ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿ; ಕನ್ನಡತಿ ಶ್ರೇಯಾಂಕಾ ಪಾಟೀಲ್ ನಾಮನಿರ್ದೇಶನ, ಪುರುಷರ ವಿಭಾಗದಲ್ಲಿ ಭಾರತೀಯರೇ ಇಲ್ಲ!
ICC Awards: ಐಸಿಸಿ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪುರುಷ-ಮಹಿಳಾ ಕ್ರಿಕೆಟಿಗರ ಶಾರ್ಟ್ ಲಿಸ್ಟ್ ಅನ್ನು ಐಸಿಸಿ ಬಿಡುಗಡೆ ಮಾಡಿದೆ. ಪುರುಷರ ವಿಭಾಗದಲ್ಲಿ ಭಾರತದ ಆಟಗಾರರು ಇಲ್ಲ.
2024ರ ಕ್ಯಾಲೆಂಡರ್ ವರ್ಷದಲ್ಲಿ ಕ್ರಿಕೆಟ್ (Cricket) ಕ್ಷೇತ್ರದ ಮನರಂಜನೆಗೆ ಪೂರ್ಣವಿರಾಮ ಬೀಳಲು ಕೆಲವೇ ದಿನಗಳು ಬಾಕಿ. ಪ್ರತಿ ವರ್ಷದಂತೆ ಈ ಸಲವೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) ವಿವಿಧ ವಿಭಾಗಗಳಲ್ಲಿ ವರ್ಷದ ಅತ್ಯುತ್ತಮ ಆಟಗಾರರ ಪ್ರಶಸ್ತಿಗೆ ಆಟಗಾರರನ್ನು ನಾಮನಿರ್ದೇಶನ ಮಾಡುತ್ತಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮಹಿಳಾ ಮತ್ತು ಪುರುಷರ ವರ್ಷದ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ತಲಾ ನಾಲ್ವರನ್ನು ಐಸಿಸಿ ನಾಮಿನೇಟ್ ಮಾಡಿದೆ. ಈ ಪೈಕಿ ಮಹಿಳೆಯರ ವಿಭಾಗದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಇರುವುದು ವಿಶೇಷ.
ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಐಸಿಸಿ ಶಾರ್ಟ್ಲಿಸ್ಟ್ ಬಿಡುಗಡೆ ಮಾಡಿದ್ದು, ಭಾರತ ಮಹಿಳಾ ತಂಡದಿಂದ ಒಬ್ಬರ ಹೆಸರಷ್ಟೇ ನಾಮನಿರ್ದೇಶನಗೊಂಡಿದೆ. ಅದರಲ್ಲೂ ನಮ್ಮ ಕರ್ನಾಟಕದ ಆಟಗಾರ್ತಿ ಎಂಬುದು ಹೆಮ್ಮೆಯ ಸಂಗತಿ. ಶ್ರೇಯಾಂಕಾ ಪಾಟೀಲ್ ಜೊತೆಗೆ ಸೌತ್ ಆಫ್ರಿಕಾದ ಅನ್ನೇರಿ ಡೆರ್ಕ್ಸೆನ್, ಸ್ಕಾಟ್ಲೆಂಡ್ನ ಸಾಸ್ಕಿಯಾ ಹಾರ್ಲೆ, ಐರ್ಲೆಂಡ್ನ ಫ್ರೇಯಾ ಸಾರ್ಜೆಂಟ್ ಅವರನ್ನೂ ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
2024ರಲ್ಲಿ ಈ ನಾಲ್ವರ ಪ್ರದರ್ಶನ ಹೇಗಿದೆ?
ಅನ್ನೇರಿ ಡೆರ್ಕ್ಸೆನ್ (ಸೌತ್ ಆಫ್ರಿಕಾ): 17 ಟಿ20ಗಳಲ್ಲಿ 161 ರನ್ ಮತ್ತು 5 ವಿಕೆಟ್ ಪಡೆದಿದ್ದಾರೆ. 2 ಟೆಸ್ಟ್‌ಗಳಲ್ಲಿ 60 ರನ್ ಸಿಡಿಸಿದ್ದಾರೆ. 4 ಏಕದಿನ ಪಂದ್ಯಗಳಲ್ಲಿ 70 ರನ್ ಮತ್ತು 6 ವಿಕೆಟ್ ಕಬಳಿಸಿದ್ದಾರೆ. ಶಿಕ್ಷಕಿಯಾಗಿದ್ದರೂ ಇವರಿಗೆ ಕ್ರಿಕೆಟ್ ಮೇಲೆ ಒಲವು ಹೆಚ್ಚು.
ಸಾಸ್ಕಿಯಾ ಹಾರ್ಲೆ (ಸ್ಕಾಟ್ಲೆಂಡ್): 10 ಟಿ20ಗಳಲ್ಲಿ 142 ರನ್ ಮತ್ತು 3 ವಿಕೆಟ್ ಪಡೆದಿದ್ದಾರೆ. 5 ಏಕದಿನಗಳಲ್ಲಿ 276 ರನ್ ಮತ್ತು 9 ವಿಕೆಟ್ ಉರುಳಿಸಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡಲು ಸ್ಫೂರ್ತಿಯಾದವರು ಎಲಿಸ್ ಪೆರಿ.
ಶ್ರೇಯಾಂಕಾ ಪಾಟೀಲ್ (ಭಾರತ): ಈ ವರ್ಷ 13 ಟಿ20 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. 2 ಏಕದಿನ ಪಂದ್ಯಗಳಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಗಮನಾರ್ಹ ಪ್ರದರ್ಶನ ನೀಡಿದ ಹಿನ್ನೆಲೆ ಭಾರತ ತಂಡದಲ್ಲಿ ಅವಕಾಶ ಪಡೆದರು.
ಫ್ರೇಯಾ ಸಾರ್ಜೆಂಟ್ (ಐರ್ಲೆಂಡ್): 11 ಏಕದಿನ ಪಂದ್ಯಗಳಲ್ಲಿ 13 ವಿಕೆಟ್, 9 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. ಶ್ರೀಮಂತ ಕ್ರಿಕೆಟ್ ಪರಂಪರೆ ಹೊಂದಿರುವ ಕುಟುಂಬದಿಂದ ಬಂದವರು ಇವರು.
ಪುರುಷರ ವಿಭಾಗದಲ್ಲಿ ಭಾರತೀಯರೇ ಇಲ್ಲ
ವರ್ಷದ ಪುರುಷರ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ಬಿಡುಗಡೆಯಾದ ಕಿರುಪಟ್ಟಿಯಲ್ಲಿ ಭಾರತೀಯರಿಗೆ ಸ್ಥಾನವೇ ಸಿಕ್ಕಿಲ್ಲ. ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಸೇರಿದಂತೆ ಈ ವರ್ಷ ಅಬ್ಬರಿಸಿದ ಭಾರತದ ಯುವ ಆಟಗಾರರಿಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ಬಾರಿ ಪಾಕಿಸ್ತಾನದ ಯುವ ಓಪನರ್ ಸೈಮ್ ಅಯೂಬ್, ಶ್ರೀಲಂಕಾದ ಬ್ಯಾಟರ್ ಕಮಿಂದು ಮೆಂಡಿಸ್, ವೆಸ್ಟ್ ಇಂಡೀಸ್‌ನ ಯುವ ವೇಗಿ ಶಮರ್ ಜೋಸೆಫ್ ಹಾಗೂ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಹೆಸರು ನಾಮನಿರ್ದೇಶನಗೊಂಡಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.