್ರಿ ಸಾರಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಹಿಂದೆ ಹೋಟೆಲ್ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಇದರ ಮಧ್ಯೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಆದರೆ, ಯಾವುದು ಸತ್ಯ, ಸುಳ್ಳು ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದೀಗ ಬ್ರಿಸ್ಬೇನ್ ಟೆಸ್ಟ್ ವೀಕ್ಷಣೆಗೆ ಆಗಮಿಸಿರುವ ಸಾರಾ, ಗಿಲ್ ಜೊತೆಗಿನ ವದಂತಿಗಳಿಗೆ ಪುಷ್ಠಿ ನೀಡಿದೆ. ನೆಟ್ಟಿಗರಂತೂ, ಗಿಲ್ಗಾಗಿಯೇ ಬಂದಿದ್ದಾರೆ ಎಂದು ಮೀಮ್ಸ್ ಕ್ರಿಯೇಟ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಸಾರಾಗೆ ಹೊಸ ಜವಾಬ್ದಾರಿ ವಹಿಸಿದ ಸಚಿನ್
ಸಚಿನ್ ತೆಂಡೂಲ್ಕರ್ ಅವರು ಇತ್ತೀಚೆಗೆ ತನ್ನ ಪುತ್ರಿ ಸಾರಾಗೆ ಹೊಸ ಜವಾಬ್ದಾರಿ ವಹಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಷನ್ ನಿರ್ದೇಶಕಿಯಾಗಿ ಸಾರಾ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದರು. ಯೂನಿವರ್ಸಿಟಿ ಕಾಲೇಜು ಲಂಡನ್‌ನಿಂದ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಾರಾ, ಅವರು ಎಸ್ಟಿಎಫ್ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ ಎಂದು ಬರೆದುಕೊಂಡಿದ್ದರು. 2019ರಲ್ಲಿ ಈ ಫೌಂಡೇಷನ್ ಪ್ರಾರಂಭವಾಗಿತ್ತು.
ಗಬ್ಬಾದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಎರಡು ಬದಲಾವಣೆಯಾಗಿದೆ. ರವಿಚಂದ್ರನ್ ಅಶ್ವಿನ್ ಮತ್ತು ಹರ್ಷಿತ್ ರಾಣಾ ಬದಲಿಗೆ ರವೀಂದ್ರ ಜಡೇಜಾ ಮತ್ತು ಆಕಾಶ್ ದೀಪ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ, ರೋಹಿತ್ ಶರ್ಮಾ ಆರಂಭಿಕ ಸ್ಥಾನಕ್ಕೆ ಮರಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮತ್ತೆ ಮಧ್ಯಮ ಕ್ರಮಾಂಕದಲ್ಲೇ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡಕ್ಕೆ ಮಳೆ ಅಡ್ಡಿಪಡಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ 13.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಆದರೆ ಮಳೆಯ ಕಾರಣ ಮೊದಲನ ಎರಡು ಸೆಷನ್ಗಳು ವಾಶ್ಔಟ್ ಆಗಿವೆ.