Sarfaraz Khan: ಸರ್ಫರಾಜ್ ಖಾನ್ ಕನಸು ಕೊನೆಗೂ ಈಡೇರಿದ ಕ್ಷಣ; ಮಗನನ್ನು ತಬ್ಬಿ ಆನಂದಭಾಷ್ಪ ಸುರಿಸಿದ ತಂದೆ
Sarfaraz Khan : ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದರು.
ರಣಜಿ ಟ್ರೋಫಿಯ ಪ್ರತಿ ಸೀಸನ್ನಲ್ಲೂ ರನ್ ಮಳೆ ಸುರಿಸುತ್ತಿದ್ದ ಮುಂಬೈ ತಂಡದ ಬಲಗೈ ಬ್ಯಾಟರ್ ಸರ್ಫರಾಜ್ ಖಾನ್ (Sarfaraz Khan), ಕೊನೆಗೂ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಟನ್ಗಟ್ಟಲ್ಲೇ ರನ್ ಸಿಡಿಸಿದ್ದರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಸರ್ಫರಾಜ್ ಕನಸು ಕೊನೆಗೂ ನನಸಗಾಗಿದೆ.
ಹೆಸರು ಬದಲಾವಣೆಯಾದ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಸರ್ಫರಾಜ್ಗೆ ಟೆಸ್ಟ್ ಕ್ಯಾಪ್ ನೀಡಿದರು. ಇದೇ ವೇಳೆ ತನ್ನ ಮಗ ಟೆಸ್ಟ್ ಕ್ಯಾಪ್ ಪಡೆದ ಕ್ಷಣವನ್ನು ಕಣ್ತುಂಬಿಕೊಂಡ ತಂದೆ ನೌಶದ್ ಖಾನ್ ಭಾವುಕರಾಗಿ ಮೈದಾನದಲ್ಲೇ ಆನಂದಭಾಷ್ಟ ಸುರಿಸಿದರು. ಪಡೆದ ಡೆಬ್ಯೂ ಕ್ಯಾಪ್ ಅನ್ನು ತಂದೆಗೆ ಹಸ್ತಾಂತರಿಸಿದರು. ತಂದೆ ಆ ಕ್ಯಾಪ್ಗೆ ಮುತ್ತಿಕ್ಕಿದರು. ಈ ಫೋಟೋಗಳು ವೈರಲ್ ಆಗುತ್ತಿವೆ.
ಈ ಹಿಂದೆ ಆಕ್ರೋಶಕ್ಕೆ ಕಾರಣವಾಗಿತ್ತು
ಸರ್ಫರಾಜ್ ಖಾನ್ಗೆ ಈ ಹಿಂದೆಯೇ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಬೇಕಿತ್ತು. ಆದರೆ ದೇಶೀಯ ಕ್ರಿಕೆಟ್ನ ರನ್ಮಷಿನ್ ಎಂದು ಕರೆಸಿಕೊಳ್ಳುವ ಯಂಗ್ ಬ್ಯಾಟರ್, ಫಿಟ್ನೆಸ್ ಮಾನದಂಡದ ಹಿನ್ನೆಲೆ ಡೆಬ್ಯು ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಪದೆಪದೇ ಯುವ ಆಟಗಾರರನನ್ನು ಕಡೆಗಣಿಸುತ್ತಿದ್ದ ಕಾರಣಕ್ಕೆ ಬಿಸಿಸಿಐ, ಸೆಲೆಕ್ಟರ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಾಜಿ ಕ್ರಿಕೆಟಿಗರು ಸಹ ಅಸಮಾಧಾನ ವ್ಯಕ್ತಪಡಿಸಿದ್ದರು.
26 ವರ್ಷದ ಯುವ ಆಟಗಾರ ಭಾರತೀಯ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದ ಕ್ಷಣದಲ್ಲಿ ಪತ್ನಿ ಶಾಹಿಸ್ತಾ ಖಾನ್ ಸಹ ಮೈದಾನದಲ್ಲಿ ಸಾಕ್ಷಿಯಾಗಿದ್ದರು. ಕಳೆದ ವರ್ಷ ಮದುವೆಯಾಗಿದ್ದ ಸರ್ಫರಾಜ್, ಇತ್ತೀಚೆಗೆ ನಡೆದ ಇಂಗ್ಲೆಂಡ್ ಲಯನ್ಸ್ ಎದುರಿನ 2 ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 96 ಮತ್ತು 55 ರನ್ ಸಿಡಿಸಿದ್ದರು. ಹಿಂದಿನ 3 ರಣಜಿ ಟ್ರೋಫಿ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು.
ಸರ್ಫರಾಜ್ ಪ್ರದರ್ಶನ
2014ರ ಡಿಸೆಂಬರ್ 28ರಂದು ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿಉದ ಸರ್ಫರಾಜ್, ಈವರೆಗೂ 45 ಪಂದ್ಯಗಳ ಪೈಕಿ 66 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದಾರೆ. 69.85ರ ಬ್ಯಾಟಿಂಗ್ ಸರಾಸರಿಯಲ್ಲಿ 3912 ರನ್ ಕಲೆಹಾಕಿದ್ದಾರೆ. 14 ಶತಕ, 11 ಅರ್ಧಶತಕ ಒಳಗೊಂಡಿದೆ. ಅಜೇಯ 301 ರನ್ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.
ಧ್ರುವ್ ಜುರೆಲ್ ಕೂಡ ಪದಾರ್ಪಣೆ
ಸರ್ಫರಾಜ್ ಖಾನ್ ಜೊತೆಗೆ 23 ವರ್ಷದ ವಿಕೆಟ್ ಕೀಪರ್ ಧ್ರುವ ಜುರೆಲ್ (Dhruv Jurel) ಕೂಡ ಭಾರತ ಪರ ಪದಾರ್ಪಣೆ ಗೈದರು. ಈವರೆಗೂ 7 ಟೆಸ್ಟ್ ಪಂದ್ಯಗಳ ಪೈಕಿ 12 ಇನ್ನಿಂಗ್ಸ್ಗಳಲ್ಲಿ 20.09ರ ಬ್ಯಾಟಿಂಗ್ ಸರಾಸರಿಯಲ್ಲಿ 221 ರನ್ ಕಲೆ ಹಾಕಿದ್ದಾರೆ. ಸಿಕ್ಕ ಅವಕಾಶ ಕೈಚೆಲ್ಲಿದ ಭರತ್ರನ್ನು ಕೈ ಬಿಟ್ಟು ಜುರೆಲ್ಗೆ ಅವಕಾಶ ನೀಡಲಾಗಿದೆ. ಬಿಸಿಸಿಐ ಬುಧವಾರ ನಡೆಸಿದ ವಿಶೇಷ ಸಂದರ್ಶನದ ಜೊತೆಗೆ ಫೋಟೋಶೂಟ್ ಮಾಡಿತ್ತು. ಜುರೆಲ್ ಆಡುವುದು ಖಚಿತವಾಗಿತ್ತು.
ಭಾರತ ಆಡುವ 11ರ ಬಳಗ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ 11ರ ಬಳಗ
ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್ ಮತ್ತು ಜೇಮ್ಸ್ ಆಂಡರ್ಸನ್.