ಶುಭ್ಮನ್ ಗಿಲ್, ಅಯ್ಯರ್, ಅಕ್ಷರ್ ಬೊಂಬಾಟ್ ಆಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವಿನ ಶುಭಾರಂಭ
India vs England 1st ODI: ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಗೆದ್ದು ಭಾರತ ತಂಡ ಶುಭಾರಂಭ ಮಾಡಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳಿಂದ ಜಯದ ನಗೆ ಬೀರುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತು. ಟಿ20ಐ ಸರಣಿ ಸೋಲಿಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದ್ದ ಆಂಗ್ಲರು ಏಕದಿನ ಸಿರೀಸ್ನಲ್ಲೂ ಆಘಾತ ಅನುಭವಿಸಿದ್ದು, ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ. 2023ರ ವಿಶ್ವಕಪ್ ನಂತರ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿದ 8 ಏಕದಿನ ಪಂದ್ಯಗಳಲ್ಲಿ 7ರಲ್ಲಿ ಸೋತಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ, ಹರ್ಷಿತ್ ರಾಣಾ ತಲಾ ಮೂರು ವಿಕೆಟ್ ಉರುಳಿಸಿ ಪ್ರವಾಸಿ ತಂಡವನ್ನು 47.4 ಓವರ್ಗಳಲ್ಲಿ ಆಲೌಟ್ ಮಾಡಿ 248 ರನ್ಗಳಿಗೆ ಕಟ್ಟಿ ಹಾಕಿದರು. 249 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್ (59), ಶುಭ್ಮನ್ ಗಿಲ್ (87) ಮತ್ತು ಅಕ್ಷರ್ ಪಟೇಲ್ (52) ಬ್ಯಾಟಿಂಗ್ ಬಲದಿಂದ 38.4 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿತು. ಇದರೊಂದಿಗೆ ರೋಹಿತ್ ಪಡೆ 1-0 ಅಂತರದಿಂದ ಮುನ್ನಡೆ ಸಾಧಿಸಿತು.
ಭಾರತೀಯ ಬ್ಯಾಟರ್ಗಳ ಬೊಂಬಾಟ್ ಆಟ
249 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ, ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಏಕದಿನ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಮೂರು ಬೌಂಡರಿಗಳ ಮೂಲಕ ಭರವಸೆ ಮೂಡಿಸಿದರೂ 15 ರನ್ಗೆ ಔಟಾಗಿ ನಿರಾಸೆಗೊಂಡರು. ಮತ್ತೊಂದೆಡೆ ರೋಹಿತ್ ಶರ್ಮಾ (2) ಕಳಪೆ ಆಟ ಮತ್ತೆ ಮುಂದುವರೆಯಿತು. ಜೋಪ್ರಾ ಆರ್ಚರ್, ಸಾಕಿಬ್ ಮಹಮೂದ್ ಇಬ್ಬರಿಗೂ ಗೇಟ್ ಪಾಸ್ ನೀಡಿ ಇಂಗ್ಲೆಂಡ್ ಹಿಡಿತ ಸಾಧಿಸಲು ನೆರವಾದರು. ಆದರೆ ಈ ಹಂತದಲ್ಲಿ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಆಸರೆಯಾದರು.
ಗಿಲ್ ರಕ್ಷಣಾತ್ಮಕ ಆಟದ ಮೂಲಕ ದಿಟ್ಟ ಹೋರಾಟ ನಡೆಸಿದರೆ, ಕ್ರೀಸ್ಗೆ ಬಂದ ತಕ್ಷಣವೇ ಹೊಡಿಬಡಿ ಆಟವನ್ನು ಪ್ರದರ್ಶಿಸಿ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಕ್ರೀಸ್ನಲ್ಲಿದ್ದ ಕೆಲವೇ ನಿಮಿಷಗಳಲ್ಲಿ 3ನೇ ವಿಕೆಟ್ಗೆ 94 ರನ್ ಸೇರಿಸಿ ತಾನೂ ಅರ್ಧಶತಕ ಸಿಡಿಸಿ ಮಿಂಚಿದ ಅಯ್ಯರ್, 36 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿ ಜೇಕಬ್ ಬೆಥಲ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಅಯ್ಯರ್ ಔಟಾದ ಬಳಿಕ ಜವಾಬ್ದಾರಿ ಹೊತ್ತ ಗಿಲ್, ಆಂಗ್ಲರ ಮೇಲೆ ಸವಾರಿ ಮಾಡಿದರು. ಅವರಿಗೆ ಬಡ್ತಿ ಪಡೆದು ಕಣಕ್ಕಿಳಿದ ಅಕ್ಷರ್ ಪಟೇಲ್ ಅದ್ಭುತ ಸಾಥ್ ಕೊಟ್ಟರು. 4ನೇ ವಿಕೆಟ್ಗೆ 108 ರನ್ಗಳ ಪಾಲುದಾರಿಕೆಯನ್ನೂ ಒದಗಿಸಿದರು.
ಇಬ್ಬರ ಅದ್ಭುತ ಜೊತೆಯಾಟದ ಕಾರಣ ಇಂಗ್ಲೆಂಡ್ ಗೆಲುವಿನ ಕನಸನ್ನು ಕಸಿದರು. ಅಕ್ಷರ್ 47 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ಗಳ ಅಮೂಲ್ಯ ಕಾಣಿಕೆ ನೀಡಿ ಆದಿಲ್ ರಶೀದ್ ಬೌಲಿಂಗ್ನಲ್ಲಿ ಕ್ಲಿನ್ ಬೋಲ್ಡ್ ಆದರು. ಇದರ ಬೆನ್ನಲ್ಲೇ ಶತಕದ ಅಂಚಿನಲ್ಲಿದ್ದ ಶುಭ್ಮನ್ ಗಿಲ್ 87 ರನ್ ಗಳಿಸಿ (96 ಎಸೆತ 14 ಬೌಂಡರಿ) ಔಟಾದರು. ಕೊನೆಯಲ್ಲಿ ಕೆಎಲ್ ರಾಹುಲ್ 2, ಹಾರ್ದಿಕ್ ಅಜೇಯ 8, ಜಡೇಜಾ ಅಜೇಯ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಾಕಿಬ್ ಮತ್ತು ಆದಿಲ್ ತಲಾ 2 ವಿಕೆಟ್ ಕಿತ್ತರು.
ಭಾರತೀಯ ಬೌಲರ್ಗಳ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕ ವಿಕೆಟ್ಗೆ 75 ರನ್ ಹರಿದು ಬಂತು. ಫಿಲ್ ಸಾಲ್ಟ್ 43 ರನ್, ಬೆನ್ ಡಕೆಟ್ 32 ರನ್ ಸಿಡಿಸಿ ಔಟಾದರು. ಬಳಿಕ ಜೋ ರೂಟ್ 19, ಹ್ಯಾರಿ ಬ್ರೂಕ್ 0 ಸುತ್ತಿ ನಿರಾಸೆ ಮೂಡಿಸಿದರು. 18.3 ಓವರ್ಗಳಲ್ಲಿ 111 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ಗೆ ಆಸರೆಯಾಗಿದ್ದು ನಾಯಕ ಜೋಸ್ ಬಟ್ಲರ್ ಮತ್ತು ಜೇಕಬ್ ಬೆಥೆಲ್. ಭಾರತದ ಬೌಲರ್ಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದ ಈ ಜೋಡಿ 5ನೇ ವಿಕೆಟ್ಗೆ ಅಮೂಲ್ಯವಾದ 59 ರನ್ಗಳ ಕಾಣಿಕೆ ನೀಡಿತು. 67 ಎಸೆತಗಳಲ್ಲಿ 4 ಬೌಂಡರಿ ಸಹಿತ 52 ರನ್ ಗಳಿಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯುತ್ತಿದ್ದ ಬಟ್ಲರ್ಗೆ ಅಕ್ಷರ್ ಗೇಟ್ ಪಾಸ್ ಕೊಟ್ಟರು.
ನಾಯಕ ಔಟಾದ ನಂತರ ತಂಡವನ್ನು 200ರ ಗಡಿ ದಾಟಿಸಲು ನೆರವಾದ ಬೆಥೆಲ್ 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಬಾರಿಸಿ ಜಡ್ಡುಗೆ ಬಲಿಯಾದರು. ಇದರೊಂದಿಗೆ ಇಂಗ್ಲೆಂಡ್ ಬೃಹತ್ ಮೊತ್ತ ಕಟ್ಟುವ ಕನಸಿಗೆ ಕೊಳ್ಳಿ ಬಿತ್ತು. ಕೆಳ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟನ್ (5), ಬ್ರೈಡನ್ ಕಾರ್ಸ್ (10), ಆದಿಲ್ ರಶೀದ್ (8) ಮತ್ತು ಸಾಕಿಬ್ ಮಹ್ಮೂದ್ (2) ನಿರಾಸೆ ಮೂಡಿಸಿದರೆ, ಜೋಫ್ರಾ ಆರ್ಚರ್ ಅಜೇಯ 21 ರನ್ ಸಿಡಿಸಿದರು. ಜಡೇಜಾ 3 ವಿಕೆಟ್ ಕಿತ್ತರೆ, ಹರ್ಷಿತ್ ತನ್ನ ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದರು. ಇವರಿಬ್ಬರಿಗೆ ಕುಲ್ದೀಪ್, ಶಮಿ, ಅಕ್ಷರ್ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.
