BCCI Awards: ಶುಭ್ಮನ್ ಗಿಲ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ; ರವಿಶಾಸ್ತ್ರಿಗೆ ಬಿಸಿಸಿಐ ವಿಶೇಷ ಗೌರವ
BCCI Awards: ಕ್ರಿಕೆಟಿಗ ಶುಬ್ಮನ್ ಗಿಲ್ ಬಿಸಿಸಿಐ ನೀಡುವ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಜಿ ಕೋಚ್ ರವಿಶಾಸ್ತ್ರಿ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವದೆಹಲಿ: ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ (Shubman Gill) ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲು ಬಿಸಿಸಿಐ ನಿರ್ಧರಿಸಿದೆ. ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ಭಾರತದ ಉನ್ನತ ಕ್ರಿಕೆಟ್ ಮಂಡಳಿ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಲಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಹೈದರಾಬಾದ್‌ನಲ್ಲಿ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ತಂಡದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
2023ರಲ್ಲಿ ಭಾರತದ ಆರಂಭಿಕ ಆಟಗಾರ ಗಿಲ್ ಅಮೋಘ ಪ್ರದರ್ಶನ ನೀಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. 50 ಓವರ್‌ಗಳ ಸ್ವರೂಪದಲ್ಲಿ ಐದು ಶತಕಗಳನ್ನು ಗಳಿಸಿರುವ ಅವರು, ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲೂ ಆಡಿದ್ದರು. ಈ ನಡುವೆ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬಾಬರ್ ಅಜಾಮ್ ಅವರನ್ನು ಕೆಳಗಿಳಿಸಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ | 2023ರ ಐಸಿಸಿ ವರ್ಷದ ಟಿ20 ತಂಡ ಪ್ರಕಟ; ಸೂರ್ಯಕುಮಾರ್ ಯಾದವ್ ನಾಯಕ; ಭಾರತದ ನಾಲ್ವರಿಗೆ ಸ್ಥಾನ
ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು. 2019ರ ನಂತರ ಮೊದಲ ಬಾರಿಗೆ ಬಿಸಿಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದು, ಗಿಲ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ವರದಿಗಳು ಹೇಳಿವೆ.
ರವಿಶಾಸ್ತ್ರಿಗೆ ವಿಶೇಷ ಗೌರವ
ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. "ಶಾಸ್ತ್ರಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಗಿಲ್ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಲಾಗುವುದು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಮಾಜಿ ಆಲ್‌ರೌಂಡರ್ ಟೀಮ್ ಇಂಡಿಯಾ ಪರ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದರು. ಶಾಸ್ತ್ರಿ ಅವರನ್ನು 2014ರಲ್ಲಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ನೇಮಿಸಲಾಯಿತು. ಶಾಸ್ತ್ರಿ ಭಾರತದ ಮುಖ್ಯ ಕೋಚ್ ಆಗಿದ್ದಾಗ, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ ಪ್ರವೇಶಿಸಿತು. 2021ರ ಟಿ20 ವಿಶ್ವಕಪ್‌ವರೆಗೆ ಶಾಸ್ತ್ರಿ ಭಾರತದ ಮುಖ್ಯ ಕೋಚ್ ಆಗಿದ್ದರು. ಆ ಬಳಿಕ ಅವರ ಸ್ಥಾನಕ್ಕೆ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ನೇಮಿಸಲಾಯಿತು.
ಇದನ್ನೂ ಓದಿ | ಬಾಲರಾಮ ಬಂದ; ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆ ಬೆನ್ನಲ್ಲೇ ಸೆಹ್ವಾಗ್ ಭಾವುಕ ಪೋಸ್ಟ್
ಶಾಸ್ತ್ರಿ ಅವರ ಅವಧಿಯಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆಸ್ಟ್ರೇಲಿಯಾದಲ್ಲಿ ಸತತವಾಗಿ ಟೆಸ್ಟ್ ಸರಣಿ ಗೆದ್ದ ಭಾರತ ತಂಡಕ್ಕೆ ಶಾಸ್ತ್ರಿ ತರಬೇತುದಾರರಾಗಿದ್ದರು. ಶಾಸ್ತ್ರಿ ನೇತೃತ್ವದ ಟೀಮ್ ಇಂಡಿಯಾ 2021ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಸ್ಪರ್ಧಿಸಿತು. ಆದರೆ, ಪಂದ್ಯದಲ್ಲಿ ಭಾರತ ಸೋಲೊಪ್ಪಿತು.