50ನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 7ನೇ ಶತಕ; ನರೇಂದ್ರ ಮೋದಿ ಮೈದಾನದಲ್ಲಿ ಹಲವು ದಾಖಲೆ ಬರೆದ ಪಂಜಾಬ್ ಪುತ್ತರ್
ಕನ್ನಡ ಸುದ್ದಿ  /  ಕ್ರಿಕೆಟ್  /  50ನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 7ನೇ ಶತಕ; ನರೇಂದ್ರ ಮೋದಿ ಮೈದಾನದಲ್ಲಿ ಹಲವು ದಾಖಲೆ ಬರೆದ ಪಂಜಾಬ್ ಪುತ್ತರ್

50ನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 7ನೇ ಶತಕ; ನರೇಂದ್ರ ಮೋದಿ ಮೈದಾನದಲ್ಲಿ ಹಲವು ದಾಖಲೆ ಬರೆದ ಪಂಜಾಬ್ ಪುತ್ತರ್

Shubman Gill: ನರೇದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಭರ್ಜರಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

50ನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 7ನೇ ಶತಕ; ನರೇಂದ್ರ ಮೋದಿ ಮೈದಾನದಲ್ಲಿ ದಾಖಲೆ ಬರೆದ ಪಂಜಾಬ್ ಪುತ್ತರ್
50ನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ 7ನೇ ಶತಕ; ನರೇಂದ್ರ ಮೋದಿ ಮೈದಾನದಲ್ಲಿ ದಾಖಲೆ ಬರೆದ ಪಂಜಾಬ್ ಪುತ್ತರ್ (Surjeet Yadav)

ಅಮೋಘ ಲಯದಲ್ಲಿರುವ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ತನ್ನ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ದಾಖಲೆಯ ಏಳನೇ ಶತಕ ಪೂರೈಸಿದ್ದಾರೆ. ಜೊತೆಗೆ ಹಲವು ದಾಖಲೆಗಳನ್ನೂ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ​ ಸೆಂಚುರಿ ಸಿಡಿಸಿದ ಗಿಲ್, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿದ್ದ ಗಿಲ್, ಇದೀಗ ಮೂರಂಕಿ ದಾಟಿದ್ದಾರೆ. ಮೊದಲ ಏಕದಿನದಲ್ಲಿ 87, ಎರಡನೇ ಏಕದಿನದಲ್ಲಿ 60 ರನ್ ಚಚ್ಚಿದ್ದ ಶುಭ್ಮನ್, ಮೂರನೇ ಪಂದ್ಯದಲ್ಲಿ 102 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ 112 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ 2 ಮತ್ತು 3ನೇ ವಿಕೆಟ್​ಗೆ ತಲಾ ಶತಕದ ಪಾಲುದಾರಿಕೆ ಒದಗಿಸಿದ ಗಿಲ್, ಐಸಿಸಿ ಟೂರ್ನಿಯಲ್ಲೂ ಇಂತಹದ್ದೇ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಇದು ಅವರ 50ನೇ ಪಂದ್ಯವೂ ಹೌದು.

ಏಕದಿನ ಸ್ವರೂಪದಲ್ಲಿ ಶುಭ್ಮನ್ ಗಿಲ್ 507 ದಿನಗಳ ನಂತರ ಶತಕ ಬಾರಿಸಿದ್ದಾರೆ. ಇವರು ಕೊನೆಯ ಬಾರಿಗೆ 2023ರ ಸೆಪ್ಟೆಂಬರ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂದೋರ್​​ನಲ್ಲಿ ಸೆಂಚುರಿ ಬಾರಿಸಿದ್ದರು. ಅವರ ಮನಮೋಹಕ ಆಟದಿಂದ ದಾಖಲಾದ ದಾಖಲೆಗಳೆಷ್ಟು?

ಹ್ಯಾಟ್ರಿಕ್ 50+ ಸ್ಕೋರ್; 7ನೇ ಆಟಗಾರ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಪರ ಸತತ ಫಿಫ್ಟಿ ಪ್ಲಸ್ ಸ್ಕೋರ್ ಮಾಡಿದವರ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತ ತಂಡದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಿಲ್​ಗೂ ಮೊದಲು ಈ ದಾಖಲೆ ಬರೆದವರ ಪಟ್ಟಿ ಇಂತಿದೆ.

  • ಕ್ರಿಸ್ ಶ್ರೀಕಾಂತ್ vs ಶ್ರೀಲಂಕಾ, 1982 (ತವರು)
  • ದಿಲೀಪ್ ವೆಂಗ್‌ಸರ್ಕಾರ್ vs ಶ್ರೀಲಂಕಾ, 1985 (ವಿದೇಶ)
  • ಮೊಹಮ್ಮದ್ ಅಜರುದ್ದೀನ್ vs ಶ್ರೀಲಂಕಾ, 1993 (ವಿದೇಶ)
  • ಎಂಎಸ್ ಧೋನಿ vs ಆಸ್ಟ್ರೇಲಿಯಾ, 2019 (ವಿದೇಶ)
  • ಶ್ರೇಯಸ್ ಅಯ್ಯರ್ vs ನ್ಯೂಜಿಲೆಂಡ್, 2020 (ವಿದೇಶ)
  • ಇಶಾನ್ ಕಿಶನ್ vs ವೆಸ್ಟ್ ಇಂಡೀಸ್, 2023 (ವಿದೇಶ)
  • ಶುಭ್ಮನ್ ಗಿಲ್ vs ಇಂಗ್ಲೆಂಡ್, 2025 (ತವರು)

50ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ

ಶುಭ್ಮನ್ ಗಿಲ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಇದು ಅವರ 50ನೇ ಪಂದ್ಯ. 50ನೇ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೆ, ಕೇವಲ 50 ಇನ್ನಿಂಗ್ಸ್​ಗಳಲ್ಲಿ 7 ಏಕದಿನ ಶತಕ ಗಳಿಸಿದ ಭಾರತದ ವೇಗದ ಆಟಗಾರನೂ ಹೌದು.

ಮೂರು ಸ್ವರೂಪಗಳಲ್ಲಿ ಒಂದೇ ಸ್ಥಳದಲ್ಲಿ ಶತಕ

ಟಿ20, ಟೆಸ್ಟ್, ಏಕದಿನ ಮೂರು ಸ್ವರೂಪಗಳಲ್ಲಿ ಒಂದೇ ಮೈದಾನದಲ್ಲಿ ಶತಕ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ ಐದನೇ ಆಟಗಾರ. ಫಾಫ್ ಡುಪ್ಲೆಸಿಸ್, ಡೇವಿಡ್ ವಾರ್ನರ್, ಬಾಬರ್ ಅಜಮ್, ಕ್ವಿಂಟನ್ ಡಿ ಕಾಕ್​ ಇದಕ್ಕೂ ಈ ಸಾಧನೆ ಮಾಡಿದ್ದಾರೆ.

  • ಫಾಫ್ ಡು ಪ್ಲೆಸಿಸ್ - ವಾಂಡರರ್ಸ್, ಜೋಹಾನ್ಸ್‌ಬರ್ಗ್
  • ಡೇವಿಡ್ ವಾರ್ನರ್ - ಅಡಿಲೇಡ್ ಓವಲ್
  • ಬಾಬರ್ ಅಜಮ್ - ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ
  • ಕ್ವಿಂಟನ್ ಡಿ ಕಾಕ್ - ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್
  • ಶುಭ್ಮನ್ ಗಿಲ್ - ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner