ಕನ್ನಡ ಸುದ್ದಿ  /  ಕ್ರಿಕೆಟ್  /  ನಾಯಕತ್ವಕ್ಕೆ ಸೂರ್ಯಕುಮಾರ್-ಹಾರ್ದಿಕ್ ನಕಾರ; ಜಿಂಬಾಬ್ವೆ ಪ್ರವಾಸಕ್ಕೆ ಶುಭ್ಮನ್ ಗಿಲ್ ಭಾರತದ ನಾಯಕ ಸಾಧ್ಯತೆ; ಹೊಸ ಮುಖಗಳಿಗೆ ಮಣೆ

ನಾಯಕತ್ವಕ್ಕೆ ಸೂರ್ಯಕುಮಾರ್-ಹಾರ್ದಿಕ್ ನಕಾರ; ಜಿಂಬಾಬ್ವೆ ಪ್ರವಾಸಕ್ಕೆ ಶುಭ್ಮನ್ ಗಿಲ್ ಭಾರತದ ನಾಯಕ ಸಾಧ್ಯತೆ; ಹೊಸ ಮುಖಗಳಿಗೆ ಮಣೆ

ಜಿಂಬಾಬ್ವೆಯಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಶುಭ್ಮನ್ ಗಿಲ್ ಮುಂಚೂಣಿಯಲ್ಲಿದ್ದಾರೆ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ. ಹೀಗಾಗಿ ಗಿಲ್ ಸಾರಥ್ಯದಲ್ಲಿ ಯುವ ತಂಡ ಜಿಂಬಾಬ್ವೆಗೆ ಹಾರುವ ಸಾಧ್ಯತೆ ಇದೆ.

ಜಿಂಬಾಬ್ವೆ ಪ್ರವಾಸಕ್ಕೆ ಶುಭ್ಮನ್ ಗಿಲ್ ಭಾರತದ ನಾಯಕ ಸಾಧ್ಯತೆ; ಹೊಸ ಮುಖಗಳಿಗೆ ಮಣೆ
ಜಿಂಬಾಬ್ವೆ ಪ್ರವಾಸಕ್ಕೆ ಶುಭ್ಮನ್ ಗಿಲ್ ಭಾರತದ ನಾಯಕ ಸಾಧ್ಯತೆ; ಹೊಸ ಮುಖಗಳಿಗೆ ಮಣೆ

ಟಿ20 ವಿಶ್ವಕಪ್‌ ಪಂದ್ಯಾವಳಿಯು ಜೂನ್‌ 29ರಂದು ಅಂತ್ಯಗೊಳ್ಳಲಿದೆ. ಅದಾದ ಬಳಿಕ ಭಾರತ ತಂಡವು ಮುಂದಿನ ತಿಂಗಳು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜುಲೈ 6ರಿಂದ ಹರಾರೆಯಲ್ಲಿ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಸದ್ಯ ಟೀಮ್‌ ಇಂಡಿಯಾ ವೆಸ್ಟ್‌ ಇಂಡೀಸ್‌ನಲ್ಲಿ ಕರ್ತವ್ಯದಲ್ಲಿದೆ. ಹೀಗಾಗಿ ಭಾರತ ತಂಡವನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಈ ಬಾರಿ ಜಿಂಬಾಬ್ವೆ ಪ್ರವಾಸದಲ್ಲಿ (India tour of Zimbabwe) ಭಾರತ ತಂಡದ ನಾಯಕತ್ವ ಶುಭ್ಮನ್ ಗಿಲ್‌ಗೆ ಸಿಗುವ ಸಾಧ್ಯತೆ ಇದೆ. ಪ್ರಸ್ತುತ ಟಿ20 ವಿಶ್ವಕಪ್ ಭಾರತದ ತಂಡದಲ್ಲಿ ಮೀಸಲು ಆಟಗಾರನಾಗಿ ಗಿಲ್‌ ಆಯ್ಕೆಯಾಗಿದ್ದಾರೆ. ಆದರೆ ಆಡುವ ಅವಕಾಶ ಅವರಿಗೆ ಸಿಕ್ಕಿಲ್ಲ. ಹೀಗಾಗಿ ರಾಷ್ಟ್ರೀಯ ತಂಡದೊಂದಿಗೆ ತಮ್ಮ ಮೊದಲ ನಾಯಕತ್ವಕ್ಕೆ ಗಿಲ್ ಸಜ್ಜಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರು ಜಿಂಬಾಬ್ವೆ ಪ್ರವಾಸದ ಭಾಗವಾಗಲು ನಿರಾಕರಿಸಿದ್ದಾರೆ. ಇವರಿಬ್ಬರ ನಾಯಕತ್ವದಲ್ಲಿ ತಂಡವನ್ನು ಕಳುಹಿಸಲು ಬಿಸಿಸಿಐ ಯೋಜಿಸಿತ್ತು. ಆದರೆ, ವಿಶ್ವಕಪ್‌ ಬಳಿಕ ಜಿಂಬಾಬ್ವೆ ಪ್ರಯಾಣಿಸಲು ಸೂರ್ಯ ಹಾಗೂ ಪಾಂಡ್ಯ ಒಪ್ಪದ ಕಾರಣದಿಂದಾಗಿ ಗಿಲ್ ಅವರನ್ನು ನಾಯಕತ್ವ ಸ್ಥಾನಕ್ಕೆ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಿಶ್ವಕಪ್‌ ಬಳಿಕ ಹಿರಿಯ ಹಾಗೂ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಾರ್ದಿಕ್‌ ಹಾಗೂ ಸೂರ್ಯಕುಮಾರ್‌ ಕೂಡಾ ವಿರಾಮ ತೆಗೆದುಕೊಳ್ಳಲಿದ್ದಾರೆ. ಅತ್ತ ಬಿಸಿಸಿಐ ಆಯ್ಕೆ ಸಮಿತಿಯು ಈಗಾಗಲೇ ಜಿಂಬಾಬ್ವೆ ಪ್ರವಾಸಕ್ಕೆ ತಂಡವನ್ನು ಅಂತಿಮಗೊಳಿಸಿದೆ. ಆದರೆ ಅಧಿಕತವಾಗಿ ಪ್ರಕಟಿಸಿಲ್ಲ.

ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಗಿಲ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದರು. ಯುವ ಸ್ಫೋಟಕ ಆಟಗಾರ ಮುಂದಿನ ವರ್ಷಗಳಲ್ಲಿ ಭಾರತ ತಂಡದ ನಾಯಕನಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಕಳೆದ ಒಂದು ವರ್ಷದಿಂದ ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. 2023ರ ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಭಾರತ ತಂಡವನ್ನು ಮುನ್ನಡೆಸಿದ್ದರು. ಈ ನಡುವೆ ಗಿಲ್ ಅವರಿಗೆ ನಾಯಕತ್ವದ ಅನುಭವ ಹೆಚ್ಚಿಸುವ ಪ್ರಯತ್ನಕ್ಕೆ ಬಿಸಿಸಿಐ ಕೈಹಾಕಿದೆ.

ನಾಯಕತ್ವದ ಅನುಭವ

ಐಪಿಎಲ್ 2024ರ ಆವೃತ್ತಿಗೂ ಮೊದಲು, ಗಿಲ್ ಎಂದಿಗೂ ವೃತ್ತಿಪರ ತಂಡವನ್ನು ಪೂರ್ಣಾವಧಿಗೆ ಮುನ್ನಡೆಸಿರಲಿಲ್ಲ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ತಂಡವನ್ನು ಎರಡು ಬಾರಿ ಮುನ್ನಡೆಸಿದ್ದರು. ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ಮರಳಿದ ನಂತರ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ನೇಮಕಗೊಂಡರು. ಆದರೆ ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತು. ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

8 ಆಟಗಾರರು ಟೀಮ್‌ ಇಂಡಿಯಾ ಪ್ರವೇಶಿಸಲು ಸಜ್ಜು

ಶುಬ್ಮನ್ ಗಿಲ್ ನೇತೃತ್ವದಲ್ಲಿ ಯುವ ಹಾಗೂ ಬಲಿಷ್ಠ ತಂಡವನ್ನು ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡುವುದು ಬಿಸಿಸಿಐ ತಂತ್ರ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಮತ್ತು ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿರುವ ವಿಶ್ವಕಪ್‌ ತಂಡದ ಸದಸ್ಯರನ್ನು ಸೇರಿಸಿ ಅಂತಿಮ ತಂಡ ರಚಿಸಲು ಬಿಸಿಸಿಐ ಸಜ್ಜಾಗಿದೆ. ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಖಚಿತ ಸದಸ್ಯರಾಗಿದ್ದಾರೆ. ಈ ನಡುವೆ ಕೆಕೆಆರ್ ವೇಗಿ ಹರ್ಷಿತ್ ರಾಣಾ, ರಾಜಸ್ಥಾನ ರಾಯಲ್ಸ್‌ ತಂಡದ ರಿಯಾನ್ ಪರಾಗ್, ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಡೈನಾಮಿಕ್ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ನಿತೀಶ್ ರೆಡ್ಡಿ, ಸಿಎಸ್‌ಕೆ ತಂಡದ ತುಷಾರ್ ದೇಶಪಾಂಡೆ ಒಟ್ಟು ಎಂಟು ಹೊಸ ಮುಖಗಳು ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಈ ತಂಡದ ತರಬೇತುದಾರರಾಗಿ ಜಿಂಬಾಬ್ವೆಗೆ ಹಾರಲಿದ್ದಾರೆ. ಮುಂದಿನ ಮುಖ್ಯ ಕೋಚ್ ಆಗಗಿ ಗೌತಮ್ ಗಂಭೀರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಶ್ರೀಲಂಕಾ ಪ್ರವಾಸದಿಂದ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.‌