ಫಿಟ್ ಇದ್ದರೂ ರಣಜಿಯಿಂದ ಹಿಂದೆ ಸರಿದ ಶ್ರೇಯಸ್ ಅಯ್ಯರ್; ಸುಳ್ಳು ಹೇಳಿ ಸಂಕಷ್ಟಕ್ಕೆ ಸಿಲುಕಿದ ಬಲಗೈ ಬ್ಯಾಟರ್
Shreyas Iyer : ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಬರೋಡಾ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ ಈ ಪಂದ್ಯಕ್ಕೆ ಬೆನ್ನು ಸೆಳೆತವನ್ನು ಉಲ್ಲೇಖಿಸಿ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ.
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಕೈಬಿಟ್ಟ ಕಾರಣ ಮುನಿಸಿಕೊಂಡಿರುವ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ಅವರು ಸುಳ್ಳು ಹೇಳಿ ದೇಶೀಯ ಕ್ರಿಕೆಟ್ನ ರಣಜಿ ಟ್ರೋಫಿಯಿಂದ (Ranji Trophy 2024) ಹಿಂದೆ ಸರಿದಿದ್ದಾರೆ. ಗಾಯದ ಸಮಸ್ಯೆ ಉಲ್ಲೇಖಿಸಿದ ಶ್ರೇಯಸ್ ಅಯ್ಯರ್ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯಲು ನಿರಾಕರಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅವರ ಫಿಟ್‌ನೆಸ್ ಸ್ಥಿತಿಯ ಬಗ್ಗೆ ಗೊಂದಲವು ಬೆಳೆಯುತ್ತಲೇ ಇದೆ. ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಬರೋಡಾ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ ಈ ಪಂದ್ಯಕ್ಕೆ ಬೆನ್ನು ಸೆಳೆತವನ್ನು ಉಲ್ಲೇಖಿಸಿ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ. ಆದರೆ, ಅಯ್ಯರ್ ಫಿಟ್ ಆಗಿದ್ದಾರೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy) ಘೋಷಿಸಿದೆ.
ಅಯ್ಯರ್ ಫುಲ್ ಫಿಟ್ ಎಂದ ಎನ್ಸಿಎ
ಇಂಡಿಯನ್ ಎಕ್ಸ್ಪ್ರೆಸ್ ಈ ಬಗ್ಗೆ ವರದಿ ಮಾಡಿದೆ. ಶುಕ್ರವಾರದಿಂದ ಪ್ರಾರಂಭವಾಗುವ ಬರೋಡಾ ವಿರುದ್ಧದ ರಣಜಿ ಕ್ವಾರ್ಟರ್ಫೈನಲ್ನಿಂದ ಹೊರಗುಳಿಯಲು ಅಯ್ಯರ್ ಬೆನ್ನುನೋವಿನ ಕಾರಣ ಉಲ್ಲೇಖಿಸಿದ್ದಾರೆ. ಆದರೆ ಎನ್ಸಿಎ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಅವರು ಅಯ್ಯರ್ ಫಿಟ್ ಆಗಿದ್ದಾರೆ ಎಂದು ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐಗೆ ಕಳುಹಿಸಿದ ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಿದ್ದಾರೆ ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.
ಹಿರಿಯ ಮಾತಿಗೆ ಕಿಮ್ಮತ್ತು ಕೊಡದ ಕಿರಿಯರು
ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸದಿರುವುದು ಆಟಗಾರರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಗುತ್ತಿಗೆ ಮತ್ತು ಭಾರತ ಎ ಕ್ರಿಕೆಟಿಗರಿಗೆ ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಚ್ಚರಿಕೆ ನೀಡಿದ್ದರು. ರಣಜಿ ಆಡಲು ಹಿಂದೇಟು ಹಾಕುತ್ತಿರುವ ವಿಕೆಟ್ ಕೀಪರ್ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಸೇರಿ ಹಲವರಿಗೆ ಎಚ್ಚರಿಕೆ ನೀಡಲಾಗಿತ್ತು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಹಿರಿಯರ ಮಾತಿಗೆ ಯುವ ಆಟಗಾರರು ಕಿಮ್ಮತ್ತು ಕೊಡದಿರುವುದು ಆಕ್ರೋಶಕ್ಕೂ ಗುರಿಯಾಗಿದೆ.
ಸಂಕಷ್ಟದಲ್ಲಿ ಅಯ್ಯರ್ ವೃತ್ತಿಜೀವನ
ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಎನ್ಸಿಎಯಿಂದ ಇನ್‌ಪುಟ್ ಮಾಹಿತಿ ತೆಗೆದುಕೊಂಡ ನಂತರ, ಶ್ರೇಯಸ್‌ಗೆ ರಣಜಿ ಆಡಲು ಹೇಳಿದರು. ಆದರೆ ಯಾರ ಮಾತಿಗೂ ಅವರು ಜಗ್ಗುತ್ತಿಲ್ಲ. ಬೆನ್ನು ನೋವೆಂದು ಸುಳ್ಳು ಹೇಳಿ ಹೊರಗುಳಿದಿದ್ದಾರೆ. ಇದರಿಂದ ಅವರ ವೃತ್ತಿಜೀವನ ಸಂಕಷ್ಟಕ್ಕೆ ಸಿಲುಕಿತ್ತಿದೆ. ಅಯ್ಯರ್ ನಿರ್ಲಕ್ಷತನ ಮುಂದುವರೆದರೆ, ಮುಂದಿನ ದಿನಗಳಲ್ಲಿ ಅವಕಾಶ ಪಡೆಯುವುದು ಕಷ್ಟವಾಗಲಿದೆ. ಈಗಾಗಲೇ ತಂಡದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಯ್ಯರ್ ಸ್ಥಾನ ಕಿತ್ತುಕೊಂಡರೂ ಅಚ್ಚರಿ ಇಲ್ಲ.
ಅಯ್ಯರ್ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ 35, 13, 27 ಮತ್ತು 39 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದರು. ಬೆನ್ನಿನ ಗಾಯದ ಸುದ್ದಿಯೊಂದಿಗೆ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಅವರನ್ನು ಕೈಬಿಡಲಾಯಿತು. ಅಯ್ಯರ್ ಬೆನ್ನುನೋವಿನಿಂದ 2023ರ ಐಪಿಎಲ್ ಅನ್ನು ಕಳೆದುಕೊಂಡಿದ್ದರು. 2023ರ ಏಷ್ಯಾ ಕಪ್‌ನಲ್ಲಿ ಪುನರಾಗಮನ ಮಾಡಿದ ಅಯ್ಯರ್, ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ 66.25 ರ ಅದ್ಭುತ ಸರಾಸರಿಯಲ್ಲಿ 530 ರನ್ ಗಳಿಸಿದ್ದರು.
ಕಳೆದ ವಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಉನ್ನತ ಕ್ರಿಕೆಟಿಗರಿಗೆ ಬರೆದ ಪತ್ರದಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಲು ದೇಶೀಯ ಕ್ರಿಕೆಟ್ ಪ್ರಮುಖ ಮಾನದಂಡವಾಗಿ ಉಳಿದಿದೆ ಎಂದು ಹೇಳಿದ್ದಾರೆ. ಭಾರತವು ಫೆಬ್ರವರಿ 23 ರಿಂದ ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಅನ್ನು ಆಡುತ್ತದೆ. ಅದೇ ದಿನ ರಣಜಿಯಲ್ಲಿ ಮುಂಬೈ, ಬರೋಡಾ ತಂಡವನ್ನು ಎದುರಿಸಲಿದೆ.