ಅಂದು ತಪ್ಪಾಗಿ ಖರೀದಿಸಿದ್ದ ಆಟಗಾರನೇ ಈಗ ಪಂಜಾಬ್ ಕಿಂಗ್ಸ್ ಮ್ಯಾಚ್​ವಿನ್ನರ್​; ಅದೃಷ್ಟ ತಂದುಕೊಟ್ಟ ಆ ಒಂದು 'ಮಿಸ್ಟೇಕ್'
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದು ತಪ್ಪಾಗಿ ಖರೀದಿಸಿದ್ದ ಆಟಗಾರನೇ ಈಗ ಪಂಜಾಬ್ ಕಿಂಗ್ಸ್ ಮ್ಯಾಚ್​ವಿನ್ನರ್​; ಅದೃಷ್ಟ ತಂದುಕೊಟ್ಟ ಆ ಒಂದು 'ಮಿಸ್ಟೇಕ್'

ಅಂದು ತಪ್ಪಾಗಿ ಖರೀದಿಸಿದ್ದ ಆಟಗಾರನೇ ಈಗ ಪಂಜಾಬ್ ಕಿಂಗ್ಸ್ ಮ್ಯಾಚ್​ವಿನ್ನರ್​; ಅದೃಷ್ಟ ತಂದುಕೊಟ್ಟ ಆ ಒಂದು 'ಮಿಸ್ಟೇಕ್'

Who is Shashank Singh : ಐಪಿಎಲ್ ಮಿನಿ ಹರಾಜಿನಲ್ಲಿ ತಪ್ಪಾಗಿ ಖರೀದಿಸಿದ್ದ ಆಟಗಾರನೇ ಈಗ ಪಂಜಾಬ್ ಕಿಂಗ್ಸ್ ತಂಡದ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿದ್ದಾರೆ. ಹಾಗಾದರೆ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿದ ಶಶಾಂಕ್ ಸಿಂಗ್ ಯಾರು? ಇಲ್ಲಿದೆ ವಿವರ.

ಪಂಜಾಬ್ ಕಿಂಗ್ಸ್ ರೋಚಕ ಜಯದ ರೂವಾರಿ ಶಶಾಂಕ್ ಸಿಂಗ್ ಯಾರು
ಪಂಜಾಬ್ ಕಿಂಗ್ಸ್ ರೋಚಕ ಜಯದ ರೂವಾರಿ ಶಶಾಂಕ್ ಸಿಂಗ್ ಯಾರು

17ನೇ ಆವೃತ್ತಿಯ ಐಪಿಎಲ್​ನ 17ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಪಂಜಾಬ್ ಕಿಂಗ್ಸ್‌ (Punjab Kings) ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ 'ಶಶಾಂಕ್ ಸಿಂಗ್' (Shashank Singh) ಹೀರೋ ಆಗಿ ಹೊರಹೊಮ್ಮಿದ್ದಾರೆ. ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 'ತಪ್ಪಾಗಿ ಖರೀದಿಸಿದ' ಅನ್​ಕ್ಯಾಪ್ಡ್ ಇಂಡಿಯನ್ ಆಲ್​ರೌಂಡರ್ ಶಶಾಂಕ್​ ಸಿಂಗ್, ಸೂಪರ್​ ಚೇಸ್​​ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಪಂದ್ಯಶ್ರೇಷ್ಠ ವಿಜೇತರಾಗಿದ್ದಾರೆ. ನಿಮಗಿದು ಗೊತ್ತಾ, ಹರಾಜಿನಲ್ಲಿ ಈತನನ್ನು ಪಿಬಿಕೆಎಸ್​ ತಪ್ಪಾಗಿ ಖರೀದಿಸಿತ್ತು. ಆದರೆ ಆ ಒಂದು ತಪ್ಪು ಇಂದು ಪಂಜಾಬ್​ಗೆ ವರವಾಗಿದ್ದು, ಆತನೇ ತಂಡದ ಪರ ಹೀರೋ ಆಗಿರುವುದು ವಿಶೇಷ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ನಡೆಸಿತ್ತು. ಶುಭ್ಮನ್ ಗಿಲ್ ಅವರ ಆಕರ್ಷಕ ಅರ್ಧಶತಕದ (89*) ಸಹಾಯದಿಂದ ಜಿಟಿ 200 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಸೋಲುವುದು ಕಾಯಂ ಎಂದು ಕೆಲವರು ಷರಾ ಬರೆದುಬಿಟ್ಟಿದ್ದರು. ಪಿಬಿಕೆಎಸ್ 10 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು. ಗೆಲುವಿಗೆ 10 ಓವರ್​ಗಳಲ್ಲಿ ಇನ್ನೂ 117 ರನ್ ಬೇಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಶಶಾಂಕ್ ಘರ್ಜಿಸಿದರು.

ಇದೇ ವೇಳೆ ಸಿಕಂದರ್​ ರಾಜಾ ಮತ್ತು ಜಿತೇಶ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿಬಿಟ್ಟರು. ಆದರೂ ಏಕಾಂಗಿ ಹೋರಾಟ ನಡೆಸಿದ ಶಶಾಂಕ್, ಜಿಟಿ ಬೌಲರ್​​ಗಳ ಮೇಲೆ ದಂಡಯಾತ್ರೆ ನಡೆಸಿದರು. ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದು ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಮೊದಲು ಸೋಲುತ್ತೆ ಎಂದವರೆ ಬಾಯಲ್ಲೇ ಪಂಜಾಬ್ ಗೆಲ್ಲುತ್ತೆ ಎನ್ನುವಂತೆ ಮಾಡಿಬಿಟ್ಟರು. ಕೇವಲ 29 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​ಗಳೊಂದಿಗೆ ಅಜೇಯ 61 ರನ್ ಚಚ್ಚು ಮೂಲಕ ಪಂಜಾಬ್ ರೋಚಕ ಗೆಲುವಿಗೆ ಸಾಕ್ಷಿಯಾದರು. ಆದರೆ ಈ ಆಟಗಾರರನ್ನು ಪಿಬಿಕೆಎಸ್ ಖರೀದಿಸಿದ್ದೇ ತಪ್ಪಾಗಿ ಎಂಬ ವಿಷಯ ಸಾಕಷ್ಟು ಮಂದಿಗೆ ಗೊತ್ತಿಲ್ಲ.

ತಪ್ಪಾಗಿ ಖರೀದಿಸಿದ ಆಟಗಾರನೇ ಈಗ ಮ್ಯಾಚ್ ವಿನ್ನರ್

2023ರ ಡಿಸೆಂಬರ್ 19ರಂದು ದುಬೈನಲ್ಲಿ ಜರುಗಿದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ 32 ವರ್ಷದ ಆಲ್​ರೌಂಡರ್ ಶಶಾಂಗ್ ಸಿಂಗ್ ಅವರನ್ನು ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಮ್ಯಾನೇಜ್​ಮೆಂಟ್ ತಪ್ಪಾಗಿ ಖರೀದಿಸಿತ್ತು. ಆದರೀಗ ಆತನೇ ಮ್ಯಾಚ್​​ ವಿನ್ನರ್ ಆಗಿ ರೂಪುಗೊಂಡಿರುವುದು ವಿಶೇಷ. ಖರೀದಿ ವೇಳೆ ಎಲ್ಲಾ ತಂಡಗಳು ಅಳೆದು ತೂಗಿ ಖರೀದಿ ಮಾಡುತ್ತಿದ್ದವು. ಆದರೆ ಪಿಬಿಕೆಎಸ್​ ತಪ್ಪಾದ ಆಟಗಾರನ ಮೇಲೆ ಬಿಡ್ ಮಾಡಿ ಎಡವಟ್ಟು ಮಾಡಿಕೊಂಡಿತ್ತು. ಅಲ್ಲದೆ, ಒಂದೇ ಹೆಸರಿನ ಆಟಗಾರರು ಇಬ್ಬರಿದ್ದ ಕಾರಣ ಫ್ರಾಂಚೈಸಿ ಮ್ಯಾನೇಜ್​ಮೆಂಟ್​ ಗೊಂದಲಕ್ಕೂ ಒಳಗಾಗಿತ್ತು.

ದೇಶೀಯ ಕ್ರಿಕೆಟರ್​​ಗಳ ಬಿಡ್​ನ ಅಂತಿಮ ಸುತ್ತಿನ ಪಟ್ಟಿಯಲ್ಲಿದ್ದ ಆಟಗಾರರ ಪೈಕಿ ಶಶಾಂಕ್ ಸಿಂಗ್ ಕೂಡ ಒಬ್ಬ. ಈತ ಹರಾಜಿಗೆ ಬಂದಾಗ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ 20 ಲಕ್ಷ ಮೂಲ ಬೆಲೆಗೆ ಬಿಡ್ ಮಾಡಿದರು. ಆದರೆ ಆ ಬಳಿಕ ತಾವು ಬಿಡ್ ಮಾಡಬೇಕಿದ್ದ ಆಟಗಾರ ಈತನಲ್ಲ ಎಂದು ತಿಳಿದುಕೊಂಡಿತ್ತು. ಅಷ್ಟರಲ್ಲಿ ಹರಾಜು ಪ್ರಕ್ರಿಯೆ ಮುಗಿದೇ ಹೋಗಿತ್ತು. ಬಿಡ್ಡಿಂಗ್ ವಾಪಸ್ ಪಡೆಯುವಂತೆ ಹರಾಜು ನಡೆಸಿಕೊಟ್ಟ ಮಲ್ಲಿಕಾ ಸಾಗರ್​ಗೆ ಪಿಬಿಕೆಎಸ್ ಮ್ಯಾನೇಜ್​ಮೆಂಟ್ ಮನವಿ ಮಾಡಿತ್ತು. ಆದರೆ ಬಿಡ್ ವಾಪಸ್ ಪಡೆಯಲು ಮತ್ತು ಶಶಾಂಕ್​ರನ್ನು ಮರು ಹರಾಜಿಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಮಲ್ಲಿಕಾ ನಿರಾಕರಿಸಿದ್ದರು.

ದೇಶೀಯ ಕ್ರಿಕೆಟ್​ನಲ್ಲಿ ಚತ್ತೀಸ್​ಗಢ ತಂಡವನ್ನು ಪ್ರತಿನಿಧಿಸುತ್ತಿರುವ ಈ 32 ವರ್ಷದ ಶಶಾಂಕ್​ ಹೆಸರನ್ನು ಹರಾಜಿನಲ್ಲಿ ಮಲ್ಲಿಕಾ ಅವರು ಕರೆಯುತ್ತಿದ್ದಂತೆ ಪಂಜಾಬ್​ ಮೂಲಬೆಲೆ ಬಿಡ್ ಮಾಡಿಬಿಟ್ಟಿತು. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಡದ ಶಶಾಂಕ್ 2022ರ ಐಪಿಎಲ್​ನ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದರು. ಪ್ರೀತಿ ಝಿಂಟಾ ಅವರು ತಮ್ಮ ಮ್ಯಾನೇಜ್​ಮೆಂಟ್ ಜೊತೆ ಚರ್ಚಿಸಿ ಪ್ಲ್ಯಾಡ್ ಮೇಲೆತ್ತಿ ಬಿಡ್ ಸಲ್ಲಿಸಿದರು. ಬೇರೆ ಯಾರೂ ಬಿಡ್​ ಮಾಡಲು ಮುಂದಾಗದ ಕಾರಣ ಪಂಜಾಬ್​ ತಂಡಕ್ಕೆ ಅವರು ಸೋಲ್ಡ್ ಆದರು. ಆದರೆ ಅವರು ಖರೀದಿಸಬೇಕಿದ್ದದ್ದು ಅದೇ ಹೆಸರಿನ ಮತ್ತೊಬ್ಬ ಆಟಗಾರರನ್ನು. ಐಪಿಎಲ್ ನಿಯಮಗಳ ಪ್ರಕಾರ ಒಂದು ಸಲ ಹ್ಯಾಮರ್ ಡೌನ್ ಆದ ಬಳಿಕ ಮತ್ತೆ ಖರೀದಿಸಿದ ಆಟಗಾರರನ್ನು ಕೈಬಿಡಲು ಸಾಧ್ಯವಿಲ್ಲ.

ಐಪಿಎಲ್​ನಲ್ಲಿ ಆಡಿದ ಅನುಭವ

ಶಶಾಂಕ್ ಸಿಂಗ್ ಅವರು 2019ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು. ಅಂದು 30 ಲಕ್ಷಕ್ಕೆ ಖರೀದಿಯಾಗಿದ್ದರು. 2020 ಆವೃತ್ತಿಯಲ್ಲೂ ಅದೇ ತಂಡದಲ್ಲಿದ್ದರು. ಆದರೆ ಎರಡು ಆವೃತ್ತಿಗಳು ತಂಡದಲ್ಲಿದ್ದರೂ ಆತನಿಗೆ ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಬಳಿಕ 2022ರಲ್ಲಿ 20 ಲಕ್ಷಕ್ಕೆ ಸನ್​ರೈಸರ್ಸ್ ಹೈದರಾಬಾದ್ ಪಾಲಾಗಿದ್ದರು. ಆದರೆ ಅವರು 10 ಪಂದ್ಯಗಳಲ್ಲಿ 69 ರನ್ ಮಾತ್ರ ಗಳಿಸಿದ್ದರು. ಕೆಟ್ಟ ಪ್ರದರ್ಶನ ನೀಡಿದ್ದ ಅವರನ್ನು ಕೈಬಿಡಲಾಗಿತ್ತು. ಇದೇ ಪ್ರದರ್ಶನವನ್ನು ನೆನಪಿಟ್ಟುಕೊಂಡಿದ್ದ ಪಿಬಿಕೆಎಸ್​ ತಾವು ತಪ್ಪಾಗಿ ಆಟಗಾರರನ್ನು ಖರೀದಿಸಿದ್ದೇವೆ ಎಂದು ಹೇಳಿತ್ತು. ಆದರೆ ಖರೀದಿಸಿದ ಆಟಗಾರರನ್ನು ಕೈಬಿಡಲು ಸಾಧ್ಯವಾಗಲಿಲ್ಲ.

ಐಪಿಎಲ್ ಹರಾಜಿನಲ್ಲಿ ತಪ್ಪಾಗಿ ತಂಡವನ್ನು ಸೇರಿಕೊಂಡ ಶಶಾಂಕ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲೂ ಅಬ್ಬರಿಸಿದ್ದರು. ಆರ್​ಸಿಬಿ ಎದುರು ಪಂಜಾಬ್ 19 ಓವರ್​​ಗಳಲ್ಲಿ 156 ರನ್ ಗಳಿಸಿತ್ತು. ಆದರೆ 20ನೇ ಓವರ್​ ಬ್ಯಾಟಿಂಗ್ ನಡೆಸಿದ ಶಶಾಂಕ್, ಒಂದೇ ಓವರ್​ನಲ್ಲಿ 20 ರನ್ ಚಚ್ಚಿದರು. ವೈಯಕ್ತಿವಾಗಿಯೂ 8 ಎಸೆತಗಳಲ್ಲಿ 21 ರನ್ ಚಚ್ಚಿದ್ದರು. ಈಗ ಗುಜರಾತ್​ ವಿರುದ್ಧ ಮ್ಯಾಚ್​ ವಿನ್ನರ್ ಆಗಿದ್ದಾರೆ. ಸದ್ಯದ ಮಟ್ಟಿಗೆ ತಪ್ಪಾಗಿ ಖರೀದಿದರೂ ನಮಗೆ ಒಳ್ಳೆಯದೇ ಆಗಿದೆ ಎಂದು ಪಿಬಿಕೆಎಸ್ ಸಂತಸಗೊಂಡಿದೆ.

Whats_app_banner