ಇಂಗ್ಲೆಂಡ್ ಪ್ರವಾಸಕ್ಕೆ ಭಾರತ 'ಎ' ತಂಡ ಪ್ರಕಟ; ಅಭಿಮನ್ಯುಗೆ ನಾಯಕತ್ವ, ಮರಳಿದ ಇಶಾನ್ ಕಿಶನ್, ಕರುಣ್ ನಾಯರ್
ಮೇ 30ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರತ ಎ ತಂಡವನ್ನು ಪ್ರಕಟಿಸಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಇದು ಹಿರಿಯರ ತಂಡದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನಡೆಯಲಿದೆ. ದೀರ್ಘಕಾಲದಿಂದ ಭಾರತದ ಪ್ರಮುಖ ತಂಡದಲ್ಲಿ ಆಡುವ ಕನಸು ಹೊಂದಿರುವ ಅಭಿಮನ್ಯು ಈಶ್ವರನ್ಗೆ ನಾಯಕತ್ವ ವಹಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ರನ್ಗಳ ಸುರಿಮಳೆಗೈದಿದ್ದ ಕರುಣ್ ನಾಯರ್ ಸಹ ಆಯ್ಕೆಯಾಗಿದ್ದಾರೆ. ಸಂಭಾವ್ಯ ನೂತನ ನಾಯಕ ಶುಭ್ಮನ್ ಗಿಲ್ 2ನೇ ಅಭ್ಯಾಸ ಪಂದ್ಯಕ್ಕೆ ಲಭ್ಯರು.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ 'ಎ' ತಂಡವನ್ನು ಮುನ್ನಡೆಸಿದ್ದರೂ, ಪ್ರಮುಖ ತಂಡಕ್ಕೆ ಸೇರಲು ಸಾಕಷ್ಟು ಫಿಟ್ ಆಗಿದ್ದರೂ ಋತುರಾಜ್ರನ್ನು ನಾಯಕನನ್ನಾಗಿ ಆಯ್ಕೆ ಮಾಡಲಿಲ್ಲ. ಭುಜದ ಗಾಯದ ಕಾರಣ 28 ವರ್ಷದ ಗಾಯಕ್ವಾಡ್, ಪ್ರಸಕ್ತ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಆದೇಶವನ್ನು ಧಿಕ್ಕರಿಸಿ ಶಿಕ್ಷೆ ಅನುಭವಿಸಿದ ನಂತರ ಪಾಠ ಕಲಿತ ಇಶಾನ್ ಕಿಶನ್ ಈಗ ತಂಡಕ್ಕೆ ಮರಳಿದ್ದಾರೆ. ಶುಭ್ಮನ್ ಗಿಲ್ ಜತೆಗೆ ಸಾಯಿ ಸುದರ್ಶನ್ 2ನೇ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೇಯಸ್ ಅಯ್ಯರ್ ಆಯ್ಕೆಯಾಗದಿರುವುದು ಅಚ್ಚರಿ ಮೂಡಿಸಿದೆ.
ಭಾರತ 'ಎ' ತಂಡವು ಇಂಗ್ಲೆಂಡ್‌ನಲ್ಲಿ 3 ಪಂದ್ಯಗಳನ್ನು ಆಡಲಿದ್ದು, ಅವುಗಳಲ್ಲಿ 2 ಇಂಗ್ಲೆಂಡ್ ಲಯನ್ಸ್ ವಿರುದ್ಧ ಮತ್ತು ಒಂದು ಹಿರಿಯ ತಂಡದ ವಿರುದ್ಧ ಆಡಲಿದೆ. ಮೊದಲ ಭಾರತ 'ಎ' vs ಇಂಗ್ಲೆಂಡ್ ಲಯನ್ಸ್ ಪಂದ್ಯವು ಮೇ 30ರಂದು ಕ್ಯಾಂಟರ್ಬರಿಯಲ್ಲಿ ನಡೆಯಲಿದೆ. 2ನೇ ಪಂದ್ಯ ಜುಲೈ 6ರಂದು ನಾರ್ಥಾಂಪ್ಟನ್‌ನಲ್ಲಿ, ಇಂಟ್ರಾ-ಸ್ಕ್ವಾಡ್ ಪಂದ್ಯ ಜುಲೈ 16ರಂದು ಬೆಕೆನ್‌ಹ್ಯಾಮ್‌ನಲ್ಲಿ ಜರುಗಲಿದೆ. ಧ್ರುವ್ ಜುರೆಲ್ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಸರ್ಫರಾಜ್ ಖಾನ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮಾನವ್ ಸುತಾರ್, ಹರ್ಷ್ ದುಬೆ ಮತ್ತು ತನುಷ್ ಕೋಟ್ಯಾನ್ರನ್ನು ತಂಡದಲ್ಲಿ ಮೂವರು ಸ್ಪಿನ್ನರ್‌ಗಳಾಗಿ ಆಯ್ಕೆ ಮಾಡಲಾಗಿದೆ. ಅನ್ಶುಲ್ ಕಾಂಬೋಜ್ ಭಾರತ 'ಎ' ತಂಡಕ್ಕೆ ಚೊಚ್ಚಲ ಕರೆ ಪಡೆದಿದ್ದಾರೆ. ವೇಗಿಗಳ ಆಯ್ಕೆ ನಿರೀಕ್ಷಿತ ಮಟ್ಟದಲ್ಲಿದ್ದರೂ ಆಸ್ಟ್ರೇಲಿಯಾ ಸರಣಿಗೆ 'ಎ' ಮತ್ತು ಹಿರಿಯ ತಂಡಗಳಿಂದ ನಿರ್ಲಕ್ಷಿಸಲ್ಪಟ್ಟ ನಂತರ ಶಾರ್ದೂಲ್ ಠಾಕೂರ್ ಅವರ ಮರಳುವಿಕೆ ಆಸಕ್ತಿದಾಯಕವಾಗಿದೆ. ಐಪಿಎಲ್ನಲ್ಲಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ತಂಡಗಳ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಆದರೆ ಪ್ರಮುಖ ತಂಡದ ಆಯ್ಕೆಯೇ ಬೇರೆಯೇ ಇರುತ್ತದೆ.
ಭಾರತ ಎ ತಂಡ
ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ) (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ತನುಷ್ ಕೋಟ್ಯಾನ್, ಮುಕೇಶ್ ಕುಮಾರ್, ಆಕಾಶ್ ದೀಪ್, ಹರ್ಷಿತ್ ರಾಣಾ, ಶಾರ್ದೂಲ್ ಠಾಕೂರ್, ಅನ್ಶುಲ್ ಕಾಂಬೋಜ್, ಹರ್ಷಿತ್ ರಾಣಾ, ಆಕಾಶ್ ದೀಪ್, ಸರ್ಫರಾಜ್ ಖಾನ್, ತುಷಾರ್ ದೇಶಪಾಂಡೆ, ಹರ್ಷ ದುಬೆ.
'ಗಮನಿಸಿ: ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಎರಡನೇ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳುತ್ತಾರೆ' ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.