ಗುಜರಾತ್ ಬೇಟೆಯಾಡಿದ ಪಂಜಾಬ್ ರಾಜರು; ಅಯ್ಯರ್ ಅಬ್ಬರ, ಟೈಟಾನ್ಸ್ ವಿರುದ್ಧ ಕಿಂಗ್ಸ್​ಗೆ 11 ರನ್ ​ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಬೇಟೆಯಾಡಿದ ಪಂಜಾಬ್ ರಾಜರು; ಅಯ್ಯರ್ ಅಬ್ಬರ, ಟೈಟಾನ್ಸ್ ವಿರುದ್ಧ ಕಿಂಗ್ಸ್​ಗೆ 11 ರನ್ ​ಜಯ

ಗುಜರಾತ್ ಬೇಟೆಯಾಡಿದ ಪಂಜಾಬ್ ರಾಜರು; ಅಯ್ಯರ್ ಅಬ್ಬರ, ಟೈಟಾನ್ಸ್ ವಿರುದ್ಧ ಕಿಂಗ್ಸ್​ಗೆ 11 ರನ್ ​ಜಯ

Gujarat Titans vs Punjab Kings: ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ ವಿರುದ್ಧ ಪಂಜಾಬ್ ಕಿಂಗ್ಸ್ 11 ರನ್​ಗಳಿಂದ ಗೆದ್ದು ಅಭಿಯಾನ ಆರಂಭಿಸಿದೆ.

ಗುಜರಾತ್ ಬೇಟೆಯಾಡಿದ ಪಂಜಾಬ್ ರಾಜರು; ಅಯ್ಯರ್ ಅಬ್ಬರ, ಟೈಟಾನ್ಸ್ ವಿರುದ್ಧ ಕಿಂಗ್ಸ್​ಗೆ 11 ರನ್ ​ಗೆಲುವು
ಗುಜರಾತ್ ಬೇಟೆಯಾಡಿದ ಪಂಜಾಬ್ ರಾಜರು; ಅಯ್ಯರ್ ಅಬ್ಬರ, ಟೈಟಾನ್ಸ್ ವಿರುದ್ಧ ಕಿಂಗ್ಸ್​ಗೆ 11 ರನ್ ​ಗೆಲುವು (PTI)

ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್​​ ನೂತನ ನಾಯಕನ ಅಡಿಯಲ್ಲಿ 11 ರನ್​​​ಗಳ ಭರ್ಜರಿ ಗೆಲುವಿನೊಂದಿಗೆ 18ನೇ ಆವೃತ್ತಿಯ ಅಭಿಯಾನ ಆರಂಭಿಸಿತು. ನಾಯಕ ಶ್ರೇಯಸ್ ಅಯ್ಯರ್ (97*)​ ಮತ್ತು ಶಶಾಂಕ್ ಸಿಂಗ್ (44*) ಅವರ ಬ್ಯಾಟಿಂಗ್ ಸಾಹಸದಿಂದ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಪಂಜಾಬ್ ಶುಭಾರಂಭ ಕಂಡಿದೆ.​ ಆದರೆ ಸಾಯಿ ಸುದರ್ಶನ್, ಜೋಸ್ ಬಟ್ಲರ್ ಮತ್ತು ಶೆರ್ಫಾನೆ ರುದರ್​ಫೋರ್ಡ್​ ಅವರ ಹೋರಾಟದ ನಡುವೆಯೂ ಗುಜರಾತ್ ಗೆಲುವಿನ ಅಂಚಿನಲ್ಲಿ ಶರಣಾಯಿತು. ಇದರಿಂದ ಅಂಕಪಟ್ಟಿಯಲ್ಲಿ 8 ನೇ ಸ್ಥಾನ ಪಡೆದಿದೆ. ಗೆದ್ದ ಅಯ್ಯರ್​ ಪಡೆ 3ನೇ ಸ್ಥಾನ ಗಳಿಸಿದೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 5ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಬೃಹತ್ ಮೊತ್ತ ಪೇರಿಸಿತು. ಶ್ರೇಯಸ್ ಅಯ್ಯರ್ (97*), ಪ್ರಿಯಾಂಶ್ ಆರ್ಯ (47) ಮತ್ತು ಶಶಾಂಕ್ ಸಿಂಗ್ (44*) ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಪಿಬಿಕೆಎಸ್ ತನ್ನ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್​ಗಳ ದೊಡ್ಡ ಮೊತ್ತ ಪೇರಿಸಿತು. ಜಿಟಿ ಪರ ಸಾಯಿ ಕಿಶೋರ್ ಪ್ರಮುಖ ಮೂರು ವಿಕೆಟ್ ಕಿತ್ತು ಮಿಂಚಿದರು.  244 ರನ್​ ಬೆನ್ನತ್ತಿದ ಗುಜರಾತ್, 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು. ಸಾಯಿ ಸುದರ್ಶನ್ (74), ಜೋಸ್ ಬಟ್ಲರ್​ (54) ಅವರ ಹೋರಾಟದ ನಡುವೆಯೂ ಟೈಟಾನ್ಸ್ ಗೆಲುವಿನ ನಗೆ ಬೀರಲು ವಿಫಲವಾಯಿತು. ಆದರೆ ಬೌಲರ್​​ಗಳು ದುಬಾರಿಯಾಗುತ್ತಿದ್ದ ವೇಳೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದ ಕನ್ನಡಿಗ ವಿಜಯ್ ಕುಮಾರ್​ ವೈಶಾಕ್​ ವಿಕೆಟ್ ಪಡೆಯದಿದ್ದರೂ ರನ್ ಮೇಲೆ ನಿಯಂತ್ರಣ ಹೇರಿದರು.

ಸುದರ್ಶನ್, ಬಟ್ಲರ್​, ರುದರ್​ಫೋರ್ಡ್ ಹೋರಾಟಕ್ಕೆ ದಕ್ಕದ ಜಯ

244 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಉತ್ತಮ ಆರಂಭ ಪಡೆಯಿತು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಆರಂಭಿಕ ವಿಕೆಟ್​ಗೆ 61 ರನ್ ಪೇರಿಸಿದರು. ಆದರೆ ಗಿಲ್ 33 ರನ್ ಗಳಿಸಿ ಅನ್​ಲಕ್ಕಿಯಾಗಿ ಔಟಾದರು. ಗ್ಲೆನ್ ಮ್ಯಾಕ್ಸ್​ವೆಲ್ ಪಂಜಾಬ್​ಗೆ ಆರಂಭಿಕ ತಂದುಕೊಟ್ಟರು. ಬಳಿಕ ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್​ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಿದರು. ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದ ಸುದರ್ಶನ್, 41 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್​​ಗಳ ಸಹಿತ 74 ರನ್ ಗಳಿಸಿ ಔಟಾದರು. ಕೊನೆಯ ಹಂತದಲ್ಲಿ ಅರ್ಧಶತಕ ಬಾರಿಸಿದ್ದ ಜೋಸ್ ಬಟ್ಲರ್ (54)​ ಕೂಡ ನಿರ್ಗಮಿಸಿದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ರುದರ್​ಫೋರ್ಡ್​ ಗೆಲುವಿಗಾಗಿ ಶ್ರಮಿಸಿದರಾದರೂ ಸಾಧ್ಯವಾಗಲಿಲ್ಲ. 46 ರನ್ ಸಿಡಿಸಿ ಕೊನೆಯ ಓವರ್​ನಲ್ಲಿ ಔಟಾದರು. ಆದರೆ ಸೋಲಿನ ಅಂತರವನ್ನು ತಗ್ಗಿಸಿದರು.

ಅಯ್ಯರ್ - ಶಶಾಂಕ್ ಭರ್ಜರಿ ಆಟ

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಲಿಲ್ಲ. 4ನೇ ಓವರ್​​ನ ಮೊದಲ ಎಸೆತದಲ್ಲೇ ಪ್ರಭುಸಿಮ್ರಾನ್ ಸಿಂಗ್ 5 ರನ್ ಗಳಿಸಿ ಕಗಿಸೊ ರಬಾಡ ಬೌಲಿಂಗ್​ನಲ್ಲಿ ನಿರ್ಗಮಿಸಿದರು. ಬಳಿಕ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಮತ್ತು ಶ್ರೇಯಸ್ ಅಯ್ಯರ್ 2ನೇ ವಿಕೆಟ್​ಗೆ 51 ರನ್​ಗಳ ಜೊತೆಯಾಟ ಜೋಡಿಸಿದರು. ಆರ್ಯ (47) ಅರ್ಧಶತಕ ಅಂಚಿನಲ್ಲಿ ಔಟಾದರೂ ಅವರ ಆಟ ಎಲ್ಲರ ಗಮನ ಸೆಳೆಯಿತು. ಬಳಿಕ ಅಜ್ಮತುಲ್ಲಾ ಒಮರ್​​ಜೈ (16), ಗ್ಲೆನ್ ಮ್ಯಾಕ್ಸ್​ವೆಲ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮಾರ್ಕಸ್ ಸ್ಟೋಯ್ನಿಸ್ ಗಳಿಸಿದ್ದು 20 ರನ್ ಆದರೂ 5ನೇ ವಿಕೆಟ್​ಗೆ ಅಯ್ಯರ್ ಜೊತೆಗೂಡಿ 57 ರನ್ ಸೇರಿಸಿದರು. ಈ ಮೂವರು ಸಾಯಿ ಕಿಶೋರ್ ಬೌಲಿಂಗ್​ನಲ್ಲಿ ಔಟಾದರು. ಸತತ ವಿಕೆಟ್​ಗಳ ನಡುವೆಯೂ ಕ್ರೀಸ್​​ ಕಚ್ಚಿ ನಿಂತಿದ್ದ ಶ್ರೇಯಸ್​ಗೆ ಶಶಾಂಕ್ ಸಿಂಗ್​ ಅದ್ಭುತ ಸಾಥ್ ನೀಡಿದರು. 

ಇದೇ ಮೊದಲ ಬಾರಿಗೆ ಪಂಜಾಬ್ ನಾಯಕನಾಗಿ ಕಣಕ್ಕೆ ಇಳಿದ ಅಯ್ಯರ್​ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದರು. ಬೌಂಡರಿಗಳಿಗಿಂತ ಸಿಕ್ಸರ್​​ಗಳನ್ನೇ ಹೆಚ್ಚು ಸಿಡಿಸಿ ಜಿಟಿ ಬೌಲರ್​ಗಳನ್ನು ಸುಸ್ತುಗೊಳಿಸಿದರು. ಮತ್ತೊಂದೆಡೆ ತಾನೇನು ಕಡಿಮೆ ಇಲ್ಲ ಎನ್ನುವಂತೆ ಶಶಾಂಕ್ ಕೂಡ ಬೌಲರ್​​ಗಳ ವಿರುದ್ಧ ಪರಾಕ್ರಮ ಮೆರೆದರು. ಅದರಲ್ಲೂ ಇನ್ನಿಂಗ್ಸ್​​ನ ಕೊನೆಯ ಓವರ್​​ನಲ್ಲಿ 5 ಬೌಂಡರಿ ಸಹಿತ 23 ರನ್ ಪೇರಿಸಿದರು. ಅಂತಿಮ ಓವರ್​​ನಲ್ಲಿ ಸ್ಟ್ರೈಕ್​ ಸಿಗದ ಹಿನ್ನೆಲೆ ಅಜೇಯರಾಗಿ ಉಳಿದರೂ 3 ರನ್ನಿಂದ ತಮ್ಮ ಚೊಚ್ಚಲ ಐಪಿಎಲ್ ಶತಕ ಕಳೆದುಕೊಂಡರು. ಅಯ್ಯರ್ 42 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್ ಸಹಿತ 97 ರನ್ ಗಳಿಸಿದರೆ, ಶಶಾಂಕ್ 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 44 ರನ್ ಚಚ್ಚಿದರು. ಜಿಟಿ ಪರ ಸಾಯಿ ಕಿಶೋರ್ 3 ವಿಕೆಟ್ ಕಿತ್ತು ಮಿಂಚಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner