ಶುಭ್ಮನ್ ಗಿಲ್ ಶತಕ, ಕೊಹ್ಲಿ-ಅಯ್ಯರ್ ಅರ್ಧಶತಕ; ಇಂಗ್ಲೆಂಡ್ ವಿರುದ್ಧ 356 ರನ್ ಗಳಿಸಿ ದಾಖಲೆ ಬರೆದ ಭಾರತ
India vs England 3rd ODI: ನರೇಂದ್ರ ಮೋದಿ ಮೈದಾನದಲ್ಲಿ ಜರುಗುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ, ಇಂಗ್ಲೆಂಡ್ 356 ರನ್ಗಳ ಬೃಹತ್ ಗುರಿ ಪೇರಿಸಿ ದಾಖಲೆ ಬರೆದಿದೆ.

ಗೆಲುವಿನ ನಾಗಾಲೋಟ ಮುಂದುವರೆಸುವ ಇರಾದೆಯಲ್ಲಿರುವ ಟೀಮ್ ಇಂಡಿಯಾ (Team India), ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ಮೊದಲ ಎರಡು ಪಂದ್ಯ ಕ್ಲೀನ್ ಸ್ವೀಪ್ ಗುರಿ ಹೊಂದಿರುವ ಭಾರತ ತಂಡವು ಶುಭ್ಮನ್ ಗಿಲ್ (Shubman Gill) ಅವರ ಮನಮೋಹಕ ಶತಕ ಮತ್ತು ವಿರಾಟ್ ಕೊಹ್ಲಿ (Virat Kohli), ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕಗಳ ಸಹಾಯದಿಂದ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನದಲ್ಲಿ ತನ್ನ ನಿಗದಿತ 50 ಓವರ್ಗಳಲ್ಲಿ 350 ರನ್ ಪೇರಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಇನ್ನಿಂಗ್ಸ್ನ 2ನೇ ಓವರ್ನ ಮೊದಲ ಎಸೆತದಲ್ಲೇ ನಾಯಕ ರೋಹಿತ್ ಶರ್ಮಾ ಅವರನ್ನು ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಲಯಕ್ಕೆ ಮರಳಿದ ಖುಷಿಯಲ್ಲಿದ್ದಾಗಲೇ 1 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ ಲಯ ಕಂಡುಕೊಂಡು ಅರ್ಧಶತಕಕ್ಕೆ ಸುಸ್ತಾದರು.
ಶುಭ್ಮನ್ ಗಿಲ್ ಶತಕ, ಕೊಹ್ಲಿ-ಅಯ್ಯರ್ ಅರ್ಧಶತಕ
ಆದರೂ ವಿರಾಟ್ ಆಟ ಅದ್ಭುತವಾಗಿತ್ತು. ಎದುರಿಸಿದ ಮೊದಲ ಎಸೆತದಿಂದಲೇ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದರು. ಅದರಂತೆ ಶುಭ್ಮನ್ ಜೊತೆಗೆ 2ನೇ ವಿಕೆಟ್ಗೆ 116 ರನ್ಗಳ ಪಾಲುದಾರಿಕೆ ಒದಗಿಸಿದ ಕೊಹ್ಲಿ, 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 52 ಗಳಿಸಿ ಆದಿಲ್ ರಶೀದ್ ಬೌಲಿಂಗ್ನಲ್ಲಿ ಔಟಾದರು. ಮತ್ತೊಂದೆಡೆ ಗಿಲ್ ಅಬ್ಬರ ಮುಂದುವರೆಸಿ ಮನಮೋಹಕ ಶತಕವನ್ನೂ ಪೂರೈಸಿದರು. ಕಳೆದ 2 ಪಂದ್ಯಗಳಲ್ಲಿ ಫಿಫ್ಟಿ ಬಾರಿಸಿದ್ದ ಗಿಲ್, ಮೂರನೇ ಪಂದ್ಯದಲ್ಲಿ ಮೂರಂಕಿ ದಾಟಿದರು.
ಇಂಗ್ಲೆಂಡ್ ಬೌಲರ್ಗಳ ಎದುರು ಹೋರಾಟ ನಡೆಸಿದ ಯುವ ಆಟಗಾರ 102 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ 112 ರನ್ ಬಾರಿಸಿ ಆದಿಲ್ ರಶೀದ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಜೊತೆಗೆ ಶ್ರೇಯಸ್ ಅಯ್ಯರ್ ಅವರೊಂದಿಗೆ 4ನೇ ವಿಕೆಟ್ಗೆ 104 ರನ್ ಪಾಲುದಾರಿಕೆಯನ್ನೂ ಒದಗಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ನಂತರ ಬಿರುಸಿನ ಬ್ಯಾಟಿಂಗ್ ಮಾಡಿದ ಅಯ್ಯರ್, 78 ರನ್ಗಳ ಅಮೋಘ ಕಾಣಿಕೆ ನೀಡಿದರು. 64 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 78 ರನ್ ಬಾರಿಸಿ ಆದಿಲ್ ರಶೀದ್ ಬೌಲಿಂಗ್ನಲ್ಲೇ ನಿರ್ಗಮಿಸಿದರು.
ಕಳೆದ ಎರಡು ಪಂದ್ಯಗಳಲ್ಲಿ ಹಿಂಬಡ್ತಿ ಪಡೆದು ವೈಫಲ್ಯ ಅನುಭವಿಸಿದ್ದ ಕೆಎಲ್ ರಾಹುಲ್ ಅಂತಿಮ ಪಂದ್ಯದಲ್ಲಿ ತನ್ನ ಸ್ಥಾನಕ್ಕೆ ಮರಳಿದರು. 5ನೇ ಕ್ರಮಾಂಕದಲ್ಲಿ ಅಬ್ಬರಿಸಿದ ಕೆಎಲ್, 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 40 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಹಾರ್ದಿಕ್ ಪಾಂಡ್ಯ 17, ಅಕ್ಷರ್ ಪಟೇಲ್ 13, ವಾಷಿಂಗ್ಟನ್ ಸುಂದರ್ 14, ಹರ್ಷಿತ್ ರಾಣಾ 13, ಅರ್ಷದೀಪ್ 2 ರನ್ಗಳ ಕಾಣಿಕೆ ನೀಡಿದರು. ಪರಿಣಾಮ 50 ಓವರ್ಗಳಲ್ಲಿ ಭಾರತ 350ಕ್ಕೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಆದಿಲ್ ರಶೀದ್ 4, ಮಾರ್ಕ್ ವುಡ್ 2 ವಿಕೆಟ್ ಪಡೆದು ಮಿಂಚಿದರು.
ದಾಖಲೆ ಬರೆದ ಭಾರತ ತಂಡ
356 ರನ್ ಕಲೆ ಹಾಕಿದ ಭಾರತ ತಂಡ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ 2ನೇ ಗರಿಷ್ಠ ಸ್ಕೋರ್ ದಾಖಲಿಸಿದ ಹಿರಿಮೆಗೆ ಪಾತ್ರವಾಯಿತು. ಈ ಮೈದಾನದಲ್ಲಿ ದಾಖಲಾದ ಟಾಪ್-5 ಗರಿಷ್ಠ ಸ್ಕೋರ್.
365/2 - ಸೌತ್ ಆಫ್ರಿಕಾ vs ಭಾರತ ತಂಡ, 2010
356/10 - ಭಾರತ vs ಇಂಗ್ಲೆಂಡ್, 2025 *
325/5 - ಭಾರತ vs ವೆಸ್ಟ್ ಇಂಡೀಸ್, 2002
324/4 - ವೆಸ್ಟ್ ಇಂಡೀಸ್ vs ಭಾರತ, 2002
319/7 - ಪಾಕಿಸ್ತಾನ vs ಭಾರತ, 2007
