ಸಿಎಸ್‌ಕೆ ಸ್ಪಿನ್ ಅಸ್ತ್ರಗಳನ್ನು ಎದುರಿಸಲು ಆರ್‌ಸಿಬಿಗೆ ಸಲಹೆ ನೀಡಿದ ಶೇನ್ ವ್ಯಾಟ್ಸನ್; ಈ ತಪ್ಪು ಮಾಡಬಾರದಂತೆ
Chennai Super Kings vs Royal Challengers Bengaluru: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಶೇನ್ ವ್ಯಾಟ್ಸನ್ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಚೆನ್ನೈ ತಂಡದ ಸ್ಪಿನ್ ಬೌಲರ್‌ಗಳನ್ನು ಎದುರಿಸಲು ಅಗತ್ಯ ಸಂಯೋಜನೆ ಸೂಚಿಸಿದ್ದಾರೆ.

ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಆರ್‌ಸಿಬಿ ತಂಡವು, ಟೂರ್ನಿಯಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings vs Royal Challengers Bengaluru) ತಂಡವನ್ನು ಎದುರಿಸುತ್ತಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಜಯದ ಆರಂಭ ಪಡೆಯಿತು. ಅತ್ತ ಸಿಎಸ್‌ಕೆ ಕೂಡಾ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. ಇಂದಿನ ಪಂದ್ಯವು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿದ್ದು, ತವರು ನೆಲದಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಲು ಸೂಪರ್ ಕಿಂಗ್ಸ್ ಎದುರು ನೋಡುತ್ತಿದೆ.
ಸಿಎಸ್‌ಕೆಗೆ ತವರಿನಲ್ಲಿ ಇದು ಸತತ ಎರಡನೇ ಪಂದ್ಯ. ಇಲ್ಲಿ ಸ್ಪಿನ್ ಬೌಲರ್‌ಗಳು ಪ್ರಾಬಲ್ಯ ಸಾಧಿಸುವುದು ಸಾಮಾನ್ಯ. ಇದೀಗ ಮಹತ್ವದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಮತ್ತು ಆರ್‌ಸಿಬಿ ಎರಡೂ ತಂಡಗಳನ್ನು ಪ್ರತಿನಿಧಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್, ಆರ್‌ಸಿಬಿ ತಂಡಕ್ಕೆ ಕೆಲವೊಂದು ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಆರ್‌ಸಿಬಿ ತಂಡದ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಸೂಚಿಸಿದ್ದಾರೆ.
“ಆರ್‌ಸಿಬಿ ತಂಡಕ್ಕೆ ಚೆಪಾಕ್ ಪಿಚ್‌ನಲ್ಲಿ ಆಡುವುದು ದೊಡ್ಡ ಸವಾಲಾಗಲಿದೆ. ವಿಶೇಷವಾಗಿ ಸಿಎಸ್‌ಕೆ ತಂಡದ ಬೌಲರ್‌ಗಳ ಗುಣಮಟ್ಟವನ್ನು ಗಮನಿಸಿದರೆ, ಇದು ತುಂಬಾ ಮುಖ್ಯವಾಗಲಿದೆ. ಚೆನ್ನೈ ಬೌಲರ್‌ಗಳನ್ನು ಎದುರಿಸಲು ಆರ್‌ಸಿಬಿ ತಮ್ಮ ತಂಡದ ಸಂಯೋಜನೆಯನ್ನು ಸರಿಯಾಗಿ ಹೊಂದಿಸಬೇಕಾಗುತ್ತದೆ. ಇಲ್ಲಿ ಯಾವುದೇ ತಪ್ಪು ಆಗದಂತೆ ಎಚ್ಚರ ವಹಿಸಬೇಕು. ಏಕೆಂದರೆ ಚೆಪಾಕ್ ಸಿಎಸ್‌ಕೆ ಭದ್ರ ಕೋಟೆ," ಎಂದು ವ್ಯಾಟ್ಸನ್ ಜಿಯೋಸ್ಟಾರ್‌ನಲ್ಲಿ ಹೇಳಿದ್ದಾರೆ.
ಗುಣಮಟ್ಟದ ಬೌಲರ್‌ಗಳನ್ನು ಎದುರಿಸಬೇಕಿದೆ
ಸಿಎಸ್‌ಕೆ ತಂಡದಲ್ಲಿ ಅನುಭವಿ ಸ್ಪಿನ್ನರ್‌ಗಳಿದ್ದಾರೆ. ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್ ಮತ್ತು ರವೀಂದ್ರ ಜಡೇಜಾ ಉತ್ತಮ ಗುಣಮಟ್ಟದ ಬೌಲರ್‌ಗಳು. ಇವರ ವಿರುದ್ಧ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ ಗಳಿಸುವುದು ಸವಾಲಿನ ಸಂಗತಿಯಾಗಿದೆ.
“ಚೆನ್ನೈ ಪಿಚ್‌ಗೆ ಅನುಗುಣವಾಗಿ ಸಿಎಸ್‌ಕೆ ತಂಡವನ್ನು ಕಟ್ಟಲಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಮೂವರು ಸ್ಪಿನ್ನರ್‌ಗಳಾದ ಅಶ್ವಿನ್, ಜಡೇಜಾ ಮತ್ತು ನೂರ್ ಅಹ್ಮದ್ ಅವರನ್ನು ನೋಡಿದರೆ ಇದು ಗೊತ್ತಾಗುತ್ತದೆ. ಅವರು ಈ ಪಿಚ್‌ಗೆ ತಕ್ಕ ಆಟಗಾರರು” ಎಂದು ವ್ಯಾಟ್ಸನ್ ಹೇಳಿದ್ದಾರೆ.
ನೂರ್ ಅಹ್ಮದ್ ಎಕ್ಸ್ ಫ್ಯಾಕ್ಟರ್
"ಸಿಎಸ್‌ಕೆ ಪರ ನೂರ್ ಅಹ್ಮದ್ ತಮ್ಮ ಮೊದಲ ಪಂದ್ಯದಲ್ಲಿಯೇ ಇಷ್ಟೊಂದು ಪ್ರಭಾವ ಬೀರುವುದನ್ನು ನೋಡುವುದು, ಅದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅವರಿಗೆ ವಿಕೆಟ್ ಪಡೆಯುವ ಇನ್ನೊಂದು ಆಯ್ಕೆ ಸಿಕ್ಕಂತಾಗಿದೆ" ಎಂದು ವ್ಯಾಟ್ಸನ್ ಹೇಳಿದ್ದಾರೆ.
ಅಫ್ಘಾನಿಸ್ತಾನದ ಸ್ಪಿನ್ನರ್ ನೂರ್ ಅಹ್ಮದ್, ಎಂಐ ವಿರುದ್ಧ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ 18 ರನ್‌ಗಳನ್ನು ಬಿಟ್ಟುಕೊಟ್ಟು 4 ವಿಕೆಟ್‌ಗಳನ್ನು ಪಡೆದರು. ಹೀಗಾಗಿ ತಂಡದ ಸ್ಪಿನ್ ಅಸ್ತ್ರ ಮತ್ತಷ್ಟು ಬಲಿಷ್ಠವಾಗಿದೆ.
