ಕೊನೆಯಲ್ಲಿ ಹೆಟ್ಮೆಯರ್ ಅಬ್ಬರ; ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ರೋಚಕ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊನೆಯಲ್ಲಿ ಹೆಟ್ಮೆಯರ್ ಅಬ್ಬರ; ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ರೋಚಕ ಗೆಲುವು

ಕೊನೆಯಲ್ಲಿ ಹೆಟ್ಮೆಯರ್ ಅಬ್ಬರ; ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ರೋಚಕ ಗೆಲುವು

Punjab Kings vs Rajasthan Royals : 17ನೇ ಆವೃತ್ತಿಯ ಐಪಿಎಲ್​ನ 27ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ರೋಚಕ ಗೆಲುವು ದಾಖಲಿಸಿತು.

ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ರೋಚಕ ಗೆಲುವು
ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ರೋಚಕ ಗೆಲುವು (AP)

ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸ್ಯಾಮ್ ಕರನ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ರೋಚಕ ಗೆಲುವು ಸಾಧಿಸಿತು. ಎರಡು ಎಸೆತಗಳಲ್ಲಿ 2 ರನ್ ಬೇಕಿದ್ದ ವೇಳೆ ಸಿಕ್ಸರ್​ ಬಾರಿಸಿದ ಹೆಟ್ಮೆಯರ್​, ಆರ್​ಆರ್​ಗೆ 3 ವಿಕೆಟ್​​ಗಳ ಗೆಲುವು ತಂದುಕೊಟ್ಟರು. ಆರ್​ಆರ್​​ ಟೂರ್ನಿಯಲ್ಲಿ ಒಟ್ಟು 5ನೇ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ ಮೂರನೇ ಸೋಲಿಗೆ ಶರಣಾಯಿತು. 

ಚಂಡೀಗಢದ ಮುಲ್ಲನ್‌ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್​, ಅತ್ಯಂತ ನೀರಸ ಪ್ರದರ್ಶನ ನೀಡಿತು. ರಾಜಸ್ಥಾನ್ ಬೌಲರ್​ಗಳ ಎದುರು ತತ್ತರಿಸಿದ ಪಿಬಿಕೆಎಸ್, 20 ಓವರ್​​ಗಳಲ್ಲಿ 8 ವಿಕೆಟ್​ಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆರ್​ಆರ್​, 19.5 ಓವರ್​​ಗಳಲ್ಲಿ ಗೆದ್ದು ಬೀಗಿತು. ಶಿಮ್ರಾನ್ ಹೆಟ್ಮೆಯರ್​ ಕೊನೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್

148 ರನ್ ಸವಾಲು ಹಿಂಬಾಲಿಸಿದ ಆರ್​ಆರ್​, ಉತ್ತಮ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್ ಮತ್ತು ತನುಷ್ ಕೋಟ್ಯಾನ್ ಮೊದಲ ವಿಕೆಟ್​ಗೆ 56 ರನ್ ಕಲೆ ಹಾಕಿದರು. ಜೋಸ್ ಬಟ್ಲರ್ ಅಲಭ್ಯತೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ತನುಷ್ ಕೋಟ್ಯಾನ್ 31 ಎಸೆತಗಳಲ್ಲಿ 3 ಬೌಂಡರಿ ಸಹಿತ 24 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದರು. ಕಳೆದ ಪಂದ್ಯಗಳಲ್ಲಿ ವೈಫಲ್ಯ ಪ್ರದರ್ಶನ ನೀಡಿದ ಜೈಸ್ವಾಲ್, 28 ಎಸೆತಗಳಲ್ಲಿ 4 ಬೌಂಡರಿ ಸಹಿತ 39 ರನ್ ಗಳಿಸಿದರು.

ಸುಲಭ ಮೊತ್ತವನ್ನು ಬೆನ್ನಟ್ಟುವ ಭರದಲ್ಲಿ ಆರ್​ಆರ್​ ಇಕ್ಕಟ್ಟಿಗೆ ಸಿಲುಕಿತು. ಪಂಜಾಬ್​ ಬೌಲರ್​​ಗಳು ನಡೆಸಿದ ಟೈಟ್​ ಬೌಲಿಂಗ್​​ಗೆ ಆರ್​​ಆರ್​ ಬ್ಯಾಟರ್ಸ್ ತತ್ತರಿಸಿದರು. ಸಂಜು ಸ್ಯಾಮ್ಸನ್ (18), ರಿಯಾನ್ ಪರಾಗ್ (23) ಹೆಚ್ಚು ಹೊತ್ತು ನಿಲ್ಲಲಿಲ್ಲ. ಅದಾಗಲೇ ಪಂದ್ಯವು ರೋಚಕತೆಗೆ ತಿರುಗಿತ್ತು. ಕೊನೆಯ 3 ಓವರ್​​ಗಳಲ್ಲಿ 34 ರನ್ ಬೇಕಿತ್ತು. ಕ್ರೀಸ್​​ನಲ್ಲಿ ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್​ ಇದ್ದರು. ಆದರೆ, ಜುರೆಲ್ (6) ಮಿಂಚುವಲ್ಲಿ ವಿಫಲರಾದರು.

ರೊವ್​ಮನ್​ ಪೊವೆಲ್ 11 ರನ್ ಗಳಿಸಿ ಗುರಿ ಕಡಿಮೆಗೊಳಿಸಿ ಔಟಾದರು. ಕೇಶವ್ ಮಹಾರಾಜ್ 1 ರನ್​ ಗಳಿಸಿದರು. ಅಂತಿಮವಾಗಿ ಆರ್​ಆರ್​ ಗೆಲುವಿಗೆ ಕೊನೆಯ ಓವರ್​ನಲ್ಲಿ 10 ರನ್ ಬೇಕಾಗಿತ್ತು. ಸ್ಟ್ರೈಕ್​ನಲ್ಲಿದ್ದ ಶಿಮ್ರಾನ್ ಹೆಟ್ಮೆಯರ್​, ಅರ್ಷ್​ದೀಪ್​ ಬೌಲಿಂಗ್​ನಲ್ಲಿ ಮೊದಲ ಎರಡು ಎಸೆತಗಳನ್ನು ಡಾಟ್ ಮಾಡಿ 3ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿದರು. 2 ಎಸೆತಗಳಿಗೆ 2 ರನ್ ಬೇಕಿದ್ದಾಗ ಹೆಟ್ಮೆಯರ್​ ಸಿಕ್ಸರ್​ ಬಾರಿಸಿ ಗೆಲುವು ತಂದುಕೊಟ್ಟರು. ಕಗಿಸೊ ರಬಾಡ, ಸ್ಯಾಮ್ ಕರನ್ ತಲಾ 2 ವಿಕೆಟ್, ಲಿವಿಂಗ್​ಸ್ಟನ್, ಹರ್ಷಲ್ ಪಟೇಲ್, ಅರ್ಷ್​ದೀಪ್ ತಲಾ 1 ವಿಕೆಟ್ ಪಡೆದರು.

ಪಂಜಾಬ್ ಬ್ಯಾಟಿಂಗ್

ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ಗೆ ಶಿಖರ್ ಧವನ್ ಅಲಭ್ಯತೆ ಕಾಡಿತು. ರಾಜಸ್ಥಾನ್ ಬೌಲರ್​​ಗಳು ಪಿಬಿಕೆಎಸ್ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಿದರು. ಅದರಲ್ಲೂ ಆವೇಶ್ ಖಾನ್ ಮತ್ತು ಕೇಶವ್ ಮಹಾರಾಜ್ ಮಿಂಚಿನ ಬೌಲಿಂಗ್ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ಅಥರ್ವ ಟೈಡೆ, ಜಾನಿ ಬೈರ್​​ಸ್ಟೋ ತಲಾ 15 ರನ್ ಗಳಿಸಿ ನಿರಾಸೆ ಮೂಡಿಸಿದರೆ, ಪ್ರಭುಶಿಮ್ರಾನ್ ಸಿಂಗ್ (10), ಸ್ಯಾಮ್ ಕರನ್ (6), ಶಶಾಂಕ್ ಸಿಂಗ್ (9) ಬೇಗನೇ ವಿಕೆಟ್ ಒಪ್ಪಿಸಿದರು.

ಜಿತೇಶ್ ಶರ್ಮಾ 29 ರನ್ ಗಳಿಸಿ ಹೋರಾಟ ನಡೆಸಿದರೆ, ಲಿಯಾಮ್ ಲಿವಿಂಗ್​ಸ್ಟನ್ (21) ರನೌಟ್ ಆದರು. ಕೊನೆಯಲ್ಲಿ ಇಂಪ್ಯಾಕ್ಟ್​ ಪ್ಲೇಯರ್ ಆಶುತೋಷ್ ಶರ್ಮಾ 16 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಿತ​ 31 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದರು. ಆ ಮೂಲಕ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ತಂಡವನ್ನು 140ರ ಗಡಿ ದಾಟಿಸಿದರು. ಆವೇಶ್, ಮಹಾರಾಜ್ ತಲಾ 2 ವಿಕೆಟ್, ಚಹಲ್, ಬೋಲ್ಟ್, ಕುಲ್ದೀಪ್ ಸೇನ್ ತಲಾ 1 ವಿಕೆಟ್ ಕಬಳಿಸಿ ಪಂಜಾಬ್ ಮೇಲೆ ನಿಯಂತ್ರಣ ಹೇರಿದರು.

Whats_app_banner