ನನಗೂ, ಪಾಕ್‌ ಅಭಿಮಾನಿಗಳಿಗೂ ಈಗ ಸಮಾಧಾನ ಆಯ್ತು; ಬಾಂಗ್ಲಾ ವಿರುದ್ಧ ಭಾರತ ಸೋತಿದ್ದಕ್ಕೆ ಅಖ್ತರ್ ನಿರಾಳ
ಕನ್ನಡ ಸುದ್ದಿ  /  ಕ್ರಿಕೆಟ್  /  ನನಗೂ, ಪಾಕ್‌ ಅಭಿಮಾನಿಗಳಿಗೂ ಈಗ ಸಮಾಧಾನ ಆಯ್ತು; ಬಾಂಗ್ಲಾ ವಿರುದ್ಧ ಭಾರತ ಸೋತಿದ್ದಕ್ಕೆ ಅಖ್ತರ್ ನಿರಾಳ

ನನಗೂ, ಪಾಕ್‌ ಅಭಿಮಾನಿಗಳಿಗೂ ಈಗ ಸಮಾಧಾನ ಆಯ್ತು; ಬಾಂಗ್ಲಾ ವಿರುದ್ಧ ಭಾರತ ಸೋತಿದ್ದಕ್ಕೆ ಅಖ್ತರ್ ನಿರಾಳ

Shoaib Akhtar: ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೋತಿದ್ದು ನನಗೆ ಸಮಾಧಾನ ತಂದಿದೆ ಎಂದು ಪಾಕ್‌ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಭಾರತದ ಸೋಲಿನಿಂದ ನಿರಾಳನಾದೆ ಎಂದ ಶೋಯೆಬ್ ಅಖ್ತರ್
ಭಾರತದ ಸೋಲಿನಿಂದ ನಿರಾಳನಾದೆ ಎಂದ ಶೋಯೆಬ್ ಅಖ್ತರ್

ಇತ್ತೀಚೆಗೆ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಸೋತಾಗ, ಅಲ್ಲಿನ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಪ್ರತಿಕ್ರಿಯೆ ನೀಡಿದ್ದರು. ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆ ಎಂದು ಬೊಬ್ಬಿಡುತ್ತಿದ್ದ ಪಾಕ್‌ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡು, ಪ್ರತಿ ಬಾರಿ ಪಾಕ್‌ ಸೋತಾಗ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ ಎಂದು ಹೇಳಬೇಡಿ ಎಂದಿದ್ದರು. ಆದರೂ, ಪಾಕ್‌ ಸೋಲಿನಿಂದ ಇರಿಸುಮುರುಸು ಅನುಭವಿಸಿದ್ದ ವೇಗಿ, ಶುಕ್ರವಾರ ಭಾರತದ ಸೋಲಿನೊಂದಿಗೆ ನಿರಾಳರಾಗಿದ್ದಾರಂತೆ. ಇದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ತಮ್ಮ ಹೇಳಿಕೆಗಳಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ಶುಕ್ರವಾರ ಬಾಂಗ್ಲಾದೇಶದ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತ ಸೋಲುತ್ತಿದ್ದಂತೆಯೇ, ಅಖ್ತರ್‌ಗೆ ಖುಷಿಯಾಗಿರುವಂತಿದೆ. ಪಾಕ್‌ ವಿರುದ್ಧ ದೊಡ್ಡ ಅಂತರದಲ್ಲಿ ಭಾರತ ಗೆದ್ದಾಗ ಗಡ್ಡಕ್ಕೆ ಬೆಂಕಿ ಬಿದ್ದವರಂತೆ ವರ್ತಿಸಿದ್ದ ಅಖ್ತರ್‌, ಇದೀಗ ಬಾಂಗ್ಲಾ ವಿರುದ್ಧ ಭಾರತದ ಸೋಲಿನ ಬಳಿಕ ನಿರಾಳರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಭಾರತಕ್ಕೆ ಮುಜುಗರದ ಸಂಗತಿ

ಭಾರತದ ವಿರುದ್ಧ ಬಾಂಗ್ಲಾದೇಶ ಗೆದ್ದಿರುವುದು “ಮುಜುಗರದ ಸಂಗತಿ” ಎಂದು ಅಖ್ತರ್ ಹೇಳಿದ್ದಾರೆ. ಅಲ್ಲದೆ ಈಗಾಗಲೇ ಏಷ್ಯಾಕಪ್‌ ಫೈನಲ್‌ಗೆ ಪ್ರವೇಶಿಸಿರುವ ಭಾರತಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

ನನಗೆ ಮತ್ತು ಪಾಕ್‌ ಅಭಿಮಾನಿಗಳಿಗೆ ನಿರಾಳವಾಗಿದೆ

“ಭಾರತವು ಪಂದ್ಯದಲ್ಲಿ ಸೋತಿದೆ. ಇದು ಮುಜುಗರ ತರಿಸುವಂಥಾ ಸೋಲು. ಹಾಗಂತಾ ನಾವು ಹೆಚ್ಚು ಟೀಕಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶ ಕೂಡಾ ಇಲ್ಲಿ ಆಡಲು ಬಂದಿದೆ. ಪಾಕಿಸ್ತಾನವನ್ನು ಅವರು ಸೋಲಿಸಿದರು ಎಂದು ಜನರು ಪಾಕಿಸ್ತಾನವನ್ನು ಟೀಕಿಸುತ್ತಿದ್ದರು. ಶ್ರೀಲಂಕಾ ಉತ್ತಮ ತಂಡ. ಅದೇನೂ ಸಾಧಾರಣ ತಂಡವಲ್ಲ. ಬಾಂಗ್ಲಾದೇಶ ಕೂಡಾ ಹಾಗೆಯೇ. ಅವರು ಕೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದಾರೆ. ಸದ್ಯ ಭಾರತವು ಪಂದ್ಯವನ್ನು ಸೋತಿರುವುದು ನಾನು ಸೇರಿದಂತೆ ಪಾಕಿಸ್ತಾನದ ಅಭಿಮಾನಿಗಳಿಗೆ ಸ್ವಲ್ಪ ನಿರಾಳವಾಗಿದೆ” ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಬಾಂಗ್ಲಾದೇಶವು ಸಾಮಾನ್ಯ ತಂಡವಲ್ಲ. ಭಾನುವಾರದಂದು ಶ್ರೀಲಂಕಾವನ್ನು ಫೈನಲ್‌ನಲ್ಲಿ ಎದುರಿಸಲಿರುವ ಭಾರತಕ್ಕೆ, ಬಾಂಗ್ಲಾ ವಿರುದ್ಧದ ಸೋಲು ಎಚ್ಚರಿಕೆಯ ಕರೆಗಂಟೆ ಎಂದು ಅವರು ಹೇಳಿದರು. “ಫೈನಲ್‌ಗೂ ಮುನ್ನ ಭಾರತಕ್ಕೆ ಎಂಥಾ ಎಚ್ಚರಿಕೆಯ ಕರೆ. ಕೆಲವು ಪಂದ್ಯಗಳನ್ನು ಗೆದ್ದ ನಂತರ ನೀವು ಯಾವುದೇ ತಂಡಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶವು ಅದನ್ನು ಸಾಬೀತುಪಡಿಸಿದ್ದಾರೆ” ಎಂದು ಅಖ್ತರ್ ಹೇಳಿದ್ದಾರೆ.

ಸೋತಾಗಲೆಲ್ಲಾ ಫಿಕ್ಸಿಂಗ್ ಎನ್ನಬೇಡಿ

ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ತಂಡವನ್ನು ಫೈನಲ್​​​​​​ಗೆ ಬರದಂತೆ ಭಾರತ ತಂಡವು ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಪಾಕ್ ಕ್ರಿಕೆಟ್ ಫ್ಯಾನ್ಸ್​ ಆರೋಪಿಸಿದ್ದರು. ಹೀಗೆ ಹೇಳಿದ ನೆಟ್ಟಿಗರಿಗೆ ಅಖ್ತರ್ ತಿರುಗೇಟು ನೀಡಿದ್ದರು. ಇಂಥಾ ಅನಗತ್ಯ ಹೇಳಿಕೆಗಳನ್ನು ನೀಡಿದರೆ ಹುಷಾರ್ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಅಭಿಮಾನಿಗಳು ಈ ರೀತಿ ಯಾಕೆ ವರ್ತಿಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಭಾರತದ ಎದುರಿನ ಪಂದ್ಯವನ್ನು ಫಿಕ್ಸಿಂಗ್ ಮಾಡಿಕೊಳ್ಳಲಾಗಿದೆ ಎಂದು ಮೀಮ್ಸ್ ಮತ್ತು ಮೆಸೇಜ್​​ಗಳು ಬಂದವು. ಅಷ್ಟೇ ಅಲ್ಲದೆ, ಶ್ರೀಲಂಕಾದ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ಸೋಲಲು ಟೀಮ್ ಇಂಡಿಯಾ ಬಯಸುತ್ತಿದೆ ಎಂದು ಸಂದೇಶಗಳೂ ರವಾನೆಯಾಗಿವೆ. ಸೋತ ಪ್ರತಿ ಬಾರಿ ಫಿಕ್ಸಿಂಗ್ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಎಚ್ಚರಿಸಿದ್ದಾರೆ.

Whats_app_banner