ಪಂಜಾಬ್ ಕಿಂಗ್ಸ್ ಅತಿರೋಚಕ ಚೇಸಿಂಗ್; ಶಶಾಂಕ್ ಸಿಂಗ್ ಆರ್ಭಟಕ್ಕೆ ಬೆಚ್ಚಿದ ಗುಜರಾತ್ ಟೈಟಾನ್ಸ್ಗೆ ಸೋಲು
Gujarat Titans vs Punjab Kings : 17ನೇ ಆವೃತ್ತಿಯ ಐಪಿಎಲ್ನ 17ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಅತಿರೋಚಕ ಗೆಲುವು ದಾಖಲಿಸಿದೆ.
ಶಶಾಂಕ್ ಸಿಂಗ್ (61*) ಅವರ ಅಬ್ಬರದ ಹೋರಾಟದ ಫಲವಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ದಾಖಲಿಸಿದೆ. ಐಪಿಎಲ್ನ 17ನೇ ಪಂದ್ಯದಲ್ಲಿ 200 ರನ್ಗಳ ಸೂಪರ್ ಚೇಸ್ನಲ್ಲಿ ಮಿಂಚಿದ ಪಿಬಿಕೆಎಸ್, ಟೂರ್ನಿಯಲ್ಲಿ ಎರಡನೇ ಜಯದ ನಗೆ ಬೀರಿದೆ. ಅತ್ತ 89 ರನ್ ಬಾರಿಸಿದ್ದ ಶುಭ್ಮನ್ ಗಿಲ್ ಅವರ ಆಕರ್ಷಕ ಆಟ ವ್ಯರ್ಥಗೊಂಡಿತು. ಗುಜರಾತ್ 2ನೇ ಸೋಲು ಅನುಭವಿಸಿದೆ. ಪಂಜಾಬ್ ಆಡಿದ 4ರಲ್ಲಿ ತಲಾ ಎರಡು ಗೆಲುವು-ಸೋಲು ಕಂಡಿದೆ. ಅದೇ ರೀತಿ ಟೈಟಾನ್ಸ್ ಕೂಡ ಅಷ್ಟೆ ಗೆಲುವು ಸೋಲು ಕಂಡಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಉತ್ತಮ ಪ್ರದರ್ಶನ ತೋರಿತು. ಶುಭ್ಮನ್ ಗಿಲ್ (89*) ಅವರ ಅದ್ಭುತ ಆಟದ ನೆರವಿನಿಂದ ಜಿಟಿ ಬೃಹತ್ ಮೊತ್ತ ಕಲೆ ಹಾಕಲು ನೆರವಾಯಿತು. 20 ಓವರ್ಗಳಲ್ಲಿ 4 ವಿಕೆಟ್ಗೆ 199 ರನ್ ಗಳಿಸಿತು. 200 ರನ್ಗಳ ಮೊತ್ತ ಬೆನ್ನಟ್ಟಿದ ಪಂಜಾಬ್ ಶಶಾಂಕ್ ಸಿಂಗ್ ಹೋರಾಟದ ಫಲವಾಗಿ ಗೆದ್ದು ಬೀಗಿದೆ. ಒಂದು ಎಸೆತ ಬಾಕಿ ಇರುವಂತೆಯೇ 3 ವಿಕೆಟ್ಗಳಿಂದ ಗೆದ್ದಿತು.
ಬೃಹತ್ ಮೊತ್ತ ಚೇಸ್ ಮಾಡಿದ ಪಂಜಾಬ್, ಜಿಟಿ ಬೌಲರ್ಗಳ ದಾಳಿಗೆ ತತ್ತರಿಸಿತು. ಶಿಖರ್ ಧವನ್ (1), ಜಾನಿ ಬೈರ್ಸ್ಟೋ (22), ಸ್ಯಾಮ್ ಕರನ್ (5) ಬೇಗನೇ ಔಟಾದರು. ಇದರ ಬೆನ್ನಲ್ಲೇ ಚೇತರಿಕೆ ನೀಡುತ್ತಿದ್ದ ಪ್ರಭುಸಿಮ್ರಾನ್ ಸಿಂಗ್ 35ಕ್ಕೆ ಆಟ ಮುಗಿಸಿದರು. ಈ ಐಪಿಎಲ್ನಲ್ಲಿ ಮೊದಲ ಅವಕಾಶ ಪಡೆದ ಸಿಕಂದರ್ ರಾಝಾ ಕೂಡ ಮಿಂಚಲಿಲ್ಲ. ಇದು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಟಾಪ್-5 ಬ್ಯಾಟರ್ಸ್ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ.
ಶಶಾಂಕ್ ಸಿಂಗ್ ಮಿಂಚು
6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಶಾಂಕ್ ಸಿಂಗ್ ಪಂಜಾಬ್ ಬೌಲರ್ಗಳಿಗೆ ಬೆವರಿಳಿಸಿದರು. ಸತತ ವಿಕೆಟ್ ಪತನವಾಗುತ್ತಿದ್ದರೂ, ದಿಟ್ಟ ಹೋರಾಟ ನಡೆಸಿದರು. ಸೂಪರ್ ಚೇಸ್ನಲ್ಲಿ ಕೇವಲ 15 ರನ್ ಗಳಿಸಿ ಜಿತೇಶ್ ಶರ್ಮಾ ಔಟಾದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅಶುತೋಷ್ ಶರ್ಮಾ ಸಂಖತ್ ಇಂಪ್ಯಾಕ್ಟ್ಫುಲ್ ಇನ್ನಿಂಗ್ಸ್ ಕಟ್ಟಿದರು. 17 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ನೊಂದಿಗೆ 31 ರನ್ ಗಳಿಸಿದರು. ಅದಾಗಲೇ ಪಂಜಾಬ್ ಗೆಲುವಿನ ಸನಿಹಕ್ಕೆ ಬಂದಿತ್ತು. ಶಶಾಂಕ್, 29 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ಗಳೊಂದಿಗೆ ಅಜೇಯ 61 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ ಪಂಜಾಬ್ ಗೆಲುವಿಗೆ 7 ರನ್ ಬೇಕಿತ್ತು. ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಗೆದ್ದು ಬೀಗಿತು.
ಶುಭ್ಮನ್ ಗಿಲ್ ಸಖತ್ ಆಟ
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ಗೆ ವೃದ್ಧಿಮಾನ್ ಸಾಹ (11) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಆದರೆ ನಾಯಕ ಶುಭ್ಮನ್ ಗಿಲ್ ಜವಾಬ್ದಾರಿಯುತ ಆಟದ ಮೂಲಕ ಗಮನ ಸೆಳೆದರು. ಅವರಿಗೆ ಸಾಥ್ ನೀಡಿದ ಕೇನ್ ವಿಲಿಯಮ್ಸನ್ 26 ರನ್ ಗಳಿಸಿ ಔಟಾದರು. ಹರ್ಪ್ರೀತ್ ಬ್ರಾರ್ ಈ ವಿಕೆಟ್ ಪಡೆದರು. ಮತ್ತೊಂದೆಡೆ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದ ಗಿಲ್ ಭರ್ಜರಿ ಅರ್ಧಶತಕವನ್ನು ಪೂರೈಸಿದರು. ಈ ಐಪಿಎಲ್ನಲ್ಲಿ ಅವರ ಮೊದಲ ಅರ್ಧಶತಕ.
ಗಿಲ್ ಜೊತೆ ಅರ್ಧಶತಕದ ಪಾಲುದಾರಿಕೆ ನೀಡಿದ ಸಾಯಿ ಸುದರ್ಶನ್, 33 ರನ್ಗಳ ಕಾಣಿಕೆ ನೀಡಿದರು. ಕೊನೆಯವರೆಗೂ ಕ್ರೀಸ್ ಕಚ್ಚಿ ನಿಂತ ಶುಭ್ಮನ್ ಗಿಲ್ ಅಜೇಯರಾಗಿ ಉಳಿದರು. 48 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ಗಳೊಂದಿಗೆ 89 ರನ್ ಚಚ್ಚಿದರು. ವಿಜಯ್ ಶಂಕರ್ 8 ರನ್ ಗಳಿಸಿ ನಿರಾಸೆ ಮೂಡಿಸಿದರೆ, ಕೊನೆಯಲ್ಲಿ ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ 23 ರನ್ ಗಳಿಸಿ ಮಿಂಚಿದರು. ಪರಿಣಾಮ ಜಿಟಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.