ರೋಹಿತ್ ಕೊನೆಗೂ ಸೇಡು ತೀರಿಸಿಕೊಂಡು, ಪಾಕ್ ಬೌಲರ್ಗಳ ಅಹಂ ಕುಗ್ಗಿಸಿದರು; ಹಿಟ್ಮ್ಯಾನ್ ಆಟ ಕೊಂಡಾಡಿದ ಅಖ್ತರ್
Shoaib Akhtar blast Shaheen Afridi: ರೋಹಿತ್ ಅವರು ಕೇವಲ ಸೇಡು ತೀರಿಸಿಕೊಂಡಿಲ್ಲ, ಬೌಲರ್ಗಳ ಕಳಪೆ ಪ್ರದರ್ಶನ ಬಡಿದೆಬ್ಬಿಸಿದರು. ಅವರಲ್ಲಿದ್ದ ಅತಿಯಾದ ಆತ್ಮ ವಿಶ್ವಾಸವನ್ನು ಓಡಿಸಿದರು ಎಂದು ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನದಲ್ಲಿ ರೋಹಿತ್ ಶರ್ಮಾ (Rohit Sharma) ಅವರ ಮಾಸ್ಟರ್ಕ್ಲಾಸ್ ಇನ್ನಿಂಗ್ಸ್ ಕಂಡು ಬೆರಗಾದ ಪಾಕ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ (Shoaib Akhtar), ಕೊಂಡಾಡಿದ್ದಾರೆ. ಅದರಲ್ಲೂ ಶಾಹೀನ್ ಶಾ ಅಫ್ರಿದಿ (Shaheen Afridi) ಬೌಲಿಂಗ್ ದಾಳಿಯಲ್ಲಿ ರನ್ ಮಳೆ ಹರಿಸಿದ ಹಿಟ್ಮ್ಯಾನ್ರನ್ನು ಶ್ಲಾಘಿಸಿದ ಅಖ್ತರ್, ಸೇಡು ತೀರಿಸಿಕೊಂಡರು ಎಂದು ಹೇಳಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. 42.5 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ ಸ್ಫೋಟಕ ಆರಂಭ ಪಡೆಯಿತು. ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪಾಕ್ ಬೌಲರ್ಗಳ ದಾಳಿಯನ್ನು ಹಿಮ್ಮೆಟ್ಟಿಸಿ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದರು. 30.3 ಓವರ್ಗಳಲ್ಲಿ ಭಾರತ ಜಯಿಸಿತು.
ರೋಹಿತ್ಗೆ ಕಾಡಿದ್ದ ಶಾಹೀನ್ ಅಫ್ರಿದಿ
ಅದರಲ್ಲೂ ಮಾರಕ ವೇಗಿ ಶಾಹೀನ್ ಶಾ ಅಫ್ರಿದಿ ಅವರ ಬೌಲಿಂಗ್ನಲ್ಲಿ ರೋಹಿತ್, ಅಕ್ಷರಶಃ ರೌದ್ರಾವತಾರ ತೋರಿದರು. ಬೌಂಡರಿ-ಸಿಕ್ಸರ್ಗಳಿಂದಲೇ ಡೀಲ್ ಮಾಡುವ ಮೂಲಕ ಸೇಡು ತೀರಿಸಿಕೊಂಡರು. ಏಕೆಂದರೆ ಕಳೆದ ಎರಡು ವರ್ಷಗಳಿಂದ ರೋಹಿತ್ರನ್ನು ಶಾಹೀನ್ ಅಫ್ರಿದಿ ಸಿಕ್ಕಾಪಟ್ಟೆ ಕಾಡಿದ್ದರು. 2021ರ ವಿಶ್ವಕಪ್, 2022ರ ಏಷ್ಯಾಕಪ್, 2022ರ ಟಿವಿಶ್ವಕಪ್, 2023ರ ಏಷ್ಯಾಕಪ್ನಲ್ಲಿ ರೋಹಿತ್ರನ್ನು ಸಿಂಗಲ್ ಡಿಜಿಟ್ಗೆ ಶಾಹೀನ್ ಅಫ್ರಿದಿ ಔಟ್ ಮಾಡಿದ್ದರು.
‘ಸೇಡು ತೀರಿಸಿಕೊಂಡರು’
ಈ ಹೈ-ಪ್ರೋಫೈಲ್ ಪಂದ್ಯದಲ್ಲಿ ರೋಹಿತ್ ಘರ್ಜಿಸಿದ್ದರ ಕುರಿತು ಮಾತನಾಡಿದ ಶೋಯೆಬ್ ಅಖ್ತರ್, ರೋಹಿತ್ರನ್ನು ಒನ್-ಮ್ಯಾನ್ ಆರ್ಮಿ ಎಂದು ಶ್ಲಾಘಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ಆಡಿದ ರೀತಿಯ ಇನ್ನಿಂಗ್ಸ್, ಪಾಕಿಸ್ತಾನದ ಬೌಲಿಂಗ್ ದಾಳಿಗೆ ಅವಮಾನಿಸಿದರು. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಆ ಬೌಲರ್ಗಳ ವಿರುದ್ಧ ರನ್ ಗಳಿಸದೇ ಇದ್ದಾಗ ಬೇಗನೇ ಔಟಾಗುತ್ತಿದ್ದ ರೋಹಿತ್ ಕೊನೆಗೂ ಸೇಡು ತೀರಿಸಿಕೊಂಡರು. ಅವರು ಫಾರ್ಮ್ಗೆ ಬಂದಿರುವುದು ಸಂತಸ ತಂದಿದೆ ಎಂದರು.
‘ಪಾಕ್ ಬೌಲರ್ ಅಹಂ ಕುಗ್ಗಿಸಿದರು’
ರೋಹಿತ್ ಅವರು ಕೇವಲ ಸೇಡು ತೀರಿಸಿಕೊಂಡಿಲ್ಲ, ಬೌಲರ್ಗಳ ಕಳಪೆ ಪ್ರದರ್ಶನ ಬಡಿದೆಬ್ಬಿಸಿದರು. ಅವರಲ್ಲಿದ್ದ ಅತಿಯಾದ ಆತ್ಮ ವಿಶ್ವಾಸವನ್ನು ಓಡಿಸಿದರು. ಈ ಹಿಂದೆ ನಾವು ರೋಹಿತ್ರನ್ನು ಬೇಗನೇ ಔಟ್ ಮಾಡಿದ್ದೆವು ಎಂಬ ಅಹಂ ಅನ್ನು ಕುಗ್ಗಿಸಿದರು. ಮುಂದಿನ ಪಂದ್ಯಗಳಲ್ಲಾದರೂ ಇದನ್ನು ತಗ್ಗಿಸಿಕೊಳ್ಳುವಂತೆ ರೋಹಿತ್ ಮಾಡಿದ್ದಾರೆ. ಇದು ಖುಷಿಯ ವಿಚಾರ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ 63 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ 86 ರನ್ ಚಚ್ಚಿದರು.
ನಿರಾಶಾದಾಯಕ ಎಂದ ಅಖ್ತರ್
ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ತನ್ನ ಮೊದಲ ಸೋಲನ್ನು ನೀಡಿತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಎದುರಿನ 8 ಪಂದ್ಯದಲ್ಲೂ ಭಾರತ ಜಯ ಸಾಧಿಸಿದೆ. ಆ ಮೂಲಕ 8-0ರಲ್ಲಿ ಅಜೇಯ ಓಟ ಮುಂದುವರೆಸಿದೆ. ಪಾಕ್ ಪ್ರದರ್ಶನದ ಕುರಿತು ಮಾತನಾಡಿದ ಅಖ್ತರ್, ನಿರಾಶಾದಾಯಕ ಪ್ರದರ್ಶನ. ಅತ್ಯಂತ ನಿರಾಶಾದಾಯಕ ಪ್ರದರ್ಶನ. ಒಂದೊಳ್ಳೆ ಅವಕಾಶವನ್ನು ಗೆಲ್ಲುವ ಅವಕಾಶವನ್ನು ಕಳೆದಕೊಂಡಿತು ಎಂದು ತಮ್ಮ ತಂಡವನ್ನು ಅಖ್ತರ್ ಟೀಕಿಸಿದರು.