ತಂಡಕ್ಕೆ ಮರಳಿದ ಪ್ರಮುಖರು, ಯಾರೆಲ್ಲಾ ಇನ್, ಯಾರೆಲ್ಲಾ ಔಟ್; ದ.ಆಫ್ರಿಕಾ ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI
India playing XI vs South Africa 1st T20: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಟೀಮ್ ಇಂಡಿಯಾ ಭರ್ಜರಿ ಪ್ಲಾನ್ ರೂಪಿಸಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ (IND vs SA T20I Series) ದಿನಗಣನೆ ಶುರುವಾಗಿದೆ. ಉಭಯ ದೇಶಗಳು, ತಮ್ಮ ಬಲಿಷ್ಠ ತಂಡಗಳನ್ನು ಈಗಾಗಲೇ ಪ್ರಕಟಿಸಿವೆ. ಭಾರತದ ಈ ಪ್ರವಾಸವು ಡಿಸೆಂಬರ್ 10 ರಿಂದ ಪ್ರಾರಂಭವಾಗುವ ಟಿ20 ಸರಣಿಯೊಂದಿಗೆ ಚಾಲನೆ ಪಡೆಯುತ್ತದೆ. ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಭಾಗವಾಗದ ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ದೊಡ್ಡ ಸ್ಟಾರ್ಗಳು ತಂಡಕ್ಕೆ ಮರಳಿದ್ದಾರೆ.
ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ಗೆ ಭಾರತ ತಂಡವು ಅಣಿಯಾಗುತ್ತಿದ್ದು, ಈ ಸರಣಿಯಿಂದಲೇ ಸಂಪೂರ್ಣ ಸಿದ್ಧತೆ ಆರಂಭಿಸಲು ಉತ್ಸುಕವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಗೆದ್ದ ಭಾರತ ಈಗ ಮತ್ತೊಂದು ಸರಣಿ ಮೇಲೆ ಕಣ್ಣಿಟ್ಟಿದೆ. ಹಾಗಾಗಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಟೀಮ್ ಇಂಡಿಯಾ ಭರ್ಜರಿ ಪ್ಲಾನ್ ರೂಪಿಸಿದೆ.
ಯಾರೆಲ್ಲಾ ಔಟ್, ಯಾರೆಲ್ಲಾ ಇನ್?
ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಬಹುತೇಕ ಆಟಗಾರರು ಆಫ್ರಿಕಾ ಚುಟುಕು ಸಿರೀಸ್ಗೂ ಸೆಲೆಕ್ಟ್ ಆಗಿದ್ದಾರೆ. ಆದರೆ ಕೆಲವು ಆಟಗಾರರು ತಂಡಕ್ಕೆ ಮರಳಿದ ಕಾರಣ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಶುಭ್ಮನ್ ಗಿಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುವುದು ಖಚಿತ. ಹಾಗಾಗಿ ಯಶಸ್ವಿ ಜೈಸ್ವಾಲ್ ಜಾಗ ಬಿಟ್ಟುಕೊಟಬೇಕಾಗುತ್ತದೆ. ಆಸೀಸ್ ಎದುರು ಅಬ್ಬರಿಸಿದ ಋತುರಾಜ್, ಗಿಲ್ ಜೊತೆ ಆರಂಭಿಕನಾಗುವ ಸಾಧ್ಯತೆ ಇದೆ.
ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ನಂತರ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಸೂರ್ಯ ತಂಡವನ್ನು ಮುನ್ನಡೆಸಲಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ನಂಬರ್ 5 ಸ್ಲಾಟ್‌ಗೆ ಇಶಾನ್ ಕಿಶನ್ ಆದ್ಯತೆಯ ಆಯ್ಕೆಯಾಗಿದ್ದರೆ, ರಿಂಕು ಸಿಂಗ್ 6ನೇ ಕ್ರಮಾಂಕದ ಜೊತೆಗೆ ಫಿನಿಷರ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ನಂತರದ ಸ್ಥಾನದಲ್ಲಿ ರವೀಂದ್ರ ಜಡೇಜಾ ಸ್ಪಿನ್-ಬೌಲಿಂಗ್ ಆಲ್-ರೌಂಡರ್ ಆಗಿದ್ದು, ಕುಲ್ದೀಪ್ ಸ್ಪೆಷಲಿಸ್ಟ್ ಸ್ಪಿನ್ನರ್ ಕಣಕ್ಕಿಳಿಯುವುದು ಖಚಿತ. ದೀಪಕ್ ಚಹರ್, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಪ್ರಮುಖ ವೇಗಿಗಳಾಗಿದ್ದಾರೆ. ರವಿ ಬಿಷ್ಣೋಯ್ ಕೂಡ ಆಯ್ಕೆಯ ರೇಸ್ನಲ್ಲಿದ್ದಾರೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ಯಾರನ್ನು ಬೆಂಚ್ ಕಾಯಿಸಿ ಯಾರಿಗೆ ಅವಕಾಶ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಗೆ ಭಾರತದ ಬಲಿಷ್ಠ ಪ್ಲೇಯಿಂಗ್ ಇಲೆವೆನ್
ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್, ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ಅರ್ಷ್ದೀಪ್ ಸಿಂಗ್.