ಪಂಜಾಬ್ ಕಿಂಗ್ಸ್ ನೂತನ ನಾಯಕನ ನೇಮಕ, ಬಿಗ್​ ಬಾಸ್​ನಲ್ಲಿ ಘೋಷಿಸಿದ ಸಲ್ಮಾನ್ ಖಾನ್; 2024ರಲ್ಲಿ 4 ಟ್ರೋಫಿ ಗೆದ್ದಾತನಿಗೆ ಪಟ್ಟ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್ ಕಿಂಗ್ಸ್ ನೂತನ ನಾಯಕನ ನೇಮಕ, ಬಿಗ್​ ಬಾಸ್​ನಲ್ಲಿ ಘೋಷಿಸಿದ ಸಲ್ಮಾನ್ ಖಾನ್; 2024ರಲ್ಲಿ 4 ಟ್ರೋಫಿ ಗೆದ್ದಾತನಿಗೆ ಪಟ್ಟ

ಪಂಜಾಬ್ ಕಿಂಗ್ಸ್ ನೂತನ ನಾಯಕನ ನೇಮಕ, ಬಿಗ್​ ಬಾಸ್​ನಲ್ಲಿ ಘೋಷಿಸಿದ ಸಲ್ಮಾನ್ ಖಾನ್; 2024ರಲ್ಲಿ 4 ಟ್ರೋಫಿ ಗೆದ್ದಾತನಿಗೆ ಪಟ್ಟ

Shreyas Iyer: 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಆರಂಭಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಹಿಂದಿ ಬಿಗ್​ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಈ ಘೋಷಣೆ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್ ನೂತನ ನಾಯಕನ ನೇಮಕ, ಬಿಗ್​ ಬಾಸ್​ನಲ್ಲಿ ಘೋಷಿಸಿದ ಸಲ್ಮಾನ್ ಖಾನ್; 2024ರಲ್ಲಿ 4 ಟ್ರೋಫಿ ಗೆದ್ದಾತನಿಗೆ ಪಟ್ಟ
ಪಂಜಾಬ್ ಕಿಂಗ್ಸ್ ನೂತನ ನಾಯಕನ ನೇಮಕ, ಬಿಗ್​ ಬಾಸ್​ನಲ್ಲಿ ಘೋಷಿಸಿದ ಸಲ್ಮಾನ್ ಖಾನ್; 2024ರಲ್ಲಿ 4 ಟ್ರೋಫಿ ಗೆದ್ದಾತನಿಗೆ ಪಟ್ಟ

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ 2025 (IPL 2025) ಆರಂಭಕ್ಕೆ ಅಧಿಕೃತ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸು ಹೊಂದಿರುವ ಪಂಜಾಜ್ ಕಿಂಗ್ಸ್ ತಮ್ಮ ತಂಡಕ್ಕೆ ನೂತನ ನಾಯಕನನ್ನು ನೇಮಿಸಿದೆ. ನಿರೀಕ್ಷೆಯಂತೆ, ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ನೂತನ ಕ್ಯಾಪ್ಟನ್ ಆಗಿ ಘೋಷಣೆ ಮಾಡಲಾಗಿದೆ. ಹಿಂದಿ ಬಿಗ್​ ಬಾಸ್ ರಿಯಾಲಿಟಿ ಶೋನಲ್ಲಿ ನಟ- ನಿರೂಪಕ ಸಲ್ಮಾನ್ ಖಾನ್ ಪಿಬಿಕೆಎಸ್ ಹೊಸ ನಾಯಕನನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅಯ್ಯರ್​​ರನ್ನು ಪ್ರೀತಿ ಜಿಂಟಾ ಒಡೆತನದ ಫ್ರಾಂಚೈಸಿಯು ಬರೋಬ್ಬರಿ 26.75 ಕೋಟಿ ರೂಗೆ ಖರೀದಿಸಿತು. ಆ ಮೂಲಕ ಅಯ್ಯರ್​ ಲೀಗ್ ಇತಿಹಾಸದಲ್ಲಿ 2ನೇ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ ವರ್ಷ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್​ ಮಾಡಿದ್ದ ಮತ್ತು ದೇಶೀಯ ಕ್ರಿಕೆಟ್​ನಲ್ಲಿ ಮುಂಬೈಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಟ್ಟಿದ್ದ ಅಯ್ಯರ್, ಇದೀಗ ಪಂಜಾಬ್​ಗೆ ಮೊದಲ ಟ್ರೋಫಿ ಗೆದ್ದುಕೊಡುವ ವಿಶ್ವಾಸ ಹೊಂದಿದ್ದಾರೆ.

ಬಿಗ್​ ಬಾಸ್​ ಶೋನಲ್ಲಿ ಅಯ್ಯರ್ ಹೆಸರು ಘೋಷಣೆ

ರಿಯಾಲಿಟಿ ಟೆಲಿವಿಷನ್ ಶೋ 'ಬಿಗ್ ಬಾಸ್' ನಲ್ಲಿ ನಟ ಸಲ್ಮಾನ್ ಖಾನ್ ಈ ಘೋಷಣೆ ಮಾಡಿದ್ದಾರೆ. ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಲ್ ಮತ್ತು ಶಶಾಂಕ್ ಸಿಂಗ್ ಕೂಡ ಈ ಶೋನಲ್ಲಿ ಭಾಗವಹಿಸಿದ್ದರು. ತನ್ನ ಹೆಸರನ್ನು ಘೋಷಿಸಿದ ಬಳಿಕ ಮಾತನಾಡಿದ ಅಯ್ಯರ್, ‘ಪಂಜಾಬ್ ಕಿಂಗ್ಸ್ ಮ್ಯಾನೇಜ್ಮೆಂಟ್​​ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಂಡವು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನನಗೆ ಗೌರವವಿದೆ. ಕೋಚ್ ಪಾಂಟಿಂಗ್ ಅವರೊಂದಿಗೆ ಮತ್ತೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

‘ನಮ್ಮದು ಅನಾನುಭವಿ ಮತ್ತು ಅನುಭವಿ ಆಟಗಾರರ ಮಿಶ್ರ ತಂಡವಾಗಿದ್ದು, ಅತ್ಯಂತ ಬಲಿಷ್ಠವಾಗಿದೆ. ನಾವೆಲ್ಲಾ ಸೇರಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಲು ಯತ್ನಿಸುತ್ತೇವೆ’ ಎಂದು ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ದೇಶೀಯ ಕ್ರಿಕೆಟ್​​ನಲ್ಲಿ ಅಯ್ಯರ್ ಗಮನಾರ್ಹ ಸಾಧನೆ ಮಾಡಿದ್ದರು. ತನ್ನ ನಾಯಕತ್ವದಲ್ಲಿ ಐಪಿಎಲ್ ಸೇರಿ 4 ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ನಾಯಕತ್ವದಲ್ಲಿ ಮುಂಬೈ 42ನೇ ರಣಜಿ ಟ್ರೋಫಿ, ಇರಾನಿ ಕಪ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಟ್ಟಿದ್ದರು. ಐಪಿಎಲ್​ನಲ್ಲಿ ಕೆಕೆಆರ್​​ಗೆ 3ನೇ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟರು.

ರಿಕಿ ಪಾಂಟಿಂಗ್ ಹೇಳಿದ್ದೇನು?

ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮಾತನಾಡಿ, ‘ಶ್ರೇಯಸ್ ಆಟದ ಬಗ್ಗೆ ಉತ್ತಮ ಹಿಡಿತ ಹೊಂದಿದ್ದಾರೆ. ನಾನು ಈ ಹಿಂದೆ ಐಪಿಎಲ್​ನಲ್ಲಿ ಅಯ್ಯರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಆನಂದಿಸಿದ್ದೇನೆ. ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಮುಂದಿನ ಆವೃತ್ತಿಗೆ ಉತ್ಸುಕನಾಗಿದ್ದೇನೆ’ ಎಂದರು. ಐಪಿಎಲ್​​ನಲ್ಲಿ ಮ್ಯಾಚ್ ವಿನ್ನರ್ ಆಗಿರುವ 30ರ ಹರೆಯದ ಅಯ್ಯರ್, 31.67ರ ಸರಾಸರಿಯಲ್ಲಿ 123.96ರ ಸ್ಟ್ರೈಕ್ ರೇಟ್ ಹಾಗೂ 16 ಅರ್ಧಶತಕಗಳೊಂದಿಗೆ 2,375 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 96.

ಕಳೆದ ವರ್ಷ ಕೆಕೆಆರ್ ಪರ 15 ಪಂದ್ಯಗಳಲ್ಲಿ 39ರ ಬ್ಯಾಟಿಂಗ್ ಸರಾಸರಿಯಲ್ಲಿ 351 ರನ್ ಗಳಿಸಿದ್ದು, 146ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡ ಹರಾಜಿಗೂ ಮುನ್ನ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಘೋಷಿಸಿತ್ತು. ರಿಕಿ ಪಾಂಟಿಂಗ್​ರನ್ನು ನೂತನ ಮುಖ್ಯಕೋಚ್ ಆಗಿ ಹೆಸರಿಸಿತು. ಪಾಂಟಿಂಗ್-ಅಯ್ಯರ್ ಈ ಹಿಂದೆ ಡೆಲ್ಲಿ​​ ತಂಡದೊಂದಿಗೆ ಕೆಲಸ ಮಾಡಿದ್ದರು. ಪಾಂಟಿಂಗ್ ಮಾರ್ಗದರ್ಶನದಲ್ಲಿ ಅಯ್ಯರ್ ಮೊದಲ ಬಾರಿಗೆ 2018ರ ಆವೃತ್ತಿಯ ಮಧ್ಯದಲ್ಲಿ ನಾಯಕನಾಗಿದ್ದರು.

Whats_app_banner