ಶುಭ್ಮನ್ ಗಿಲ್ ಔಟ್, ರಜತ್ ಪಾಟೀದಾರ್ ಇನ್; ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ಗೆ ಭಾರತದ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಶುಭ್ಮನ್ ಗಿಲ್ ಔಟ್, ರಜತ್ ಪಾಟೀದಾರ್ ಇನ್; ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ಗೆ ಭಾರತದ ಸಂಭಾವ್ಯ Xi

ಶುಭ್ಮನ್ ಗಿಲ್ ಔಟ್, ರಜತ್ ಪಾಟೀದಾರ್ ಇನ್; ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ಗೆ ಭಾರತದ ಸಂಭಾವ್ಯ XI

India vs England 2nd Test: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ ಫೆಬ್ರವರಿ 2ರಿಂದ ಆರಂಭವಾಗಲಿದ್ದು, ವಿಶಾಖಪಟ್ಟಣದ ವೈಎಸ್ ರಾಜಶೇಖರ್​ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ತನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ.

ಶುಭ್ಮನ್ ಗಿಲ್ ಮತ್ತು ರಜತ್ ಪಾಟೀದಾರ್.
ಶುಭ್ಮನ್ ಗಿಲ್ ಮತ್ತು ರಜತ್ ಪಾಟೀದಾರ್.

ಮೊದಲ ಇನಿಂಗ್ಸ್‌ನಲ್ಲಿ 190 ರನ್‌ಗಳ ಮುನ್ನಡೆ ಸಾಧಿಸಿದ ನಂತರವೂ ಇಂಗ್ಲೆಂಡ್ ವಿರುದ್ಧ ಭಾರತ (India vs England 2nd Test) ಸೋಲುತ್ತದೆ ಎಂದು ಯಾರೂ ನಿರೀಕ್ಷೆ ಕೂಡ ಮಾಡಿರಲಿಲ್ಲ. ಮೊದಲ ಟೆಸ್ಟ್‌ನ ಮೊದಲ ಎರಡೂವರೆ ದಿನಗಳಲ್ಲಿ ಬಹುತೇಕ ಹಿಡಿತ ಸಾಧಿಸಿದ್ದ ಭಾರತ, ಕೊನೆಗೆ 28 ರನ್​ಗಳಿಂದ ಶರಣಾಯಿತು. ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ತನ್ನ ಮೊದಲ ಇನ್ನಿಂಗ್ಸ್​​​ನಲ್ಲಿ 436 ರನ್ ಕಲೆ ಹಾಕಿ 190 ರನ್​ಗಳ ಮುನ್ನಡೆ ಪಡೆಯಿತು.

ಆದರೆ ಈ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, 420 ರನ್ ಪೇರಿಸಿತು. ಅಲ್ಲದೆ, 231 ರನ್​ಗಳ ಗುರಿಯನ್ನೂ ನೀಡಿತು. ಆದರೆ ಭಾರತ 202 ರನ್​ಗಳಿಗೆ ಕುಸಿತ ಕಂಡ 28 ರನ್​ಗಳಿಂದ ಪ್ರವಾಸಿ ತಂಡದ ಎದುರು ಮಂಡಿಯೂರಿತು. ಒಲ್ಲಿ ಪೋಪ್ ಅವರ (Ollie Pope) 196 ರನ್ ಮತ್ತು ಟಾಮ್ ಹಾರ್ಟ್ಲೆ (Tom Hartley) ಅವರ 7 ವಿಕೆಟ್ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. 2ನೇ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರೋಹಿತ್ ಪಡೆ ಮುಖಭಂಗಕ್ಕೆ ಒಳಗಾಯಿತು.

ಎರಡನೇ ಟೆಸ್ಟ್​ಗೆ ಬದಲಾವಣೆ ಸಾಧ್ಯತೆ

ಆದರೀಗ ಎರಡನೇ ಟೆಸ್ಟ್​ ಫೆಬ್ರವರಿ 2ರಿಂದ ಆರಂಭವಾಗಲಿದ್ದು, ವಿಶಾಖಪಟ್ಟಣದ ವೈಎಸ್ ರಾಜಶೇಖರ್​ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ತನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಆಟಗಾರರನ್ನು ಬೆಂಚ್​ಗೆ ಕೂರಿಸಲು ಮ್ಯಾನೇಜ್​ಮೆಂಟ್ ಚರ್ಚೆ ನಡೆಸಿದೆ. ಎರಡನೇ ಟೆಸ್ಟ್ ಸೋಲಿಗೆ ಕಾರಣವಾಗಿದ್ದು ಇದೇ ಬ್ಯಾಟಿಂಗ್ ವೈಫಲ್ಯ.

ಗಿಲ್-ಅಯ್ಯರ್ ವೈಫಲ್ಯ

ಇತ್ತೀಚಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಸತತವಾಗಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಅಲ್ಲದೆ, ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್‌ಗಳಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಇಲ್ಲದೆ ಬ್ಯಾಟಿಂಗ್ ವಿಭಾಗ ಸ್ವಲ್ಪ ಅಲುಗಾಡುತ್ತಿದೆ. ಹಾಗಾಗಿ ಭಾರತ ಎರಡನೇ ಟೆಸ್ಟ್‌ಗಾಗಿ ಆಡುವ XI ನಲ್ಲಿ ಕೆಲವು ಬದಲಾವಣೆ ಮಾಡುವ ನಿರೀಕ್ಷೆ ಇದೆ.

ಶುಭ್ಮನ್ ಗಿಲ್ ಬದಲಿಗೆ ಪಾಟೀದಾರ್​ಗೆ ಅವಕಾಶ

ಮೊದಲ ಟೆಸ್ಟ್​ನ ಪ್ರಥಮ ಇನ್ನಿಂಗ್ಸ್​​ನಲ್ಲಿ 23, ದ್ವಿತೀಯ ಇನ್ನಿಂಗ್ಸ್​ನಲ್ಲಿ ಡಕೌಟ್​ ಆದ ಶುಭ್ಮನ್ ಗಿಲ್ ಅವರನ್ನು ಕೈಬಿಡಲು ಚಿಂತಿಸಲಾಗಿದೆ.​​ ಗಿಲ್ ಬದಲಿಗೆ ವಿರಾಟ್ ಕೊಹ್ಲಿ ಸ್ಥಾನದಲ್ಲಿ ತಂಡಕ್ಕೆ ಡ್ರಾಫ್ಟ್ ಆಗಿರುವ ರಜತ್ ಪಾಟೀದಾರ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲು ಮ್ಯಾನೇಜ್​ಮೆಂಟ್ ಯೋಜನೆ ಹಾಕಿಕೊಂಡಿದೆ. ಪಾಟೀದಾರ್ ಅನಧಿಕೃತ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ಪರ 2 ಶತಕಗಳನ್ನು ಗಳಿಸಿ ಅದ್ಭುತ ಫಾರ್ಮ್​ನಲ್ಲಿದ್ದಾರೆ.

ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಕೂಡ ಶ್ರೇಷ್ಠ ಇನ್ನಿಂಗ್ಸ್ ಕಟ್ಟಲಿಲ್ಲ. ಆದರೆ ಅವರು ಉತ್ತಮ ಸ್ಪಿನ್ ಆಟಗಾರರಾಗಿದ್ದರೆ, ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಭಾರತ ಅವರೊಂದಿಗೆ ಮುಂದುವರಿಯಬಹುದು. ಕೆಎಲ್ ರಾಹುಲ್ ಸರಣಿಯಲ್ಲಿ ವಿಕೆಟ್ ಕೀಪ್ ಮಾಡುವುದಿಲ್ಲ ಎಂದು ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ ಅಂದರೆ ಭರತ್ ಎರಡನೇ ಟೆಸ್ಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ.

ಉಳಿದಂತೆ ಎಲ್ಲಾ ಆಟಗಾರರು ತಮ್ಮ ಪ್ರದರ್ಶನ ನೀಡಿದ್ದಾರೆ. ಗಿಲ್ ಬದಲಿಗೆ ಪಾಟೀದಾರ್ ಅವರನ್ನು ಆಯ್ಕೆ ಮಾಡುವ ನಿರ್ಧಾರ ಹೊರತುಪಡಿಸಿ ತಂಡದಲ್ಲಿ ಬದಲಾವಣೆ ಅಸಾಧ್ಯ. ಇನ್ನು ಮೂವರು ಸ್ಪಿನ್ನರ್, ಇಬ್ಬರು ವೇಗಿಗಳೊಂದಿಗೆ 2ನೇ ಟೆಸ್ಟ್​ನಲ್ಲಿ ಮುಂದುವರೆಯಲು ರೋಹಿತ್ ಮತ್ತು ದ್ರಾವಿಡ್ ಚಿಂತನೆ ನಡೆಸಿದ್ದಾರೆ. ಸದ್ಯ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವಾದರೆ ಮತ್ತೊಬ್ಬ ಸ್ಪಿನ್ನರ್​ ಆಗಿ ಕುಲ್ದೀಪ್ ಯಾದವ್ ತಂಡಕ್ಕೆ ಸೇರಬಹುದು.

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಇಲೆವೆನ್

ರೋಹಿತ್ ಶರ್ಮಾ (ನಾಯಕ) ಯಶಸ್ವಿ ಜೈಸ್ವಾಲ್, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ​.

Whats_app_banner