55 ಎಸೆತ, 10 ಸಿಕ್ಸರ್, 114 ರನ್, 207.27 ಸ್ಟೈಕ್​ರೇಟ್; ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ, ಸೆಲೆಕ್ಟರ್ಸ್​ಗೆ ಸಂದೇಶ ರವಾನೆ
ಕನ್ನಡ ಸುದ್ದಿ  /  ಕ್ರಿಕೆಟ್  /  55 ಎಸೆತ, 10 ಸಿಕ್ಸರ್, 114 ರನ್, 207.27 ಸ್ಟೈಕ್​ರೇಟ್; ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ, ಸೆಲೆಕ್ಟರ್ಸ್​ಗೆ ಸಂದೇಶ ರವಾನೆ

55 ಎಸೆತ, 10 ಸಿಕ್ಸರ್, 114 ರನ್, 207.27 ಸ್ಟೈಕ್​ರೇಟ್; ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ, ಸೆಲೆಕ್ಟರ್ಸ್​ಗೆ ಸಂದೇಶ ರವಾನೆ

Shreyas Iyer: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧ ಮುಂಬೈ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 55 ಎಸೆತಗಳಲ್ಲಿ ಅಜೇಯ 114* ರನ್ ಗಳಿಸುವ ಸುನಾಮಿ ಎಬ್ಬಿಸಿದ್ದಾರೆ. ಆ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

10 ಸಿಕ್ಸರ್ ಸಹಿತ ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ; ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸೆಲೆಕ್ಟರ್ಸ್​ಗೆ ಸಂದೇಶ ರವಾನೆ
10 ಸಿಕ್ಸರ್ ಸಹಿತ ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ; ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸೆಲೆಕ್ಟರ್ಸ್​ಗೆ ಸಂದೇಶ ರವಾನೆ (PTI)

ವಿಜಯ್ ಹಜಾರೆ ಟ್ರೋಫಿ 2024-25ರ ಆರಂಭಿಕ ಪಂದ್ಯದಲ್ಲಿ ಮುಂಬೈ ಪರ ಶ್ರೇಯಸ್ ಅಯ್ಯರ್ ಮಿಂಚಿದ್ದಾರೆ. 55 ಎಸೆತಗಳಲ್ಲೇ 10 ಸಿಕ್ಸರ್, 5 ಬೌಂಡರಿ ಸಹಿತ ಭರ್ಜರಿ 114* ರನ್ ಗಳಿಸುವ ಮೂಲಕ ಬಿಸಿಸಿಐ ಸೆಲೆಕ್ಟರ್ಸ್​ಗೆ ಸಂದೇಶ ರವಾನಿಸಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ತನ್ನನ್ನು ಆಯ್ಕೆ ಮಾಡುವಂತೆ ಸಂದೇಶ ಕಳುಹಿಸಿದ್ದಾರೆ. ವೇಗದ ಶತಕ ಸಿಡಿಸಿ ದಾಖಲೆ ಬರೆದ ಅಯ್ಯರ್, 2025ರ ಫೆಬ್ರವರಿಯಲ್ಲಿ ಶುರುವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಅಯ್ಯರ್ ವೇಗದ ಶತಕದ ಅಬ್ಬರಕ್ಕೆ ಕಂಗಾಲಾದ ಕರ್ನಾಟಕ 383 ರನ್​ಗಳ ಬೃಹತ್ ಗುರಿ ಪಡೆಯಿತು. ಮುಂಬೈ ನಿಗದಿತ 50 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ​​ 382 ರನ್​ ಕಲೆ ಹಾಕಿತು. ಅದಾಗಿಯೂ ಕರ್ನಾಟಕದ ಬೆಂಕಿ-ಬಿರುಗಾಳಿಗೆ ಮುಂಬೈ 7 ವಿಕೆಟ್​​ಗಳ ಸೋಲೋಪ್ಪಿಕೊಂಡಿತು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಕೃಷ್ಣನ್ ಶ್ರೀಜಿತ್​ ಬರೋಬ್ಬರಿ 150 ರನ್ ಸಿಡಿಸಿ ಮುಂಬೈ ಗೆಲುವನ್ನು ಕಸಿದುಕೊಂಡರು. ಪಂದ್ಯ ಸೋತರೂ ಸಹ ಶೇಯಸ್ ಅಯ್ಯರ್​ ಆಟ ಎಲ್ಲರ ಗಮನ ಸೆಳೆದಿದ್ದು ವಿಶೇಷ. 

ಅಯ್ಯರ್ ನಾಯಕತ್ವದಲ್ಲಿ…

2024ರ ವರ್ಷ ಅಯ್ಯರ್ ಪಾಲಿಗೆ ಸ್ಮರಣೀಯ ವರ್ಷ. ಶ್ರೇಯಸ್​ ತನ್ನ ನಾಯಕತ್ವದಲ್ಲಿ 2024ರಲ್ಲಿ 4 ಪ್ರಶಸ್ತಿ ಗೆದ್ದಿದ್ದಾರೆ. ಕಳೆದ ವಾರ ಮುಂಬೈ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿತ್ತು. ಇದಕ್ಕೂ ಮುನ್ನ 2024ರ ಐಪಿಎಲ್​ ಟ್ರೋಫಿ, ಇರಾನಿ ಕಪ್ ಮತ್ತು 2024ರ ರಣಜಿ ಟ್ರೋಫಿ ಗೆದ್ದಿದ್ದಾರೆ. ಇದೀಗ ವಿಜಯ್ ಹಜಾರೆ ಟ್ರೋಫಿ ಗೆಲ್ಲಲೂ ಪಣ ತೊಟ್ಟಿದ್ದಾರೆ. ಪ್ರಸ್ತುತ 50 ಓವರ್​​ಗಳ ಕ್ರಿಕೆಟ್​​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಫೈಯರ್​ ಪವರ್ ಮತ್ತು ಪ್ರತಿಭೆ ಪ್ರದರ್ಶಿಸುವುದನ್ನು ಮುಂದುವರಿಸಿರುವ ಅಯ್ಯರ್​, ಮತ್ತೆ ಭಾರತ ತಂಡಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

2024ರಲ್ಲಿ ​ದೇಶೀಯ ಕ್ರಿಕೆಟ್​​​ನಲ್ಲಿ ಅಯ್ಯರ್​ ನಾಯಕನಾಗಿ ಮತ್ತು ಬ್ಯಾಟರ್​ ಆಗಿ ಸ್ಮರಣೀಯ ಪ್ರದರ್ಶನ ಹೊಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಯ್ಯರ್ 188.5 ಸ್ಟ್ರೈಕ್​ರೇಟ್​​ನಲ್ಲಿ 345 ರನ್ ಗಳಿಸುವ ಮೂಲಕ ಮುಂಬೈ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ರಣಜಿ ಟ್ರೋಫಿ ಋತುವಿನ ಮೊದಲ 5 ಪಂದ್ಯಗಳಲ್ಲಿ ಈಗಾಗಲೇ 90.4 ಸರಾಸರಿಯಲ್ಲಿ 452 ರನ್ ಗಳಿಸಿದ್ದಾರೆ. ಅಯ್ಯರ್ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 3ನೇ ಐಪಿಎಲ್ ಟ್ರೋಫಿ ಗೆದ್ದುಕೊಟ್ಟರು. ನಾಯಕನಾಗಿಯೂ ಮೊದಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರು.

ಶ್ರೇಯಸ್ ಮತ್ತೆ ಭಾರತದ ಎಕ್ಸ್-ಫ್ಯಾಕ್ಟರ್ ಆಗಲಿದ್ದಾರೆಯೇ?

2023ರ ಏಕದಿನ ವಿಶ್ವಕಪ್ ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಶತಕ ಚಚ್ಚಿದ್ದ ಅಯ್ಯರ್​, ಇದೀಗ ಭಾರತೀಯ ತಂಡಕ್ಕೆ ಮತ್ತೆ ಮರಳುವ ಭರವಸೆ ಹುಟ್ಟು ಹಾಕಿದ್ದಾರೆ. ಪ್ರಸ್ತುತ ಅಯ್ಯರ್ ಅವರ ಬ್ಯಾಟಿಂಗ್ ಪ್ರದರ್ಶನ ಭಾರತೀಯ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದನ್ನು ಅರ್ಥೈಸುತ್ತಿದೆ. ಆದರೆ ರಿಷಭ್ ಪಂತ್ ಪುನರಾಗಮನ ಮಾಡಿರುವ ಕಾರಣ ಅಯ್ಯರ್​​ಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅವಕಾಶ ಸಿಗುತ್ತಾ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ. ವಿಶ್ವಕಪ್​​ನಲ್ಲಿ 113.24 ಸ್ಟ್ರೈಕ್ ರೇಟ್ ಮತ್ತು 66.25ರ ಬ್ಯಾಟಿಂಗ್ ಸರಾಸರಿಯಲ್ಲಿ 530 ರನ್ ಗಳಿಸಿದ್ದ ಅಯ್ಯರ್, ಒಡಿಐ ವಿಶ್ವಕಪ್ ಇತಿಹಾಸದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಸಿಡಿದೇಳುತ್ತಿರುವ ಕಾರಣ ಆಯ್ಕೆದಾರರಿಗೆ ಸಂದೇಶವನ್ನು ಕಳುಹಿಸಿದ್ದಾರೆ.

Whats_app_banner