ಕನ್ನಡ ಸುದ್ದಿ  /  Cricket  /  Shah Rukh Khan To Sidharth Malhotra To Perform At Opening Ceremony Kartik Aaryan Tiger Shroff Varun Dhawan Wpl 2024 Prs

ಶಾರೂಖ್​ನಿಂದ ಸಿದ್ಧಾರ್ಥ್ ಮಲ್ಹೋತ್ರವರೆಗೆ; ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರ ದಂಡು

WPL opening ceremony : ಫೆಬ್ರವರಿ 23 ರಂದು ಮಹಿಳಾ ಪ್ರೀಮಿಯರ್​ ಲೀಗ್​ 2ನೇ ಆವೃತ್ತಿಗೆ ಚಾಲನೆ ಸಿಗಲಿದೆ. ಶಾರೂಖ್​ ಖಾನ್ ಸೇರಿದಂತೆ ಬಾಲಿವುಡ್ ​ಸ್ಟಾರ್ ನಟರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರ ದಂಡು
ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರ ದಂಡು

ಎರಡನೇ ಆವೃತ್ತಿಯ ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (Women’s Premier League 2024) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 23 ರಿಂದ ಶುರುವಾಗುವ ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದ್ದು, 2024ರ ಆವೃತ್ತಿಯ ಲೀಗ್​​ಗೆ ಬಾಲಿವುಡ್​​​ ಮೆರಗು ಸಿಗಲಿದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ಫೆ.23ರ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್​ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಮೊದಲ ಪಂದ್ಯಕ್ಕೂ ಮುನ್ನ ನಡೆಯಲಿರುವ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.

ಬಾಲಿವುಡ್ ತಾರೆಯರ ದಂಡು

ಐತಿಹಾಸಿಕ ಮಹಿಳಾ ಪ್ರೀಮಿಯರ್ ಲೀಗ್​​​​​​​​ನ​ ಎರಡನೇ ಆವೃತ್ತಿಯನ್ನು ಅದ್ಧೂರಿಯಾಗಿ ಪ್ರಾರಂಭಿಸಲು ಬಿಸಿಸಿಐ ಯೋಜಿಸುತ್ತಿದೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಡಬ್ಲ್ಯುಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಶಾರೂಖ್ ಸೇರಿ ಬಾಲಿವುಡ್​ನ 6 ಸೂಪರ್​​ ಸ್ಟಾರ್​ಗಳು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಶಾಹೀದ್ ಕಪೂರ್, ವರುಣ್ ಧವನ್, ಟೈಗರ್​ ಶ್ರಾಫ್, ಸಿದ್ಧಾರ್ಥ್ ಮಲ್ಹೋತ್ರಾ, ಕಾರ್ತಿಕ್ ಆರ್ಯನ್ ಕೂಡ ಪ್ರದರ್ಶನ ನೀಡಲಿದ್ದು, ಉದ್ಘಾಟನಾ ಕಾರ್ಯಕ್ರಮದ ಅಮಲು ಹೆಚ್ಚಿಸಲಿದ್ದಾರೆ. ಮೊದಲ ಪಂದ್ಯಕ್ಕೆ ಟಿಕೆಟ್​​ ಖರೀದಿಸಲು ಅವಕಾಶ ನೀಡಲಾಗಿದ್ದು ಕ್ರೀಡಾಂಗಣ ಸಂಪೂರ್ಣ ತುಂಬಿ ತುಳುಕುವ ನಿರೀಕ್ಷೆಯಿದೆ. ಕಿಕ್ಕಿರಿದು ತುಂಬಿರುವ ಮೈದಾನದಲ್ಲಿ ಬಾಲಿವುಡ್ ತಾರೆಗಳು ನೃತ್ಯ ಪ್ರದರ್ಶನದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಬ್ಯಾಟ್ ಮತ್ತು ಚೆಂಡಿನ ನಡುವೆ ಕಾಳಗಕ್ಕೂ ಮುನ್ನ ಸುಮಾರು 30 ರಿಂದ 45 ನಿಮಿಷಗಳವರೆಗೆ ಅಭಿಮಾನಿಗಳಿಗೆ ಮನರಂಜನೆ ಸಿಗಲಿದೆ. ಸಂಜೆ 6.30 ಸಮಾರಂಭ ಶುರುವಾಗಲಿದ್ದು, 5 ಗಂಟೆಗೆ ಮೈದಾನದ ಗೇಟ್​​​ಗಳನ್ನು ಓಪನ್​ ಮಾಡಲಾಗುತ್ತದೆ. ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ (Roger Binny), ಕಾರ್ಯದರ್ಶಿ ಜಯ್​ ಶಾ (Jay shah) ಸೇರಿದಂತೆ ಬಿಸಿಸಿಐ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 17 ರವರೆಗೆ ಈ ಲೀಗ್​​ ನಡೆಯಲಿದ್ದು, ಐದು ಫ್ರಾಂಚೈಸಿಗಳು ಒಂದು ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ. ಟೂರ್ನಿಯಲ್ಲಿ ಒಟ್ಟು 20 ಲೀಗ್‌ ಪಂದ್ಯಗಳು, ಒಂದು ಎಲಿಮಿನೇಟರ್, ಫೈನಲ್​ ಸೇರಿ 22 ಪಂದ್ಯಗಳು ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals), ಗುಜರಾತ್‌ ಜೈಂಟ್ಸ್‌ (Gujarat Giants), ಮುಂಬೈ ಇಂಡಿಯನ್ಸ್‌ (Mumbai Indians), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಯುಪಿ ವಾರಿಯರ್ಸ್‌ (UPW) ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯುಪಿ ವಾರಿಯರ್ಜ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎರಡನೇ ಪಂದ್ಯ ನಡೆಯಲಿದೆ. ಮೊದಲ 11 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಉಳಿದ ಲೀಗ್​, ಪ್ಲೇಆಫ್ ಸೇರಿದಂತೆ ಋತುವಿನ ದ್ವಿತೀಯಾರ್ಧವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಡಬ್ಲ್ಯುಪಿಎಲ್​ನ ಮೊದಲ-ಋತುವನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಪಂದ್ಯಗಳನ್ನು ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂನಲ್ಲಿ ಆಡಿಸಲಾಗಿತ್ತು.

ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​​ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗಳಿಂದ ಮೆಗ್ ಲ್ಯಾನಿಂಗ್ ಅವರ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಪಾಯಿಂಟ್ ಪಟ್ಟಿಯಲ್ಲಿ ಯುಪಿ ವಾರಿಯರ್ಜ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದವು.

IPL_Entry_Point