ಬ್ರೇಕಪ್ ಸ್ಟೋರಿ: ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ, ಮದುವೆಯಾಗದೆ ಬೇರ್ಪಟ್ಟಿತೇ ಮತ್ತೊಂದು ಕ್ರಿಕೆಟ್ ಜೋಡಿ?
ಟೀಮ್ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಪರಸ್ಪರ ಬೇರ್ಪಟ್ಟಿದ್ದಾರೆ ಎಂದು ವದಂತಿ ಹಬ್ಬಿದೆ. ಈ ಜೋಡಿ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡು ಈ ವದಂತಿಗೆ ಪುಷ್ಠಿ ನೀಡಿದ್ದಾರೆ.

ಭಾರತದ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಮತ್ತು ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಲವ್ನಲ್ಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಆದರೆ ಸಂದರ್ಶನವೊಂದರಲ್ಲಿ ಗಿಲ್ ಇರಬಹುದು ಅಥವಾ ಇಲ್ಲದೇ ಇರಬಹುದು ಎಂದು ಹೇಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದರು. ಒಂದರ್ಥದಲ್ಲಿ ಇಬ್ಬರು ಡೇಟಿಂಗ್ ನಡೆಸುತ್ತಿರುವ ಕುರಿತು ಪರೋಕ್ಷ ಸುಳಿವು ಕೊಟ್ಟಿದ್ದರು. ಇದರ ಜೊತೆಗೆ ಗಿಲ್ ಜೊತೆಗೆ ಸಚಿನ್ ಪುತ್ರಿ ಸಾರಾ ಅಲ್ಲ, ನಟಿ ಸಾರಾ ಅಲಿ ಖಾನ್ ಡೇಟಿಂಗ್ ಮಾಡ್ತಿರೋದು ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಕೆಲವು ವರದಿಗಳು ಹೇಳಿದ್ದವು.
ಶುಭ್ಮನ್ ಗಿಲ್ ಅವರ ವೈಯಕ್ತಿಕ ಜೀವನ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ, ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಫಾಲೋ ಮಾಡಿ ಪೋಸ್ಟ್ಗಳಿಗೆ ಕಾಮೆಂಟ್ ಹಾಕುತ್ತಿದ್ದ ಶುಭ್ಮನ್ ಮತ್ತು ಸಾರಾ ಇದೀಗ ದಿಢೀರ್ ಅನ್ಫಾಲೋ ಮಾಡಿದ್ದಾರೆ. ಇದೀಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬೇರ್ಪಟ್ಟಿದ್ದಾರೆ ಎಂಬ ಗೊಂದಲ ಸೃಷ್ಟಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಹರಿದಾಡುತ್ತಿದೆ. ಮತ್ತೊಂದೆಡೆ ಈ ವದಂತಿಗಳ ನಡುವೆಯೂ ಇಬ್ಬರು ತಮ್ಮ ತಮ್ಮ ವೈಯಕ್ತಿಕ ಜೀವನವನ್ನು ಅದ್ಭುತವಾಗಿ ಕಳೆಯುತ್ತಿದ್ದಾರೆ. ಗಿಲ್ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದರೆ, ಸಾರಾ ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.
ಶುಭ್ಮನ್ ಗಿಲ್ ಭವಿಷ್ಯದ ನಾಯಕ?
ಶುಭ್ಮನ್ ಗಿಲ್ ತಮ್ಮ ವೃತ್ತಿಪರ ಜೀವನದ ಮೇಲೆ ಗಮನ ಹರಿಸುತ್ತಿದ್ದು, ಪ್ರಸ್ತುತ 2025ರ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಜಿಟಿ ಅಗ್ರಸ್ಥಾನದಲ್ಲಿದೆ. ಇದು ಶುಭ್ಮನ್ ಅವರ ನಾಯಕತ್ವ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ, ಅವರು ಭಾರತೀಯ ಏಕದಿನ ತಂಡದ ಉಪನಾಯಕರೂ ಆಗಿದ್ದಾರೆ. ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ ಭಾರತದ ವೈಟ್ ಬಾಲ್ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಭವಿಷ್ಯದ ನಾಯಕ ಎಂದು ಪರಿಗಣಿಸಲಾಗಿದೆ. ಅವರ ಬ್ಯಾಟಿಂಗ್ ಫಾರ್ಮ್, ನಾಯಕತ್ವದ ಕೌಶಲ್ಯ ಮತ್ತು ಯುವ ಕ್ರಿಕೆಟಿಗರನ್ನು ಮುನ್ನಡೆಸುವ ಶೈಲಿ ಇವೆಲ್ಲವೂ ಭವಿಷ್ಯದಲ್ಲಿ ಅವರು ಸಂಪೂರ್ಣ ನಾಯಕನಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಜರ್ನಿ
2022ರಲ್ಲಿ ಐಪಿಎಲ್ಗೆ ಕಾಲಿಟ್ಟ ಮೊದಲ ವರ್ಷವೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಟೈಟಾನ್ಸ್, ಅದರ ಮರು ವರ್ಷ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. 2024ರಲ್ಲಿ 7ನೇ ಸ್ಥಾನದಲ್ಲಿದ್ದ ಜಿಟಿ, ಈ ವರ್ಷ ಅಗ್ರಸ್ಥಾನಿಯಾಗಿದೆ. ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು, 2 ಸೋಲಿನೊಂದಿಗೆ 12 ಅಂಕ ಸಂಪಾದಿಸಿದೆ. ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 11 ರನ್ನಿಂದ ಸೋತಿದ್ದ ಜಿಟಿ, ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 36 ರನ್, ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 8 ವಿಕೆಟ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್, ರಾಜಸ್ಥಾನ್ ರಾಯಲ್ಸ್ ಎದುರು 58 ರನ್ಗಳಿಂದ ಗೆದ್ದಿತ್ತು. ಆದರೆ 6ನೇ ಪಂದ್ಯದಲ್ಲಿ ಲಕ್ನೋ ವಿರುದ್ಧ ಮುಗ್ಗರಿಸಿತ್ತು. ಇದೀಗ ಡೆಲ್ಲಿ ಮತ್ತು ಕೆಕೆಆರ್ ವಿರುದ್ಧ ಜಯಿಸಿ ಮತ್ತೆ ಲಯಕ್ಕೆ ಮರಳಿದೆ.