ಸೆಂಚುರಿ ಬಾರಿಸಿ ಟೀಕಾಕಾರರ ಬಾಯ್ಮುಚ್ಚಿಸಿದ ಶುಭ್ಮನ್ ಗಿಲ್; ವಿರಾಟ್ ಕೊಹ್ಲಿ ಹಲವು ದಾಖಲೆಗಳೂ ಬ್ರೇಕ್
Shubman Gill: ಟೀಕಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಶುಭ್ಮನ್ ಗಿಲ್ ಬಾಂಗ್ಲಾದೇಶ ವಿರುದ್ಧದ 2ನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ಅವರ ಹಲವು ದಾಖಲೆಗಳನ್ನೂ ಪುಡಿಗಟ್ಟಿದ್ದಾರೆ.
Shubman Gill century: ಬಾಂಗ್ಲಾದೇಶ ತಂಡದ ವಿರುದ್ಧದ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಡಕೌಟ್ ಆಗಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಶುಭ್ಮನ್ ಗಿಲ್, ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಸಿಡಿಸಿ ಟೀಕಾಕಾರರ ಬಾಯ್ಮುಚ್ಚಿಸಿದ್ದಾರೆ. ಚೆನ್ನೈ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ನ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಆರಂಭಕ್ಕೆ ಆಘಾತಕ್ಕೆ ಒಳಗಾಗಿತ್ತು. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಬೇಗನೇ ಔಟಾಗಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ಹಂತದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸಿ ಬಾಂಗ್ಲಾ ಬೌಲರ್ಸ್ಗೆ ಬೆಂಡೆತ್ತಿ, ಟೆಸ್ಟ್ನಲ್ಲಿ 5ನೇ ಶತಕ ಪೂರೈಸಿದರು.
161 ಎಸೆತಗಳಲ್ಲಿ ನೂರರ ಗಡಿ ದಾಟಿದ ಶುಭ್ಮನ್ ಗಿಲ್, 176 ಬಾಲ್ಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 119 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ 5ನೇ ಶತಕ ಮತ್ತು ವೃತ್ತಿಜೀವನದ 12ನೇ ಶತಕವಾಗಿದೆ. ಅಲ್ಲದೆ, ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್ ದಾಖಲಿಸಿದ 3ನೇ ಶತಕವೂ ಇದಾಗಿದೆ. ಈ ಅದ್ಭುತ ಶತಕದ ಮೂಲಕ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಗಿಲ್ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಬಾರಿಗೆ, 3 ಟೆಸ್ಟ್ ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 2 ಶತಕ ಸಿಡಿಸಿದ್ದರು. ಅಲ್ಲದೆ, ಕೊಹ್ಲಿ ದಾಖಲೆಯನ್ನೂ ಸರಿಗಟ್ಟಿದ್ದಾರೆ.
ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್
2020ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶುಭ್ಮನ್ ಗಿಲ್, ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 45 ರನ್ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 35 ರನ್ ಗಳಿಸಿದ್ದರು. ಗಿಲ್ ತನ್ನ ಮೊದಲ ಟೆಸ್ಟ್ ಶತಕಕ್ಕೆ ಸುಮಾರು 2 ವರ್ಷಗಳ ಕಾಲ ಕಾಯಬೇಕಾಯಿತು. 2022ರ ಡಿಸೆಂಬರ್ನಲ್ಲಿ ಬಾಂಗ್ಲಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕ ಗಳಿಸಿದರು. ನಂತರ 2023ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ 2ನೇ ಶತಕ ಸಿಡಿಸಿದ ಗಿಲ್, 2024ರ ಫೆಬ್ರುವರಿ-ಮಾರ್ಚ್‌ನಲ್ಲಿ ನಡೆದ ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ 2 ಸೆಂಚುರಿ ಸಿಡಿಸಿದ್ದರು. ಈಗ ಗಿಲ್ ಬಾಂಗ್ಲಾ ಎದುರು ಸಿಡಿಸಿದ್ದು 5ನೇ ಶತಕವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯುಟಿಸಿ) ಅತಿ ಹೆಚ್ಚು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರನ್ನು ಶುಭ್ಮನ್ ಗಿಲ್ ಹಿಂದಿಕ್ಕಿದ್ದಾರೆ. 2019ರಲ್ಲಿ ಆರಂಭವಾದ ಡಬ್ಲ್ಯುಟಿಸಿಯಲ್ಲಿ ಕೊಹ್ಲಿ ಒಟ್ಟು 4 ಶತಕ ಬಾರಿಸಿದ್ದಾರೆ. ಆದರೆ ಗಿಲ್ 5 ಶತಕ ಬಾರಿಸುವ ಮೂಲಕ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಡಬ್ಲ್ಯುಟಿಸಿಯಲ್ಲಿ ಒಟ್ಟು 9 ಸೆಂಚುರಿ ಬಾರಿಸಿದ್ದಾರೆ. ಅಲ್ಲದೆ, ಟೆಸ್ಟ್ನಲ್ಲಿ 5 ಶತಕಗಳನ್ನು ಪೂರೈಸಿದ ಕಿರಿಯ ಬ್ಯಾಟರ್ ಎನಿಸಿದ್ದಾರೆ.
ಕಿರಿಯ ವಯಸ್ಸಿನಲ್ಲೇ 5 ಟೆಸ್ಟ್ ಸೆಂಚುರಿ ಸಿಡಿಸಿದವರು
- 19 ವರ್ಷ, 282 ದಿನಗಳು - ಸಚಿನ್ ತೆಂಡೂಲ್ಕರ್
- 22 ವರ್ಷ, 218 ದಿನಗಳು - ರವಿಶಾಸ್ತ್ರಿ
- 23 ವರ್ಷ, 242 ದಿನಗಳು - ದಿಲೀಪ್ ವೆಂಗ್‌ಸರ್ಕರ್
- 24 ವರ್ಷ, 3 ದಿನಗಳು - ಮೊಹಮ್ಮದ್ ಅಜರುದ್ದೀನ್
- 24 ವರ್ಷ, 73 ದಿನಗಳು - ಮನ್ಸೂರ್ ಅಲಿ ಖಾನ್ ಪಟೌಡಿ
- 24 ವರ್ಷ, 270 ದಿನಗಳು - ರಿಷಭ್ ಪಂತ್
- 24 ವರ್ಷ, 331 ದಿನಗಳು - ಸುನಿಲ್ ಗವಾಸ್ಕರ್
- 25 ವರ್ಷ, 13 ದಿನಗಳು - ಶುಭ್ಮನ್ ಗಿಲ್*
- 25 ವರ್ಷ, 43 ದಿನಗಳು - ವಿರಾಟ್ ಕೊಹ್ಲಿ
ಡಬ್ಲ್ಯುಟಿಸಿಯಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಸಿಡಿಸಿದವರು
- 9 - ರೋಹಿತ್ ಶರ್ಮಾ (56 ಇನ್ನಿಂಗ್ಸ್)
- 5 - ಶುಭ್ಮನ್ ಗಿಲ್ (48 ಇನ್ನಿಂಗ್ಸ್)*
- 4 - ಮಯಾಂಕ್ ಅಗರ್ವಾಲ್ (33 ಇನ್ನಿಂಗ್ಸ್)
- 4 - ರಿಷಭ್ ಪಂತ್ (43 ಇನ್ನಿಂಗ್ಸ್)
- 4 - ವಿರಾಟ್ ಕೊಹ್ಲಿ (62 ಇನ್ನಿಂಗ್ಸ್)
ಭಾರತ ಡಿಕ್ಲೇರ್, ಬಾಂಗ್ಲಾಗೆ 515 ಟಾರ್ಗೆಟ್
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸಿದ 2ನೇ ಭಾರತೀಯ ಎನಿಸಿದ್ದಾರೆ. ಮೊದಲು ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ಗಿಲ್ ಮತ್ತು ಪಂತ್ 4ನೇ ವಿಕೆಟ್‌ಗೆ 167 ರನ್‌ಗಳ ಬೃಹತ್ ಜೊತೆಯಾಟದ ನೆರವಿನಿಂದ ಬಾಂಗ್ಲಾ ತಂಡಕ್ಕೆ ಬಿಗ್ ಟಾರ್ಗೆಟ್ ನೀಡಲು ಸಾಧ್ಯವಾಯಿತು. ರಿಷಭ್ ಪಂತ್ ಸಹ ಶತಕ ಸಿಡಿಸಿದ್ದು, ಭಾರತ ತಂಡವು 515 ರನ್‌ಗಳ ಗುರಿ ನೀಡಿದೆ. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಪಡೆದಿತ್ತು. ಇದೀಗ ಎರಡನೇ ಇನ್ನಿಂಗ್ಸ್ 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.