ನಿವೃತ್ತಿ ಬೆನ್ನಲ್ಲೇ ನೇಪಾಳ ಪ್ರೀಮಿಯರ್ ಲೀಗ್ ಸೇರಿಕೊಂಡ ಶಿಖರ್ ಧವನ್; ಭಾರತೀಯ ಕ್ರಿಕೆಟಿಗನಿಗೆ ಭರ್ಜರಿ ಸ್ವಾಗತ
ಕನ್ನಡ ಸುದ್ದಿ  /  ಕ್ರಿಕೆಟ್  /  ನಿವೃತ್ತಿ ಬೆನ್ನಲ್ಲೇ ನೇಪಾಳ ಪ್ರೀಮಿಯರ್ ಲೀಗ್ ಸೇರಿಕೊಂಡ ಶಿಖರ್ ಧವನ್; ಭಾರತೀಯ ಕ್ರಿಕೆಟಿಗನಿಗೆ ಭರ್ಜರಿ ಸ್ವಾಗತ

ನಿವೃತ್ತಿ ಬೆನ್ನಲ್ಲೇ ನೇಪಾಳ ಪ್ರೀಮಿಯರ್ ಲೀಗ್ ಸೇರಿಕೊಂಡ ಶಿಖರ್ ಧವನ್; ಭಾರತೀಯ ಕ್ರಿಕೆಟಿಗನಿಗೆ ಭರ್ಜರಿ ಸ್ವಾಗತ

ಎಲ್ಲಾ ರೀತಿಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಶಿಖರ್‌ ಧವನ್‌, ಇದೀಗ ಎನ್‌ಪಿಎಲ್‌ನಲ್ಲಿ ಕರ್ನಾಲಿ ಯಾಕ್ಸ್‌ ತಂಡಕ್ಕೆ ಸೇರಿಕೊಂಡಿದ್ದಾರೆ. ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಧವನ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.

ನಿವೃತ್ತಿ ಬೆನ್ನಲ್ಲೇ ನೇಪಾಳ ಪ್ರೀಮಿಯರ್ ಲೀಗ್ ಸೇರಿಕೊಂಡ ಶಿಖರ್ ಧವನ್
ನಿವೃತ್ತಿ ಬೆನ್ನಲ್ಲೇ ನೇಪಾಳ ಪ್ರೀಮಿಯರ್ ಲೀಗ್ ಸೇರಿಕೊಂಡ ಶಿಖರ್ ಧವನ್

ಭಾರತೀಯ ಕ್ರಿಕೆಟಿಗ ಶಿಖರ್ ಧವನ್, ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ (NPL) ಭಾಗವಹಿಸಲು ರಾಜಧಾನಿ ಕಠ್ಮಂಡುವಿಗೆ ತೆರಳಿದ್ದಾರೆ. ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗನನ್ನು ನೇಪಾಳದ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಎನ್‌ಪಿಎಲ್‌ನಲ್ಲಿ ಕರ್ನಾಲಿ ಯಾಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಧವನ್, ಇದೇ ಮೊದಲ ಬಾರಿಗೆ ನೆರೆಯ ರಾಷ್ಟ್ರಕ್ಕೆ ಭೇಟಿ ನೀಡಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮತ್ತು ರಾಷ್ಟ್ರೀಯ ಆಟಗಾರರೊಂದಿಗೆ ಆಡುವ ಅವಕಾಶದ ಬಗ್ಗೆ ತಮ್ಮ ಉತ್ಸುಕತೆ ವ್ಯಕ್ತಪಡಿಸಿದ್ದಾರೆ.

“ನಾನು ಎನ್‌ಪಿಎಲ್‌ನಲ್ಲಿ ಆಡಲು ಥ್ರಿಲ್ ಆಗಿದ್ದೇನೆ. ಕ್ರಿಕೆಟ್‌ನೊಂದಿಗೆ, ಪಶುಪತಿನಾಥ ದೇವಾಲಯ ಮತ್ತು ಮೌಂಟ್ ಎವರೆಸ್ಟ್‌ನಂತಹ ನೇಪಾಳದ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಉತ್ಸುಕನಾಗಿದ್ದೇನೆ" ಎಂದು ಧವನ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದಾರೆ.

ನಿವೃತ್ತಿಯ ನಂತರ ಎನ್‌ಪಿಎಲ್‌ ಕಡೆಗೆ ಮುಖ

ಈ ವರ್ಷದ ಆರಂಭದಲ್ಲಿ, ಧವನ್ ಎಲ್ಲಾ ರೀತಿಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇದೇ ವೇಳೆ ಐಪಿಎಲ್‌ನಲ್ಲಿಯೂ ಆಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದರೊಂದಿಗೆ ತಮ್ಮ ಶ್ರೇಷ್ಠ ವೃತ್ತಿಜೀವನದ ಅಂತ್ಯಗೊಳಿಸುತ್ತಿರುವುದಾಗಿ ಹೇಳಿದರು. 2025ರ ಐಪಿಎಲ್ ಮೆಗಾ ಹರಾಜಿಗೂ ಮೊದಲು ಪಂಜಾಬ್ ಕಿಂಗ್ಸ್‌ ತಂಡದಿಂದ ಬಿಡುಗಡೆಯಾದ ನಂತರ ಅವರು ಕರ್ನಾಲಿ ಯಾಕ್ಸ್‌ ತಂಡಕ್ಕೆ ಸೇರಿದರು.

2024ರ ಐಪಿಎಲ್‌ನಲ್ಲಿ, ಪಂಜಾಬ್ ಕಿಂಗ್ಸ್‌ ಪರ ಐದು ಪಂದ್ಯಗಳಲ್ಲಿ ಆಡಿದ ಧವನ್, ಗಾಯದಿಂದಾಗಿ ಋತುವಿನಿಂದ ಹೊರಗುಳಿದರು. ಐದು ಪಂದ್ಯಗಳಲ್ಲಿ ಆಡಿ 125.62ರ ಸ್ಟ್ರೈಕ್ ರೇಟ್‌ನೊಂದಿಗೆ 152 ರನ್ ಗಳಿಸಿದರು. 38 ವರ್ಷ ವಯಸ್ಸಿನ ಆಟಗಾರ, ಭಾವನಾತ್ಮಕ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ನಿವೃತ್ತಿ ಘೋಷಿಸಿದರು.

ಧವನ್‌ ಅಂಕಿ-ಅಂಶಗಳು

ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿಯಾದ ಧವನ್, ಆಟದ ಎಲ್ಲಾ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಏಕದಿನ ಸ್ವರೂಪದಲ್ಲಿ ಅಮೋಘ ಪ್ರದರ್ಶನ ನೀಡಿದರು. ಆಡಿದ 167 ಪಂದ್ಯಗಳಲ್ಲಿ 44.1ರ ಸರಾಸರಿಯಲ್ಲಿ 17 ಶತಕಗಳು ಮತ್ತು 39 ಅರ್ಧಶತಕಗಳೊಂದಿಗೆ 6793 ರನ್‌ ಕಲೆ ಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, 34 ಪಂದ್ಯಗಳಲ್ಲಿ ಏಳು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ 2,315 ರನ್ ಗಳಿಸಿದ್ದಾರೆ. ರೋಹಿತ್‌ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಹಲವು ದಾಖಲೆ ನಿರ್ಮಿಸಿದ್ದಾರೆ. ಭಾರತ ಕಂಡ ಪ್ರತಿಭಾವಂತ ಆರಂಭಿಕ ಆಟಗಾರನಲ್ಲಿ ಧವನ್‌ ಪ್ರಮುಖರು.

ಇದೀಗ ಎನ್‌ಪಿಎಲ್‌ನಲ್ಲಿ ಧವನ್ ಭಾಗವಹಿಸುತ್ತಿರುವುದು, ಲೀಗ್‌ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ವೇಳೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೇಪಾಳ ತಂಡವು ಚಿಗುರೊಡೆಯುತ್ತಿದ್ದು, ದೇಶದ ಆಟಗಾರರಿಗೆ ಧವನ್ ಅಪಾರ ಅನುಭವದಿಂದ ಕಲಿಯಲು ಅವಕಾಶ ಸಿಗುತ್ತದೆ.

Whats_app_banner