ಕನ್ನಡ ಸುದ್ದಿ  /  Cricket  /  Shreyanka Patil Reveals Role Model Virat Kohli Appreciation After Wpl 2024 Performance Womens Premier League Rcb Jra

ಅವರಿಗೆ ನನ್ನ ಹೆಸರು ಗೊತ್ತಿದೆ; ರೋಲ್‌ ಮಾಡೆಲ್ ವಿರಾಟ್ ಕೊಹ್ಲಿ ಹೊಗಳಿಕೆಗೆ ಫ್ಯಾನ್‌ ಗರ್ಲ್‌ ಶ್ರೇಯಾಂಕಾ ಫುಲ್‌ ಖುಷ್

Shreyanka Patil: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಕನ್ನಡತಿ ಶ್ರೇಯಾಂಕಾ ಪಾಟೀಲ್. ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಶ್ರೇಯಾಂಕಾ, ತಮ್ಮ ಆರಾಧ್ಯ ದೈವ ಹಾಗೂ ರೋಲ್‌ ಮಾಡೆಲ್ ವಿರಾಟ್ ಕೊಹ್ಲಿ‌ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ಜೀವನದ ವಿಶೇಷ ಕ್ಷಣದ ಕುರಿತು ಶ್ರೇಯಾಂಕಾ ಹೇಳಿಕೊಂಡಿದ್ದಾರೆ.

ರೋಲ್‌ ಮಾಡೆಲ್ ವಿರಾಟ್ ಕೊಹ್ಲಿ ಹೊಗಳಿಕೆಗೆ ಫ್ಯಾನ್‌ ಗರ್ಲ್‌ ಶ್ರೇಯಾಂಕಾ ಫುಲ್‌ ಖುಷ್
ರೋಲ್‌ ಮಾಡೆಲ್ ವಿರಾಟ್ ಕೊಹ್ಲಿ ಹೊಗಳಿಕೆಗೆ ಫ್ಯಾನ್‌ ಗರ್ಲ್‌ ಶ್ರೇಯಾಂಕಾ ಫುಲ್‌ ಖುಷ್ (X)

ಆರ್‌ಸಿಬಿ ವನಿತೆಯರ ತಂಡವು ವಿಮೆನ್ಸ್‌ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಚೊಚ್ಚಿಲ ಟ್ರೋಫಿ ಗೆದ್ದು ಸಂಭ್ರಮಿಸಿತು. ಫೈನಲ್‌ ಪಂದ್ಯ ಸೇರಿದಂತೆ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಕನ್ನಡತಿ ಶ್ರೇಯಾಂಕಾ ಪಾಟೀಲ್ (Shreyanka Patil).‌ ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ ಶ್ರೇಯಾಂಕಾ, ತಮ್ಮ ಅಮೋಘ ಪ್ರದರ್ಶನಕ್ಕೆ ಪರ್ಪಲ್ ಕ್ಯಾಪ್ ಗೆದ್ದರು. ಕಳೆದ ಭಾನುವಾರವಷ್ಟೇ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಮಿಂದೆದ್ದ ಕನ್ನಡತಿ, ಮಂಗಳವಾರ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಅವರು ತಮ್ಮ ಆರಾಧ್ಯ ದೈವ ಹಾಗೂ ರೋಲ್‌ ಮಾಡೆಲ್ ವಿರಾಟ್ ಕೊಹ್ಲಿ‌ (Virat Kohli) ಅವರನ್ನು ಭೇಟಿ ಮಾಡಿದರು. ತಮ್ಮ ಜೀವನದ ವಿಶೇಷ ಕ್ಷಣದ ಕುರಿತು ಶ್ರೇಯಾಂಕಾ ಹೇಳಿಕೊಂಡಿದ್ದಾರೆ.

ಕೊಹ್ಲಿ ನನ್ನ ರೋಲ್‌ ಮಾಡೆಲ್‌ ಎಂದು ಈ ಹಿಂದೆಯೇ ಶ್ರೇಯಾಂಕಾ ಹೇಳಿಕೊಂಡಿದ್ದರು. ಅವರ ಭೇಟಿಗಾಗಿ ಕಾಯುತ್ತಿದ್ದ ಕನ್ನಡತಿ, ಕೊನೆಗೂ ಚಿನ್ನಸ್ವಾಮಿ ಮೈದಾನದಲ್ಲಿ ತಮ್ಮ ಕನಸು ನನಸಾಗಿಸಿದ್ದಾರೆ. ತಮ್ಮ ಜೀವನದ ವಿಶೇಷ ಕ್ಷಣದ ಬಗ್ಗೆ ಖುದ್ದು ಶ್ರೇಯಾಂಕಾ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

"ಅವರಿಂದಾಗಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಆರಂಭಿಸಿದೆ. ಬೆಳೆಯುತ್ತಾ, ಅವರಂತೆ ಆಗಬೇಕೆಂಬ ಕನಸು ಕಂಡೆ. ಕಳೆದ ರಾತ್ರಿ, ನನ್ನ ಜೀವನದ ಅಮೂಲ್ಯ ಕ್ಷಣವನ್ನು ಅನುಭವಿಸಿದೆ. 'ಹಾಯ್ ಶ್ರೇಯಂಕಾ, ಚೆನ್ನಾಗಿ ಬೌಲ್ ಮಾಡಿದ್ದೀಯಾ' ಎಂದು ವಿರಾಟ್ ಹೇಳಿದರು. ಅವರಿಗೆ ನಿಜಕ್ಕೂ ನನ್ನ ಹೆಸರು ತಿಳಿದಿದೆ" ಎಂದು ಶ್ರೇಯಂಕಾ ತಮ್ಮ ಅಧಿಕೃತ ಎಕ್ಸ್ ಪ್ರೊಫೈಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಕೊಹ್ಲಿ ತಮ್ಮ ರೋಲ್‌ ಮಾಡೆಲ್‌, ನಾನು ಈಗಲೂ ಅವರ ಫ್ಯಾನ್‌ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡಕ್ಕೂ ಆಯ್ಕೆ

ಡಬ್ಲ್ಯುಪಿಎಲ್ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ಆರ್‌ಸಿಬಿ ತಂಡ ಸೇರಿಕೊಂಡ ಶ್ರೇಯಾಂಕಾ, ಮೊದಲ ಆವೃತ್ತಿಯಲ್ಲೇ ಅಭಿಮಾನಿಗಳಿಗೆ ಹತ್ತಿರವಾದರು. ಆಡಿದ ಏಳು ಪಂದ್ಯಗಳಲ್ಲಿ ಆರು ವಿಕೆಟ್‌ ಕಬಳಿಸಿದ್ದರು. ಆ ಬಳಿಕ ಭಾರತ ತಂಡಕ್ಕೂ ಆಯ್ಕೆಯಾದರು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ, ಭಾರತದ ಪರ ಆಡುವ ಕನಸು ನನಸಾಗಿಸಿದರು. ಶ್ರೇಯಾಂಕಾ ಇಲ್ಲಿಯವರೆಗೆ ಭಾರತ ಪರ ಎರಡು ಏಕದಿನ ಮತ್ತು ಆರು ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿ, ಕ್ರಮವಾಗಿ ನಾಲ್ಕು ಮತ್ತು ಎಂಟು ವಿಕೆಟ್‌ ಕಬಳಿಸಿದ್ದಾರೆ.

ಈ ಬಾರಿಯ ಡಬ್ಲ್ಯೂಪಿಲ್ ಫೈನಲ್‌ನಲ್ಲಿಯೂ ಶ್ರೇಯಾಂಕಾ ಗಮನಾರ್ಹ ಬೌಲಿಂಗ್‌ ಮಾಡಿದರು. 3.3 ಓವರ್‌ಗಲ್ಲಿ 12 ರನ್‌ ಮಾತ್ರ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್‌ ಕಬಳಿಸಿದರು. ಕೇವಲ 113 ರನ್‌ಳಿಗೆ ಮೆಗ್‌ ಲ್ಯಾನಿಂಗ್‌ ಪಡೆ ಆಲೌಟ್ ಆಗುವಲ್ಲಿ ತಂಡಕ್ಕೆ ನೆರವಾದರು.

ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ ಎಂಟು ಪಂದ್ಯಗಳಲ್ಲಿ ಶ್ರೇಯಂಕಾ 13 ವಿಕೆಟ್‌ ಪಡೆದಿದ್ದಾರೆ. ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡು ಪರ್ಪಲ್‌ ಕ್ಯಾಪ್‌ ತಮ್ಮದಾಸಿಕೊಂಡರು. ಅಲ್ಲದೆ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯನ್ನೂ ಗೆದ್ದರು. ಪಂದ್ಯಾವಳಿಯಲ್ಲಿ 12.07ರ ಸರಾಸರಿ ಮತ್ತು ಕೇವಲ 7.30 ಎಕಾನಮಿಯೊಂದಿಗೆ ಬೌಲಿಂಗ್‌ ಮಾಡಿದ್ದಾರೆ.