ಕಳಪೆ ಫಾರ್ಮ್; ಬಾಕ್ಸಿಂಗ್ ಡೇ ಟೆಸ್ಟ್‌ಗೆ ಶುಭ್ಮನ್ ಗಿಲ್ ಕೈಬಿಟ್ಟ ಟೀಮ್ ಇಂಡಿಯಾ, ವಾಷಿಂಗ್ಟನ್ ಸುಂದರ್‌ಗೆ ಸ್ಥಾನ
ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಆಡುವ ಬಳಗಕ್ಕೆ ಸೇರಿಸಲಾಗಿದೆ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ವಿದೇಶಿ ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನ ಮುಂದುವರೆಸಿದ ಬೆನ್ನಲ್ಲೇ ಅವರನ್ನು ಹೊರಗಿಡಲಾಗಿದೆ.
ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ ಬಳಗದಿಂದ ಶುಭ್ಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಗಿಲ್ ಕೈಬಿಟ್ಟು, ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಇದೇ ವೇಳೆ ವಾಷಿಂಗ್ಟನ್ ಸುಂದರ್ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಕೊನೆಯ ಪಂದ್ಯದಲ್ಲಿ ಆಡಿದ್ದ ಆಕಾಶ್ ದೀಪ್ ಕೂಡ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತ ತಂಡವು ಇದೇ ಮೊದಲ ಬಾರಿಗೆ ಸರಣಿಯಲ್ಲಿ ಇಬ್ಬರು ಸ್ಪಿನ್ನರ್‌ಗಳು ಸೇರಿದಂತೆ ಆರು ಬೌಲಿಂಗ್ ಆಯ್ಕೆಗಳನ್ನು ಇಟ್ಟುಕೊಂಡಿದೆ. ಆದರೆ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಂಡದ ನಿರ್ಧಾರ ಎಷ್ಟು ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ನೋಡಬೇಕಾಗಿದೆ.
ಇದೇ ವೇಳೆ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಅಗ್ರ ಕ್ರಮಾಂಕಕ್ಕೆ ಮರಳುವುದನ್ನು ಟಾಸ್ ಪ್ರಕ್ರಿಯೆ ವೇಳೆ ಭಾರತದ ನಾಯಕ ಖಚಿತಪಡಿಸಿದ್ದಾರೆ. ಸರಣಿಯ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಅವರು ಕೆಎಲ್ ರಾಹುಲ್‌ಗೆ ತಮ್ಮ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಇದೀಗ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ರಾಹುಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಆದರೆ, ಬಿಸಿಸಿಐ ಹಂಚಿಕೊಂಡ ಭಾರತ ತಂಡದ ಅಧಿಕೃತ ಆಡುವ ಬಳಗದಲ್ಲಿ ರಾಹುಲ್ ಮತ್ತು ಜೈಸ್ವಾಲ್ ಅವರನ್ನು ಆರಂಭಿಕರಾಗಿ ಹೆಸರಿಸಲಾಗಿದೆ. ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ.
ವಿದೇಶಿ ಟೆಸ್ಟ್‌ಗಳಲ್ಲಿ ಗಿಲ್ ಕಳಪೆ ಫಾರ್ಮ್
ಏಕದಿನ ಸ್ವರೂಪದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಆಡಿದರೂ ಅಬ್ಬರಿಸುವ ಗಿಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಆ ವೇಗದಲ್ಲಿ ಬ್ಯಾಟ್ ಬೀಸಲು ಸಾಧ್ಯವಾಗಿಲ್ಲ. ಕೊನೆಯ ಏಳು ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ 36 ರನ್ ಮಾತ್ರ. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದು ಭಾರತಕ್ಕೆ ದೊಡ್ಡ ಚಿಂತೆಯಾಗಿದೆ. 3ನೇ ಸ್ಥಾನದಲ್ಲಿ ಗಿಲ್ ಕಾಯಂ ಆಟಗಾರನಾಗಿದ್ದರು. ಆದರೆ, ಗಿಲ್ ಅವರ ಪ್ರತಿಭೆಗೆ 31 ಟೆಸ್ಟ್ ಪಂದ್ಯಗಳಲ್ಲಿ 35.76ರ ಸರಾಸರಿ ಕಳಪೆಯಾಗಿದೆ. ಸೇನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ಈ ಪ್ರಮಾಣ 29.57ಕ್ಕೆ ಇಳಿಯುತ್ತವೆ. ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ವೇಳೆಗೆ ಅವರನ್ನು ತಂಡದಿಂದ ಕೈಬಿಡಲಾಗಿದೆ.
“ಇದು ಧೈರ್ಯಶಾಲಿ ನಿರ್ಧಾರ. ನಾನು ಗಿಲ್ ಆಯ್ಕೆಯಾಗುತ್ತಾರೆ ಎಂದುಕೊಂಡಿದ್ದೆ. ಅತ್ತ ರೆಡ್ಡಿ ಮತ್ತು ವಾಷಿಂಗ್ಟನ್ ನಡುವೆ ಇದು ಕಠಿಣ ಆಯ್ಕೆಯಾಗಿರಬಹುದು. ಆದರೆ ತಂಡವು ಇಬ್ಬರ ಮೇಲೂ ನಂಬಿಕೆ ಇಟ್ಟಿದೆ” ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಸುಂದರ್, ಇಂದು ಮತ್ತೆ ಆಡುವ ಬಳಗಕ್ಕೆ ಸೇರಿದ್ದಾರೆ. ಗಿಲ್ ಬದಲಿಗೆ ಸುಂದರ್ ಅವರನ್ನು ಆಡಿಸಲಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಅವರ ಉತ್ತರಾಧಿಕಾರಿ ಎಂದು ಹೇಳಲಾಗುವ ತಮಿಳುನಾಡಿನ ಆಲ್‌ರೌಂಡರ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.
ಭಾರತ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.