ಭಾರತ ತಂಡದ ಬ್ಯಾಟಿಂಗ್ ವೈಫಲ್ಯ; ಇಂಗ್ಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ನೂತನ ಬ್ಯಾಟಿಂಗ್ ಕೋಚ್ ನೇಮಕ?
Sitanshu Kotak: ಭಾರತ ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕಾರಣ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ನೂತನ ಬ್ಯಾಟಿಂಗ್ ನೇಮಕ ಮಾಡುವ ಸಾಧ್ಯತೆ ಇದೆ.

ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡ ವಿರುದ್ಧದ 3-1ರಿಂದ ಹೀನಾಯ ಸೋಲಿನ ಬಳಿಕ ಮತ್ತು ಜೂನ್ನಲ್ಲಿ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದಲ್ಲಿ ಮೇಜರ್ ಸರ್ಜರಿಯಾಗುವ ಲಕ್ಷಣಗಳು ಕಾಣುತ್ತಿವೆ. ಆಟಗಾರರಿಗೆ ರಣಜಿ ಟ್ರೋಫಿ ಆಡುವಂತೆ ಸೂಚಿಸಿರುವ ಬಿಸಿಸಿಐ, ಫಿಟ್ನೆಸ್ಗೆ ಸಂಬಂಧಿಸಿ ಹಳೆಯ ನಿಯಮ ಜಾರಿಗೆ ತರಲು ಮುಂದಾಗಿದೆ. ಇದೀಗ ಕಳೆದ ಸರಣಿಗಳಲ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ ಕಾರಣ ಬ್ಯಾಟಿಂಗ್ ಕೋಚ್ ನೇಮಿಸಲು ಚಿಂತನೆ ನಡೆಸಿದೆ.
ಮುಂಬರುವ ಇಂಗ್ಲೆಂಡ್ ಸರಣಿಗೂ ಮೊದಲು ತನ್ನ ಕೋಚಿಂಗ್ ಸಿಬ್ಬಂದಿಗೆ ಪ್ರಥಮ ದರ್ಜೆ ಕ್ರಿಕೆಟಿಗ ಸಿತಾಂಶಿ ಕೋಟಕ್ ಅವರನ್ನು ಸೇರಿಸಿಕೊಳ್ಳಲು ಸಜ್ಜಾಗಿದೆ. ಜನವರಿ 22ರಿಂದ ಪ್ರಾರಂಭವಾಗುವ ವೈಟ್-ಬಾಲ್ ಸರಣಿಯಲ್ಲಿ ಕೋಟಕ್ ಅವರು ಹೊಸ ಬ್ಯಾಟಿಂಗ್ ಕೋಚ್ ಆಗಿ ಭಾರತೀಯ ಶಿಬಿರ ಸೇರಲಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20ಐ ಸರಣಿಗೂ ಮುನ್ನ ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ಸ್ಟಾಫ್‌ಗೆ ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಸೇರಿಕೊಳ್ಳಲಿದ್ದಾರೆ ಎಂದು ESPNCricinfo ವರದಿ ಮಾಡಿದೆ. 52 ವರ್ಷದ ಕೋಟಕ್, 2019 ರಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬ್ಯಾಟಿಂಗ್ ಕೋಚ್ ಇಲ್ಲದಿರುವುದೇ ಕಳಪೆ ಪ್ರದರ್ಶನಕ್ಕೆ ಕಾರಣ?
ಆಸ್ಟ್ರೇಲಿಯಾ ವಿರುದ್ಧ ಭಾರತ 3-1ರಿಂದ ಟೆಸ್ಟ್ ಸರಣಿ ಕಳೆದುಕೊಂಡ ನಂತರ ತಮ್ಮ ಕೋಚಿಂಗ್ ಸಿಬ್ಬಂದಿಗೆ ಹೊಸ ಸದಸ್ಯರನ್ನು ಸೇರಿಸುವ ಕುರಿತು ವರದಿಯಾಗಿತ್ತು. ಇತ್ತೀಚಿನ ಬಿಜಿಟಿ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಹೆಣಗಾಡಿದ್ದು ಸರಣಿ ಸೋಲಿಗೆ ಕಾರಣವಾಗಿತ್ತು. ಟಾಪ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್ ರನ್ಗಾಗಿ ಪರದಾಡಿದ್ರು. ಇದಕ್ಕೆಲ್ಲಾ ಕಾರಣ ಬ್ಯಾಟಿಂಗ್ ಕೋಚ್ ಇಲ್ಲದೆ ಇರುವುದು ಎಂದು ವರದಿಗಳು ಹೇಳುತ್ತಿವೆ. ಇದೀಗ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಬ್ಯಾಟಿಂಗ್ ಕೋಚ್ ನೇಮಕ್ಕೆ ಬಿಸಿಸಿಐ ಸಜ್ಜಾಗಿದೆ ಎನ್ನಲಾಗಿದೆ.
ಗೌತಮ್ ಗಂಭೀರ್ (ಹೆಡ್ ಕೋಚ್), ಮೊರ್ನೆ ಮೊರ್ಕೆಲ್ (ಬೌಲಿಂಗ್ ಕೋಚ್), ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೋಸ್ಚೇಟ್ (ಸಹಾಯಕ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಕೋಚ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಇವರ ಪಟ್ಟಿಗೆ ಸಿತಾಂಶಿ ಕೋಟಕ್ ನೇಮಕವಾಗಲಿದ್ದಾರೆ ಎನ್ನಲಾಗಿದೆ. ಹಾಗಾಗಿ ನೂತನ ಬ್ಯಾಟಿಂಗ್ ಕೋಚ್ ಆಯ್ಕೆಯಿಂದಾಗಿ ಮುಂದಿನ ಸರಣಿಗಳಲ್ಲಾದರೂ ಬ್ಯಾಟಿಂಗ್ನಲ್ಲಿ ಬದಲಾವಣೆ ಕಾಣುತ್ತಾ ಎಂದು ಕಾದುನೋಡೋಣ.
ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ಅಂತಿಮ ತಯಾರಿ ನಡೆಸುತ್ತಿರುವ ಭಾರತ ತಂಡ ಜನವರಿ 22ರಿಂದ ಟಿ20ಐ ಮತ್ತು ಒಡಿಐ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಅಖಾಡಕ್ಕೆ ಧುಮುಕಲಿದೆ. ಮೆನ್ ಇನ್ ಬ್ಲೂ ತಂಡವು ಬಾಂಗ್ಲಾದೇಶ, ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧ ಗ್ರೂಪ್ ಎನಲ್ಲಿ ಕಣಕ್ಕಿಳಿಯಲಿದೆ. ಫೆಬ್ರವರಿ 20ರಂದು ತಮ್ಮ ಅಭಿಯಾನ ಆರಂಭಿಸುವ ಭಾರತ, ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಆದರೆ ಟೂರ್ನಿ ಫೆಬ್ರವರ 19ರಿಂದಲೇ ಆರಂಭವಾಗಲಿದೆ.
