11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ; ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕ್ಲಬ್ ಸೇರಿದ ಪ್ರಿನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ; ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕ್ಲಬ್ ಸೇರಿದ ಪ್ರಿನ್ಸ್

11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ; ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಕ್ಲಬ್ ಸೇರಿದ ಪ್ರಿನ್ಸ್

Shubman Gill Century : ಬರೋಬ್ಬರಿ 11 ತಿಂಗಳ ನಂತರ ಟೆಸ್ಟ್ ಕ್ರಿಕೆಟ್​ನಲ್ಲಿ ಶುಭ್ಮನ್ ಗಿಲ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಅಪರೂಪದ ಕ್ಲಬ್​ಗೂ ಸೇರಿದ್ದಾರೆ.

11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ
11 ತಿಂಗಳ ನಂತರ ಶುಭ್ಮನ್ ಗಿಲ್ ಶತಕ (BCCI)

ಸತತ 12 ಇನ್ನಿಂಗ್ಸ್​​ಗಳಿಂದ ವೈಫಲ್ಯ ಅನುಭವಿಸಿದ್ದ ಯಂಗ್​ ಬ್ಯಾಟರ್ ಶುಭ್ಮನ್ ಗಿಲ್ (Shubman Gill) ಕೊನೆಗೂ ಫಾರ್ಮ್​ಗೆ ಮರಳಿದ್ದು, ಶತಕದ ಬರವನ್ನು ನೀಗಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನ ದ್ವಿತೀಯ ಇನ್ನಿಂಗ್ಸ್​​ನಲ್ಲಿ ತಮ್ಮ ಮೂರನೇ ಟೆಸ್ಟ್​ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಗಿಲ್ 132 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 100ರ ಗಡಿ ದಾಟಿದರು.

ಈ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ 34​ ಮತ್ತು ಮೊದಲ ಟೆಸ್ಟ್​ನ ಎರಡೂ ಇನ್ನಿಂಗ್ಸ್​​ಗಳಲ್ಲಿ ಕ್ರಮವಾಗಿ 23 ಮತ್ತು 0 ರನ್ ಕಲೆ ಹಾಕಿ ನೀರಸ ಪ್ರದರ್ಶನ ನೀಡಿದ್ದರು. ಸೌತ್ ಆಫ್ರಿಕಾ ನಾಡಿನಲ್ಲೂ ಟೆಸ್ಟ್​ನಲ್ಲಿ ವಿಫಲರಾಗಿದ್ದರು. ಹೀಗಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಹಾಗಾಗಿ ತಂಡದಿಂದ ಕೈಬಿಡಬೇಕು ಎನ್ನುವ ಅಭಿಪ್ರಾಯಗಳನ್ನೂ ಹೊರ ಹಾಕಿದ್ದರು. ಇದೀಗ ಟೀಕೆಗಳಿಗೆ ಬ್ಯಾಟ್​ನಿಂದಲೇ ಉತ್ತರಿಸಿದ್ದಾರೆ.

332 ದಿನಗಳ ನಂತರ ಗಿಲ್ ಶತಕ

ಮೊದಲ ಇನ್ನಿಂಗ್ಸ್​​ನಲ್ಲಿ ಯಶಸ್ವಿ ಜೈಸ್ವಾಲ್​ ಅವರ ದ್ವಿಶತಕದ ನೆರವಿನಿಂದ ಭಾರತ 396 ರನ್ ಕಲೆ ಹಾಕಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಮತ್ತೆ ಬ್ಯಾಟ್ಸ್​ಮನ್​ಗಳು ಕೈಕೊಟ್ಟರು. ಈ ಹಂತದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿ 10 ತಿಂಗಳು 26 ದಿನಗಳ ನಂತರ ಅಂದರೆ 332 ದಿನಗಳ ನಂತರ ನೂರರ ಗಡಿ ದಾಟಿದರು. ಗಿಲ್​ಗೆ ಇದು ಇಂಗ್ಲೆಂಡ್​ ವಿರುದ್ಧ ಸಿಡಿಸಿದ ಚೊಚ್ಚಲ ಶತಕವೂ ಆಗಿದೆ.

147 ಎಸೆತಗಳನ್ನು ಎದುರಿಸಿದ ಗಿಲ್​ 11 ಬೌಂಡರಿ, 2 ಸಿಕ್ಸರ್ ಸಹಿತ 104 ರನ್ ಗಳಿಸಿ ಶೋಯೆಬ್ ಬಶೀರ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಜೊತೆ 81 ರನ್, ಅಕ್ಷರ್ ಪಟೇಲ್ ಜೊತೆಗೆ 89 ರನ್ ಪಾಲುದಾರಿಕೆ ನೀಡಿದರು. ಸಿಕ್ಕ ಮೂರು ಜೀವದಾನಗಳ ಲಾಭ ಪಡೆದ ಗಿಲ್‌, ಏಕಾಗ್ರತೆ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ಕೊಹ್ಲಿ-ಸಚಿನ್ ಕ್ಲಬ್ ಸೇರಿದ ಗಿಲ್

ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ ನಂತರ ಶುಭ್ಮನ್ ಗಿಲ್, 24ನೇ ವಯಸ್ಸಿನಲ್ಲಿ ಭಾರತ ತಂಡದ ಪರ 10 ಅಂತಾರಾಷ್ಟ್ರೀಯ ಶತಕ ಗಳಿಸಿದ ಮೂರನೇ ಆಟಗಾರರಾದರು. ಇದರೊಂದಿಗೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್​ ಕೊಹ್ಲಿ ಕ್ಲಬ್​ಗೆ ಸೇರಿದರು. 24 ವರ್ಷ ವಯಸ್ಸಿನಲ್ಲಿ ಸಚಿನ್ 30 ಶತಕ, ಕೊಹ್ಲಿ 21 ಶತಕ ಸಿಡಿಸಿದ್ದರು. ಈಗ ಗಿಲ್ 10ನೇ ಶತಕ ಪೂರೈಸಿದ್ದಾರೆ.

ತೆಂಡೂಲ್ಕರ್ 273 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಕೊಹ್ಲಿ 163 ಇನ್ನಿಂಗ್ಸ್​ ಮತ್ತು ಗಿಲ್ 99 ಇನ್ನಿಂಗ್ಸ್​​ಗಳಲ್ಲಿ ಸಾಧನೆ ಮಾಡಿದರು. ವೀರೇಂದ್ರ ಸೆಹ್ವಾಗ್, ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ತಲಾ 9 ಶತಕಗಳೊಂದಿಗೆ ಗಿಲ್​ ನಂತರದ ಸ್ಥಾನದಲ್ಲಿದ್ದಾರೆ. ಡಬ್ಲ್ಯುಟಿಸಿಯಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರೋಹಿತ್​ ಶರ್ಮಾ (5), ಕೊಹ್ಲಿ (3) ನಂತರದ ಸ್ಥಾನದಲ್ಲಿ ಗಿಲ್ (3) ಇದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕೊನೆಯ ಶತಕ

ಶುಭ್ಮನ್ ಗಿಲ್ ಅವರು ತನ್ನ ಕೊನೆಯ ಶತಕವನ್ನು 2023ರ ಮಾರ್ಚ್​ 9ರಂದು ಸಿಡಿಸಿದ್ದರು. ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಈ ಶತಕ ಹೊರ ಬಂದಿತ್ತು. ಅಂದು 235 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 128 ರನ್ ಗಳಿಸಿದ್ದರು. ಅಂದಿನಿಂದ, 24 ವರ್ಷದ ಆಟಗಾರ 11 ಇನ್ನಿಂಗ್ಸ್‌ಗಳಲ್ಲಿ 17.30 ಸರಾಸರಿಯಲ್ಲಿ 173 ರನ್ ಗಳಿಸಿದ್ದರು. ಅಲ್ಲದೆ, ಒಂದು ಬಾರಿಯೂ ಅರ್ಧಶತಕದ ಗಡಿ ದಾಟಿರಲಿಲ್ಲ. 36 ಗರಿಷ್ಠ ಸ್ಕೋರ್ ಆಗಿತ್ತು.

ಗಿಲ್ ಅವರ ಮೊದಲ ಟೆಸ್ಟ್ ಶತಕವು 2022ರಲ್ಲಿ ದಾಖಲಾಗಿತ್ತು. ಬಾಂಗ್ಲಾದೇಶದ ವಿರುದ್ಧ ಚಟ್ಟೋಗ್ರಾಮ್‌ನಲ್ಲಿ 110 ರನ್ ಗಳಿಸಿದ್ದರು. ಈವರೆಗೂ 22 ಟೆಸ್ಟ್​ ಪಂದ್ಯಗಳನ್ನಾಡಿರುವ ಶುಭ್ಮನ್ ಗಿಲ್, 41 ಇನ್ನಿಂಗ್ಸ್​ಗಳಲ್ಲಿ 31.61ರ ಸರಾಸರಿಯಲ್ಲಿ 3 ಶತಕ, 4 ಅರ್ಧಶತಕ ಸಹಿತ 1201 ರನ್ ಗಳಿಸಿದ್ದಾರೆ.

Whats_app_banner