IPL 2024: ಕೆಕೆಆರ್ ತಂಡಕ್ಕೆ ನಾಯಕನಾಗಿ ಮರಳಿದ ಶ್ರೇಯಸ್ ಅಯ್ಯರ್; ನಿತೀಶ್ ರಾಣಾ ಉಪನಾಯಕ
Shreyas Iyer: ಐಪಿಎಲ್ 2024ರ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಕುರಿತು ನೈಟ್ ರೈಡರ್ಸ್ ಫ್ರಾಂಚೈಸಿ ಖಚಿತಪಡಿಸಿದೆ.
ಗಾಯದಿಂದಾಗಿ 2023ರ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ (Shreyas Iyer), 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೆಕೆಆರ್ ತಂಡದ ನಾಯಕನಾಗಿ ಮರಳಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ಡಿಸೆಂಬರ್ 14ರ ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಟ್ವಿಟರ್ ಮೂಲಕ ಖಚಿತಪಡಿಸಿದೆ.
ಗಾಯದ ಕಾರಣದಿಂದಾಗಿ ಸ್ಟಾರ್ ಬ್ಯಾಟ್ 2023ರ ಆವೃತ್ತಿಯಲ್ಲಿ ಆಡಿರಲಿಲ್ಲ. ಹೀಗಾಗಿ ನೈಟ್ ರೈಡರ್ಸ್ ತಂಡವನ್ನು ನಿತೀಶ್ ರಾಣಾ ನಾಯಕನಾಗಿ ಮುನ್ನಡೆಸಿದ್ದರು. ಸದ್ಯ 2023ರ ಏಷ್ಯಾಕಪ್ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಮೈದಾನದಲ್ಲಿಳಿದಿರುವ ಅಯ್ಯರ್, ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ | Noor Ahmed: ಐಪಿಎಲ್ಗಿಂತ ಪಿಎಸ್ಎಲ್ನಲ್ಲಿ ದುಬಾರಿ ಮೊತ್ತ ಪಡೆದ ಗುಜರಾತ್ ಟೈಟಾನ್ಸ್ ಬೌಲರ್
“ಗಾಯದ ಕಾರಣದಿಂದಾಗಿ ಶ್ರೇಯಸ್ ಅವರು 2023ರ ಐಪಿಎಲ್ ಪಂದ್ಯಾವಳಿಯನ್ನು ಕಳೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಅವರು ಮತ್ತೆ ನಾಯಕನಾಗಿ ಕೆಕೆಆರ್ ತಂಡದ ಚುಕ್ಕಾಣಿ ಹಿಡಿದಿರುವುದು ನಮಗೆ ಖುಷಿ ತಂದಿದೆ. ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರಮಿಸಿದ ರೀತಿ ಮತ್ತು ಆ ಬಳಿಕ ಕಂಡುಕೊಂಡ ಫಾರ್ಮ್ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ” ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.
“ಕಳೆದ ಋತುವಿನಲ್ಲಿ ನಿತೀಶ್ ರಾಣಾ ಅವರು ನಾಯಕನಾಗಿ ಮುನ್ನಡೆಸಲು ಒಪ್ಪಿಕೊಂಡರು. ತಂಡಕ್ಕಾಗಿ ಉತ್ತಮ ಕೆಲಸ ಮಾಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಉಪನಾಯಕನಾಗಿ ನಿತೀಶ್ ಅವರು ಈ ಬಾರಿಯೂ ಮುಂದುವರೆಯುತ್ತಿರುವುದರಲ್ಲಿ ಸಂದೇಹವಿಲ್ಲ,” ಎಂದು ಅವರು ಹೇಳಿದ್ದಾರೆ.
ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ಮತ್ತೆ ತಂಡಕ್ಕೆ ಮರಳುತ್ತಿರುವ ಬಗ್ಗೆ ಕಳೆದ ತಿಂಗಳು ಫ್ರಾಂಚೈಸಿ ಘೋಷಿಸಿತ್ತು. 2012 ಮತ್ತು 2014ರ ಐಪಿಎಲ್ ಆವೃತ್ತಿಗಳಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಗಂಭೀರ್ ಮುನ್ನಡೆಸಿದ್ದರು. ಆದರೆ, 2018ರ ಋತುವಿಗೂ ಮುನ್ನ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಸದ್ಯ ಹೊಸ ಆವೃತ್ತಿಯಲ್ಲಿ ತಂಡವು ಕೆಲವೊಂದು ಹೊಸತನಗಳೊಂದಿಗೆ ಕಣಕ್ಕಿಳಿಯಲಿದೆ.
ಇದನ್ನೂ ಓದಿ | ಐಪಿಎಲ್ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಮೇಲೆ ಕಣ್ಣಿಟ್ಟಿರುವ ತಂಡಗಳನ್ನು ಹೆಸರಿಸಿದ ಸಂಜಯ್ ಮಂಜ್ರೇಕರ್
2024ರ ಆವೃತ್ತಿಗೂ ಮುನ್ನ ತಂಡ ಉಳಿಸಿಕೊಂಡಿರುವ ಆಟಗಾರರು
ಶ್ರೇಯಸ್ ಅಯ್ಯರ್ (ನಾಯಕ), ಆಂಡ್ರೆ ರಸೆಲ್, ಅನುಕುಲ್ ರಾಯ್, ಹರ್ಷಿತ್ ರಾಣಾ, ಜೇಸನ್ ರಾಯ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್, ಸುನಿಲ್ ನರೈನ್, ಸುಯಶ್ ಶರ್ಮಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.
ತಂಡದಿಂದ ಬಿಡುಗಡೆಗೊಂಡ ಆಟಗಾರರು
ಆರ್ಯ ದೇಸಾಯಿ, ಡೇವಿಡ್ ವೈಸ್, ಜಾನ್ಸನ್ ಚಾರ್ಲ್ಸ್, ಕುಲ್ವಂತ್ ಖೆಜ್ರೋಲಿಯಾ, ಲಿಟ್ಟನ್ ದಾಸ್, ಲಾಕಿ ಫರ್ಗುಸನ್, ಮಂದೀಪ್ ಸಿಂಗ್, ಎನ್ ಜಗದೀಸನ್, ಶಕೀಬ್ ಅಲ್ ಹಸನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಉಮೇಶ್ ಯಾದವ್.