ಹಿಂದಿನ ದಿನ ಕಾಲ್ಬೆರಳು ಮುರಿತ, ಮರುದಿನ ವಿಶ್ವದಾಖಲೆ; ನೋವಿನ ನಡುವೆಯೂ ಪಂದ್ಯ ಗೆಲ್ಲಿಸಿ ಚರಿತ್ರೆ ಸೃಷ್ಟಿಸಿದ ಶಮರ್ ಜೋಸೆಫ್
Shamar Joseph: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕಾಲ್ಬೆರಳು ಮುರಿತಕ್ಕೆ ಒಳಗಾಗಿದ್ದ ವೆಸ್ಟ್ ಇಂಡೀಸ್ ಶಮರ್ ಜೋಸೆಫ್, ನಾಲ್ಕನೇ ದಿನದಾಟದಲ್ಲಿ ಬೌಲಿಂಗ್ ಮಾಡಿ ವಿಶ್ವದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (Australia vs West Indies West Indie) ಐತಿಹಾಸಿಕ ಗೆಲುವು ಸಾಧಿಸಿದೆ. ಆಸೀಸ್ ತನ್ನ ಭದ್ರಕೋಟೆಯಾದ ಗಬ್ಬಾದಲ್ಲಿ ರೋಚಕ ಸೋಲು ಕಂಡಿದೆ. ಬೆಚ್ಚಿ ಬೀಳಿಸುವ ಪ್ರದರ್ಶನ ನೀಡಿದ ಕ್ರೈಗ್ ಬ್ರಾಥ್‌ವೈಟ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ, ಆತಿಥೇಯರ ವಿರುದ್ಧ 8 ರನ್‌ಗಳ ರೋಚಕ ಗೆಲುವಿನೊಂದಿಗೆ 2 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಳಿಸಿದೆ.
ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 311 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಆಸೀಸ್, 19 ವಿಕೆಟ್ ನಷ್ಟಕ್ಕೆ 289 ರನ್‌ಗಳಿಗೆ ಡಿಕ್ಲೇರ್ ಘೋಷಿಸಿತು. ಇದರಿಂದ 22 ರನ್‌ಗಳ ಅಲ್ಪ ಮುನ್ನಡೆ ಪಡೆದ ವಿಂಡೀಸ್ ಎರಡನೇ ಇನ್ನಿಂಗ್ಸ್ನಲ್ಲಿ 193 ರನ್‌ಗಳಿಗೆ ಕುಸಿತ ಕಂಡು ಕಮಿನ್ಸ್ ಪಡೆಗೆ 216 ರನ್‌ಗಳ ಟಾರ್ಗೆಟ್ ನೀಡಿತು.
ಶಮರ್ ಜೋಸೆಫ್ ದಾಳಿಗೆ ಆಸೀಸ್ ಪೆವಿಲಿಯನ್ ಪರೇಡ್
216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 207 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪ್ರವಾಸಿ ತಂಡದ ಎದುರು ಬಲಿಷ್ಠ ಆಸೀಸ್ ಶರಣಾಯಿತು. ಆರಂಭಿಕ ಆಟಗಾರ ಸ್ಟೀವ್ ಸ್ಮಿತ್ 91 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಘಟಾನುಘಟಿ ಆಟಗಾರರೇ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಆಸೀಸ್ ಬ್ಯಾಟಿಂಗ್ ಘಟಕ ವಿಭಾಗ ಕುಸಿಯಲು ಕಾರಣರಾಗಿದ್ದು ವೇಗಿ ಶಮರ್ ಜೋಸೆಫ್. ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶಮರ್ ಜೋಸೆಫ್. ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಎರಡನ್ನೂ ಗೆದ್ದರು. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಪಡೆದಿದ್ದ ಶಮರ್ 2ನೇ ಇನ್ನಿಂಗ್ಸ್ನಲ್ಲಿ ಆಸೀಸ್ ಬ್ಯಾಟಿಂಗ್ ಕೋಟೆ ಧೂಳೀಪಟ ಮಾಡಿದರು. ಮಾರಕ ಬೌಲಿಂಗ್ ದಾಳಿಗೆ ಕಾಂಗರೂ ಪಡೆ ಬೆದರಿತು.
216 ರನ್‌ಗಳ ಅಲ್ಪ ಮೊತ್ತವನ್ನು ರಕ್ಷಿಸಲು ನೆರವಾದ ಜೋಸೆಫ್, 11.5 ಓವರ್ಗಳಲ್ಲಿ 68 ರನ್ ಬಿಟ್ಟುಕೊಟ್ಟು 7 ವಿಕೆಟ್ ಉರುಳಿಸಿದರು. ಘಟಾನುಘಟಿ ಆಟಗಾರರಾದ ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್ ಅವರನ್ನು ಔಟ್ ಮಾಡಿ ಹೊಸ ದಾಖಲೆ ಬರೆದರು. ಮತ್ತೊಂದು ಅಚ್ಚರಿ ಅವರ ಕಾಲು ಬೆರಳು ಮುರಿದಿತ್ತು.
ಹಿಂದಿನ ದಿನ ಕಾಲು ಬೆರಳು ಮುರಿತ, ಮರುದಿನ ವಿಶ್ವದಾಖಲೆ
ಪಂದ್ಯದ ಮೂರನೇ ದಿನದಂದು ಎರಡನೇ ಇನ್ನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಯಾರ್ಕರ್ ಬ್ಯಾಟಿಂಗ್ ಮಾಡುವಾಗ ಶಮರ್ ಜೋಸೆಫ್ ಕಾಲಿನ ಬೆರಳಿಗೆ ಬಿದ್ದಿತ್ತು. ನೇರವಾಗಿ ಬೆರಳಿಗೆ ಬಿದ್ದ ಕಾರಣ ಮುರಿತಕ್ಕೆ ಒಳಗಾಗಿತ್ತು. ಹಾಗಾಗಿ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು. ಆತ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ನೋವಿನ ನಡುವೆಯೂ ಮರುದಿನ 4ನೇ ದಿನದಾಟದಲ್ಲಿ ಆಸೀಸ್ ವಿರುದ್ಧದ 2ನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ನಡೆಸಿ ದಂಡಯಾತ್ರೆ ನಡೆಸಿದರು.
ಶಮರ್ ಜೋಸೆಫ್ ವಿಶ್ವದಾಖಲೆಗಳು
24 ವರ್ಷದ ವೇಗಿದೆ ಇದು ಚೊಚ್ಚಲ ಟೆಸ್ಟ್ ಸರಣಿ. ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ್ದ ಶಮರ್, ಎರಡನೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಸೇರಿ ಒಟ್ಟು 8 ಬಲಿ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಮಾತ್ರ ಕಬಳಿಸಿದ್ದರು. ಆಸೀಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿಯ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ 5ಕ್ಕಿಂತ ವಿಕೆಟ್ ಉರುಳಿಸಿದ ವಿಂಡೀಸ್ನ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಲ್ಲದೆ, ಕಾಂಗರೂ ನಾಡಿನಲ್ಲಿ ಟೆಸ್ಟ್ ಪಂದ್ಯದ ಇನ್ನಿಂಗ್ಸ್ವೊಂದರಲ್ಲಿ 7 ವಿಕೆಟ್ ಕಬಳಿಸಿದ ವಿಂಡೀಸ್ 4ನೇ ಬೌಲರ್ ಎಂಬ ದಾಖಲೆಗೆ ಶಮರ್ ಪಾತ್ರರಾಗಿದ್ದಾರೆ. ಈ ಹಿಂದೆ ಕರ್ಟ್ಲಿ ಆಂಬ್ರೋಸ್ 25ಕ್ಕೆ 7 ವಿಕೆಟ್ (1993), ಆಂಡಿ ರಾಬರ್ಟ್ಸ್ 54ಕ್ಕೆ 7 (1975), ಗೆರ್ರಿ ಗೊಮೆಜ್ 55ಕ್ಕೆ 7 ವಿಕೆಟ್ (1952) ಪಡೆದು ಈ ಸಾಧನೆ ಮಾಡಿದ್ದರು. ಇದೀಗ ಪಟ್ಟಿಗೆ ಶಮರ್ (7/68, 2024) ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಇನ್ನು ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶಮರ್ ಜೋಸೆಫ್ ವಿಶೇಷ ದಾಖಲೆ ಬರೆದಿದ್ದರು. ಪದಾರ್ಪಣೆ ಪಂದ್ಯದಲ್ಲಿ ತಾನೆಸೆದ ಮೊದಲ ಚೆಂಡಿನಲ್ಲೇ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದರು. ಆ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ಚೊಚ್ಚಲ ವಿಕೆಟ್ ಪಡೆದ ವೆಸ್ಟ್ ಇಂಡೀಸ್ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.