ಕೆಕೆಆರ್ ತೊರೆಯಲು ಕಾರಣ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್; ಹಿಂಗ್ಯಾಕೆ ಮಾಡಿತು ಶಾರೂಖ್ ಖಾನ್ ಒಡೆತನದ ಫ್ರಾಂಚೈಸಿ?
2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಶ್ರೇಯಸ್ ಅಯ್ಯರ್ 2025ರ ಆವೃತ್ತಿಗೂ ಮುನ್ನ ಫ್ರಾಂಚೈಸಿ ತೊರೆಯಲು ಕಾರಣ ಏನೆಂದು ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸಾಕಷ್ಟು ಏರಿಳಿತ ಕಂಡರು. 2024ರ ಫೆಬ್ರವರಿಯಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದರು. ಇದಾದ ಬಳಿಕ ಅಯ್ಯರ್ ಬಿಸಿಸಿಐ ಕೇಂದ್ರ ಒಪ್ಪಂದವನ್ನೂ ರದ್ದುಪಡಿಸಲಾಗಿತ್ತು. ಆದಾಗ್ಯೂ, ಕಠಿಣ ಪರಿಶ್ರಮ ಹಾಕಿದ ಅಯ್ಯರ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 48.60ರ ಸರಾಸರಿಯಲ್ಲಿ 243 ರನ್ ಗಳಿಸಿದ ಅವರು, ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಯ್ಯರ್ ಅವರನ್ನು 'ಸೈಲೆಂಟ್ ಹೀರೋ' ಎಂದು ರೋಹಿತ್ ಶರ್ಮಾ ಕರೆಯುವ ಮೂಲಕ ಅವರ ಸಾಧನೆ ಕೊಂಡಾಡಿದರು.
ಅಯ್ಯರ್ ತಮ್ಮ ನಾಯಕತ್ವದ ಕೌಶಲ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) 2024ರ ಐಪಿಎಲ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದು ಕೆಕೆಆರ್ನ 10 ವರ್ಷಗಳ ಟ್ರೋಫಿ ಬರ ಕೊನೆಗೊಳಿಸಿತು. ಆದಾಗ್ಯೂ, ಕೆಕೆಆರ್ ಪ್ರಶಸ್ತಿ ಗೆದ್ದ ನಂತರವೂ ಅಯ್ಯರ್ ಕೆಕೆಆರ್ ತೊರೆದರು. ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳುವ ಯತ್ನಕ್ಕೂ ಕೈ ಹಾಕಲಿಲ್ಲ. ಮೆಗಾ ಹರಾಜಿಗೆ ಬಂದ ಅಯ್ಯರ್, 26.75 ಕೋಟಿ ರೂ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಅಯ್ಯರ್ ಮುಕ್ತವಾಗಿ ಮಾತನಾಡಿದ್ದು, ಕೆಕೆಆರ್ ತಂಡವನ್ನು ತೊರೆದಿದ್ದೇಕೆ ಎಂದು ಬಹಿರಂಗಪಡಿಸಿದ್ದಾರೆ.
ಕೆಕೆಆರ್ ತೊರೆಯಲು ಕಾರಣ ತಿಳಿಸಿದ ಅಯ್ಯರ್
ಟ್ರೋಫಿಯನ್ನು ಗೆದ್ದರೂ ಕೆಕೆಆರ್ನಿಂದ ನಿರೀಕ್ಷಿತ ಮಾನ್ಯತೆ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ‘ಇದು ತುಂಬಾ ತೃಪ್ತಿಕರವಾಗಿದೆ’ ಎಂದು ಅಯ್ಯರ್ ಚಾಂಪಿಯನ್ಸ್ ಟ್ರೋಫಿಯ ನಂತರ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಒಂದು ಪ್ರಯಾಣವಾಗಿದೆ. 2023ರ ಏಕದಿನ ವಿಶ್ವಕಪ್ ಆಡಿದ ನಂತರ ನಾನು ಒಪ್ಪಂದದಿಂದ ಹೊರಬಂದ ನನ್ನ ಜೀವನದ ಈ ಹಂತದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಎಲ್ಲಿ ತಪ್ಪು ಮಾಡಿದ್ದೇನೆ, ನಾನು ಏನು ಮಾಡಬೇಕು, ನನ್ನ ಫಿಟ್ನೆಸ್ ಬಗ್ಗೆ ನಾನು ಎಷ್ಟು ಗಮನ ಹರಿಸಬೇಕು ಎಂದು ಮರು ಮೌಲ್ಯಮಾಪನ ಮಾಡಿದ್ದೇನೆ. ಎಲ್ಲಾ ಪ್ರಶ್ನೆಗಳಿಗೆ ದಿನಚರಿ ಸಿದ್ಧಪಡಿಸಿದೆ’ ಎಂದು ಹೇಳಿದ್ದಾರೆ.
‘ನಾನು ನನ್ನ ತರಬೇತಿ ಮತ್ತು ಕೌಶಲ್ಯಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದೆ. ದೇಶೀಯ ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡಲು ನನಗೆ ಅವಕಾಶ ಸಿಕ್ಕ ನಂತರ, ಫಿಟ್ನೆಸ್ ನನಗೆ ಎಷ್ಟು ಮುಖ್ಯ ಎಂದು ಅರಿತುಕೊಂಡೆ. ಒಟ್ಟಾರೆಯಾಗಿ ನಾನು ನನ್ನ ಬಗ್ಗೆ, ಅದರಿಂದ ಹೊರಬಂದ ರೀತಿ, ನಾನು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ಬಯಸಿದ ಮನ್ನಣೆ ಸಿಗಲಿಲ್ಲ ಎಂದ ಅಯ್ಯರ್
ಇಡೀ ಪರಿಸ್ಥಿತಿಯಿಂದ ನೀವು ಎಂದಾದರೂ ನಿರಾಶೆಗೊಂಡಿದ್ದೀರಾ ಎಂದು ಕೇಳಿದಾಗ, ಅಯ್ಯರ್ ಉತ್ತರಿಸಿದ್ದು ಹೀಗೆ.. 'ನಾನು ಐಪಿಎಲ್ ಆಡುತ್ತಿರುವುದರಿಂದ ಯಾವುದೇ ನಿರಾಶೆ ಇರಲಿಲ್ಲ. ನನ್ನ ಗಮನವು ಐಪಿಎಲ್ ಗೆಲ್ಲುವುದರ ಮೇಲೆ ಹೆಚ್ಚು ಇತ್ತು. ಮತ್ತು ಅದೃಷ್ಟವಶಾತ್ ನಾನು ಅದನ್ನು ಗೆದ್ದೆ. ಆದರೆ ಐಪಿಎಲ್ ಗೆದ್ದ ನಂತರ ನಾನು ಬಯಸಿದ ಮನ್ನಣೆ ಸಿಗಲಿಲ್ಲ ಎಂದು ನಾನು ವೈಯಕ್ತಿಕವಾಗಿ ಭಾವಿಸಿದೆ ಎಂದು ಕೆಕೆಆರ್ ತೊರೆಯಲು ಕಾರಣ ಏನೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಮಾರ್ಚ್ 22 ರಿಂದ 2025ರ ಐಪಿಎಲ್ ಪ್ರಾರಂಭವಾಗಲಿದೆ. 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಮಾರ್ಚ್ 25ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಅಯ್ಯರ್ ಅವರನ್ನು ಪಂಜಾಬ್ 26.75 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್ ಇತಿಹಾಸದಲ್ಲಿ 2ನೇ ಅತ್ಯಂತ ದುಬಾರಿ ಖರೀದಿ.