Shubman Gill: ಶುಭ್ಮನ್ ಗಿಲ್​ ಆಕರ್ಷಕ ಶತಕ; ತಂದೆ ಲಖ್ವಿಂದರ್ ಸಿಂಗ್ ವಿಶೇಷ ಸಂಭ್ರಮ, ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  Shubman Gill: ಶುಭ್ಮನ್ ಗಿಲ್​ ಆಕರ್ಷಕ ಶತಕ; ತಂದೆ ಲಖ್ವಿಂದರ್ ಸಿಂಗ್ ವಿಶೇಷ ಸಂಭ್ರಮ, ವಿಡಿಯೋ ವೈರಲ್

Shubman Gill: ಶುಭ್ಮನ್ ಗಿಲ್​ ಆಕರ್ಷಕ ಶತಕ; ತಂದೆ ಲಖ್ವಿಂದರ್ ಸಿಂಗ್ ವಿಶೇಷ ಸಂಭ್ರಮ, ವಿಡಿಯೋ ವೈರಲ್

Shubman Gill: ಇಂಗ್ಲೆಂಡ್​ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಶುಭ್ಮನ್ ಗಿಲ್ ಸಿಡಿಸಿದ ಶತಕದ ಸಂಭ್ರಮವನ್ನು ಅವರ ತಂದೆ ಲಖ್ವಿಂದರ್ ಸಿಂಗ್ ಅವರು ವಿಶೇಷವಾಗಿ ಸಂಭ್ರಮಿಸಿದರು. ಅದರ ವಿಡಿಯೋ ವೈರಲ್ ಆಗುತ್ತಿದೆ.

ಶುಭ್ಮನ್ ಗಿಲ್​ ಆಕರ್ಷಕ ಶತಕ; ತಂದೆ ಲಖ್ವಿಂದರ್ ಸಿಂಗ್ ವಿಶೇಷ ಸಂಭ್ರಮ
ಶುಭ್ಮನ್ ಗಿಲ್​ ಆಕರ್ಷಕ ಶತಕ; ತಂದೆ ಲಖ್ವಿಂದರ್ ಸಿಂಗ್ ವಿಶೇಷ ಸಂಭ್ರಮ

ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ನ 2ನೇ ದಿನದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಆಟಗಾರ ಶುಭ್ಮನ್ ಗಿಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ 24ರ ಹರೆಯದ ಬಲಗೈ ಆಟಗಾರ 150 ಎಸೆತಗಳಲ್ಲಿ 110 ರನ್ ಗಳಿಸಿದ್ದು ಮುನ್ನಡೆಗೆ ಕಾರಣರಾದರು. ಅವರ ಸೆಂಚುರಿ ಇನ್ನಿಂಗ್ಸ್​​​ನಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್​​​ಗಳಿವೆ.

ಶೋಯೆಬ್ ಬಶೀರ್ ಎಸೆದ 59ನೇ ಓವರ್‌ನ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಗಿಲ್ ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಶತಕ ಪೂರ್ಣಗೊಳಿಸಿದರು. ಮೂರಂಕಿ ದಾಟಿದ ಬೆನ್ನಲ್ಲೇ ಗಿಲ್, ಸಂಭ್ರಮಿಸಿದರು. ಈ ಬಾರಿ ಗಿಲ್ ಸೆಂಚುರಿಯನ್ನು ವ್ಯಕ್ತಿಯೊಬ್ಬರು ವಿಶೇಷವಾಗಿ ಸಂಭ್ರಮಿಸಿದರು. ಶುಭ್ಮನ್ ಸೆಲೆಬ್ರೇಷನ್​ಗಿಂತ ಅವರ ತಂದೆಯ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆಯಿತು.

ಶುಭ್ಮನ್ ಅವರ ತಂದೆ ಲಖ್ವಿಂದರ್ ಸಿಂಗ್ ಅವರು ಐದನೇ ಟೆಸ್ಟ್​​ ಪಂದ್ಯದಲ್ಲಿ ಮಗನ ಆಟವನ್ನು ಕಣ್ತುಂಬಿಕೊಳ್ಳಲು ಸಾಕ್ಷಿಯಾಗಿದ್ದರು. ಗಿಲ್​​ಗೆ ಮೊದಲ ತರಬೇತುದಾರರಾಗಿದ್ದ ತಂದೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ 2ನೇ ಶತಕ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 4ನೇ ಶತಕ ಪೂರ್ಣಗೊಳಿಸಿದ ತನ್ನ ಮಗನ ಸಾಧನೆಗೆ ತುಂಬಾ ಖುಷಿಪಟ್ಟರು. ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

2ನೇ ದಿನದ ಊಟದ ವೇಳೆಗೆ ಶುಭ್ಮನ್ ಗಿಲ್ ಅಜೇಯ 101 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಗಿಲ್ ಮಾತ್ರವಲ್ಲ, ರೋಹಿತ್ ಶರ್ಮಾ ಕೂಡ 102 ರನ್ ಗಳಿಸಿದ್ದರು. 46ನೇ ಓವರ್‌ನ 3ನೇ ಎಸೆತದಲ್ಲಿ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ರೋಹಿತ್ ಬೌಂಡರಿ ಸಿಡಿಸಿದಾಗ ಇಬ್ಬರೂ 100 ರನ್ನುಗಳ ಜೊತೆಯಾಟ ಪೂರ್ಣಗೊಳಿಸಿದರು. 57ನೇ ಓವರ್​​ನಲ್ಲಿ ರೋಹಿತ್ ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದ ವೇಳೆ ಇಬ್ಬರೂ ಬ್ಯಾಟರ್‌ಗಳು 150 ರನ್‌ಗಳ ಪಾಲುದಾರಿಕೆ ನೀಡಿದರು.

ಅದೇ ಓವರ್‌ ಕೊನೆ ಎಸೆತದಲ್ಲಿ ಸಿಂಗಲ್ ಗಳಿಸಿ ರೋಹಿತ್ ತನ್ನ ಶತಕ ಪೂರೈಸಿದರು. ತನ್ನ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಗಿಲ್ ತಮ್ಮ ಶತಕವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ವಿಫಲರಾದರು. ಜೇಮ್ಸ್ ಆಂಡರ್ಸನ್ ಎಸೆದ 63ನೇ ಓವರ್‌ನ 2ನೇ ಎಸೆತದಲ್ಲಿ ಗಿಲ್​ ವಿಕೆಟ್ ಒಪ್ಪಿಸಿ ಹೊರ ನಡೆದರು. ಆ್ಯಂಡರ್ಸನ್ ಈ ವಿಕೆಟ್​ನೊಂದಿಗೆ ತನ್ನ ವಿಕೆಟ್​ ಸಂಖ್ಯೆ 699ಕ್ಕೆ ಏರಿಸಿಕೊಂಡರು.

ಟೀಂ ಇಂಡಿಯಾ ಆಡುವ 11ರ ಬಳಗ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್ ಆಡುವ 11ರ ಬಳಗ

ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.

Whats_app_banner