ಅಫ್ಘಾನಿಸ್ತಾನ ನಿಮ್ಮಷ್ಟೇ ಬಲಿಷ್ಠ, ಸೋತು ಮುಜುಗರಕ್ಕೆ ಒಳಗಾಗಬೇಡಿ; ಪಾಕ್‌ಗೆ ಎಚ್ಚರಿಸಿದ ಅಖ್ತರ್​
ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘಾನಿಸ್ತಾನ ನಿಮ್ಮಷ್ಟೇ ಬಲಿಷ್ಠ, ಸೋತು ಮುಜುಗರಕ್ಕೆ ಒಳಗಾಗಬೇಡಿ; ಪಾಕ್‌ಗೆ ಎಚ್ಚರಿಸಿದ ಅಖ್ತರ್​

ಅಫ್ಘಾನಿಸ್ತಾನ ನಿಮ್ಮಷ್ಟೇ ಬಲಿಷ್ಠ, ಸೋತು ಮುಜುಗರಕ್ಕೆ ಒಳಗಾಗಬೇಡಿ; ಪಾಕ್‌ಗೆ ಎಚ್ಚರಿಸಿದ ಅಖ್ತರ್​

Shoaib Akhtar : ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯಕ್ಕೂ ಮುನ್ನ ಬಾಬರ್‌ ಬಳಗಕ್ಕೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಪಾಕಿಸ್ತಾನಕ್ಕೆ ಅಖ್ತರ್‌ ಎಚ್ಚರಿಕೆ
ಪಾಕಿಸ್ತಾನಕ್ಕೆ ಅಖ್ತರ್‌ ಎಚ್ಚರಿಕೆ

ಏಕದಿನ ವಿಶ್ವಕಪ್ 2023ರ (ICC ODI World Cup 2023) ಸೋಮವಾರದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಅಫ್ಘಾನಿಸ್ತಾನವನ್ನು (Pakistan vs Afghanistan) ಎದುರಿಸುತ್ತಿದೆ. ಪಾಕ್‌ ತಂಡವು ಆಡಿದ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಸೋಲನುಭವಿಸಿದೆ. ಹೀಗಾಗಿ ಟೂರ್ನಿಯಲ್ಲಿ ತನ್ನ ಪಾಲಿನ ಐದನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಪಾಕ್‌ ಮತ್ತು ಅಫ್ಘಾನಿಸ್ತಾನ ನಡುವಣ ರೋಚಕ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸುತ್ತಿದೆ. ಪಾಕ್‌ ತಂಡಕ್ಕೆ ಗೆಲ್ಲಲೇಬೇಕಾದ ಮಹತ್ವದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ಬಾಬರ್ ಅಜಾಮ್ ಬಳಗಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿರುವ ಅಫ್ಘಾನಿಸ್ತಾನ ತಂಡವು ಬಲಿಷ್ಠವಾಗಿದೆ. ಅಲ್ಲದೆ ಪ್ರಸ್ತುತ ಅದು ಪಾಕಿಸ್ತಾನಕ್ಕೆ ಸರಿಸಮಾನಾಗಿದೆ. ಹೀಗಾಗಿ ಶಾಹಿದಿ ಬಳಗವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ತಮ್ಮ ದೇಶದ ಆಟಗಾರರನ್ನು ಎಚ್ಚರಿಸಿದ್ದಾರೆ.

“ಅಫ್ಘಾನಿಸ್ತಾನ ಒಂದು ಬಲಿಷ್ಠ ತಂಡ. ನೀವು ಮತ್ತೆ ಮುಜುಗರದಿಂದ ಪಾರಾಗಬೇಕೆಂದಿದ್ದರೆ ಅವರನ್ನು ಲಘುವಾಗಿ ಪರಿಗಣಿಸದೆ ಆಡಿ. ನಾನು ಅಫ್ಘಾನಿಸ್ತಾನ ಕಳಪೆ ತಂಡ ಎಂದು ಹೇಳುವುದಿಲ್ಲ. ಅವರು ಪಾಕಿಸ್ತಾನಕ್ಕೆ ಸಮನಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರನ್ನು ಲಘುವಾಗಿ ಪರಿಗಣಿಸಬೇಡಿ. ಪಂದ್ಯ ಚೆನ್ನೈನಲ್ಲಿ ನಡೆಯುತ್ತಿರುವುದರಿಂದ ಅಲ್ಲಿ ಚೆಂಡು ತಿರುಗುತ್ತದೆ. ಇದು ಅಫ್ಘಾನಿಸ್ತಾನಕ್ಕೆ ಅನುಕೂಲಕ ಕಲ್ಪಿಸುವಂಥಾ ಮೈದಾನ. ಆದರೆ, ಪಾಕಿಸ್ತಾನ ಮೇಲುಗೈ ಸಾಧಿಸುತ್ತದೆ ಎಂಬುದು ನನಗೆ ಖಾತ್ರಿಯಿದೆ. ದಯವಿಟ್ಟು ಮನಸಿಟ್ಟು ಆಡಿ,” ಎಂದು ಅವರು ಅಖ್ತರ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇದೇ ವೇಳೆ ತಂಡದ ನಾಯಕ ಬಾಬರ್ ಅಜಾಮ್ ಅವರನ್ನು ಕೂಡಾ ಅಖ್ತರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. “ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡುವುದು ಯಾಕೆ? ಮೊದಲು ಬ್ಯಾಟಿಂಗ್‌ ಮಾಡಿ 320 ರನ್ ಗಳಿಸಿ. ಬೌಲರ್‌ಗಳಿಗೂ ಅವಕಾಶ ಕೊಡಿ. ಬಹುಶಃ ಅವರು ಕೂಡಾ ಎದುರಾಳಿಗಳನ್ನು ಆಲೌಟ್ ಮಾಡಬಹುದು. ಬಾಬರ್ ಅಜಮ್ ಒಬ್ಬ ಶ್ರೇಷ್ಠ ಆಟಗಾರ. ಆದರೆ ಶ್ರೇಷ್ಠ ಆಟಗಾರರು ಉತ್ತಮ ಇನ್ನಿಂಗ್ಸ್ ಆಡಬೇಕು. ಬಲಿಷ್ಠ ತಂಡಗಳ ವಿರುದ್ಧ ಪ್ರದರ್ಶನ ನೀಡದೆ ದೊಡ್ಡ ಹೆಸರು ಮಾಡಲು ಸಾಧ್ಯವಿಲ್ಲ. ಪ್ರಮುಖ ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್‌ ಆಡಿ ತೋರಿಸಬೇಕು,” ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯಿತು. ಮೊದಲೆರಡು ಪಂದ್ಯಗಳಲ್ಲಿ ನೆದರ್ಲೆಂಡ್ಸ್‌ ಮತ್ತು ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿತು. ಆ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಬೃಹತ್‌ ಅಂತರದಿಂದ ಸೋತು ಮುಗ್ಗರಿಸಿತು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ವಿರಾಟ್ ಕೊಹ್ಲಿಯಂತೆ ನಾಯಕತ್ವ ತೊರೆಯಿರಿ; ಬಾಬರ್ ಅಜಮ್​ಗೆ ಪಾಕಿಸ್ತಾನ ಮಾಜಿ ನಾಯಕ ಸಲಹೆ

ಪಾಕಿಸ್ತಾನ ತಂಡದ ಹಿನ್ನಡೆಗೆ ನಾಯಕ ಬಾಬರ್ ಅಜಮ್ ಕೂಡ‌ ಕಾರಣ. ಅವರ ಅಟ್ಟರ್ ಫ್ಲಾಪ್ ಪ್ರದರ್ಶನದಿಂದ ಪಾಕ್ ಸತತ ಸೋಲಿಗೆ ಶರಣಾಗುತ್ತಿದೆ‌. ಸತತ ವೈಫಲ್ಯ ಅನುಭವಿಸುತ್ತಿರುವ ಬಾಬರ್, ಟೀಮ್ ಇಂಡಿಯಾ ಎದುರು 50 ರನ್ ಬಾರಿಸಿದ್ದರು. ಆದರೆ ಉಳಿದ ಪಂದ್ಯಗಳಲ್ಲಿ 18, 10, 5 ರನ್ ಗಳಿಸಿದ್ದಾರೆ. ಹಾಗಾಗಿ ಅವರು‌ ಕೆಟ್ಟ ಪ್ರದರ್ಶನ ನೀಡಿದ ಪರಿಣಾಮ ನಾಯಕತ್ವ ತೊರೆಯುವಂತೆ ಮಾಜಿ ಕ್ರಿಕೆಟಿಗರು ಮನವಿ ಮಾಡಿದ್ದಾರೆ.

Whats_app_banner