ದೇಶೀಯ ಕ್ರಿಕೆಟ್ ಆಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ; ಇಶಾನ್ ಕಿಶನ್ಗೆ ಜಯ್ ಶಾ ಖಡಕ್ ಎಚ್ಚರ
Jay Shah : ದೇಶೀಯ ಕ್ರಿಕೆಟ್ ಆಡದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಶಾನ್ ಕಿಶನ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಪೂರ್ಣ ಫಿಟ್ ಆಗಿದ್ದರೂ ಕೆಲವು ಆಟಗಾರರು ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy) 2024 ಪಂದ್ಯಗಳನ್ನು ಆಡದೆ ನಿರ್ಲಕ್ಷಿಸಿದ ನಂತರ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರು ಕೇಂದ್ರೀಯ ಗುತ್ತಿಗೆ ಮತ್ತು ಭಾರತ ಎ ಆಟಗಾರರಿಗೆ ಭಾರಿ ಎಚ್ಚರಿಕೆ ನೀಡಿದ್ದಾರೆ. ದೇಶೀಯ ರಣಜಿ ಟ್ರೋಫಿ ಆಡದೇ ಇದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಶಾನ್ ಕಿಶನ್ (Ishan Kishan) ಸೇರಿ ಹಲವರಿಗೆ ಖಡಕ್ ವಾರ್ನ್ ಕೊಟ್ಟಿದ್ದಾರೆ.
ಕೇಂದ್ರ ಒಪ್ಪಂದದಲ್ಲಿರುವ ಉನ್ನತ ಕ್ರಿಕೆಟಿಗರಿಗೆ ಮತ್ತು ಭಾರತ ಎ ಕ್ರಿಕೆಟಿಗರಿಗೆ ಜಯ್ ಶಾ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಬೇಕೆಂದರೆ ದೇಶೀಯ ಕ್ರಿಕೆಟ್ ಆಡುವುದು ಮಾನದಂಡವಾಗಿದೆ. ಒಂದು ವೇಳೆ ಆಡದಿದ್ದರೆ ತೀವ್ರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಇಶಾನ್ ಕಿಶನ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ದೇಶೀಯ ರೆಡ್-ಬಾಲ್ ಕ್ರಿಕೆಟ್‌ಗಿಂತ ಆಟಗಾರರು ಐಪಿಎಲ್‌ಗೆ ಆದ್ಯತೆ ನೀಡುವ ಪ್ರವೃತ್ತಿ ಬೆಳೆಸಿಕೊಂಡ ಕಾರಣ ಜಯ್ ಶಾ ಪತ್ರ ಬರೆದಿದ್ದಾರೆ. ಆಟಗಾರರ ಈ ನಡೆ ಕಳವಳಕ್ಕೆ ಕಾರಣವಾಗಿದೆ. ಕೆಲವು ಆಟಗಾರರು ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ, ಇದು ನಿರೀಕ್ಷಿತವಲ್ಲ. ದೇಶೀಯ ಕ್ರಿಕೆಟ್ ಯಾವಾಗಲೂ ಭಾರತೀಯ ಕ್ರಿಕೆಟ್ ನಿಂತಿರುವ ಅಡಿಪಾಯವಾಗಿದೆ. ನಮ್ಮ ದೃಷ್ಟಿಯಲ್ಲಿ ಅದನ್ನು ಎಂದಿಗೂ ಕಡಿಮೆ ಮೌಲ್ಯಮಾಪನ ಮಾಡಲಾಗಿಲ್ಲ ಎಂದಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ನಮ್ಮ ದೃಷ್ಟಿ ಮೊದಲಿನಿಂದಲೂ ಸ್ಪಷ್ಟವಾಗಿದೆ. ರಾಷ್ಟ್ರೀಯ ತಂಡಕ್ಕೆ ಆಡಲು ಬಯಸುವ ಪ್ರತಿಯೊಬ್ಬ ಕ್ರಿಕೆಟಿಗರು ದೇಶೀ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಸಾಬೀತುಪಡಿಸಬೇಕು. ದೇಶೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನವು ಆಯ್ಕೆಗೆ ನಿರ್ಣಾಯಕ ಮಾನದಂಡವಾಗಿ ಉಳಿದಿದೆ. ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸದಿರುವುದು ವೃತ್ತಿ ಜೀವನದ ತೀವ್ರ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಪರೋಕ್ಷವಾಗಿ ಇಶಾನ್ಗೆ ಚುಚ್ಚಿದ ಜಯ್ ಶಾ
ಜಯ್ ಶಾ ಪತ್ರ ಬರೆಯುವ ಮೂಲಕ ಇಶಾನ್ ಕಿಶನ್ಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ರಣಜಿ ಆಡುವಂತೆ ಹೆಡ್ಕೋಚ್ ರಾಹುಲ್ ದ್ರಾವಿಡ್, ಸೆಲೆಕ್ಟರ್ಸ್ ಮತ್ತು ಬಿಸಿಸಿಐ ಸೂಚಿಸಿದ್ದರೂ ಇಶಾನ್ ಕ್ಯಾರೆ ಎನ್ನುತ್ತಿಲ್ಲ. ಸಾಕಷ್ಟು ಬಾರಿ ರಣಜಿ ಆಡುವಂತೆ ಹೇಳಲಾಗಿತ್ತು. ಆದರೂ ಹಿರಿಯ ಮಾತಿಗೆ ಕಿಮ್ಮತ್ತು ಕೊಟ್ಟಿರಲಿಲ್ಲ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.
ಮಾನಸಿಕ ಆಯಾಸ ಎಂದಿದ್ದ ಇಶಾನ್
ಮಾನಸಿಕ ಆಯಾಸ ಕಾರಣ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ನಂತರ ನಿಜವಾಗಿಯೂ ಇಶಾನ್ ಕಿಶನ್ ಕಠಿಣ ಸಮಯ ಎದುರಿಸುತ್ತಿದ್ದಾರೆ. ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೇಳಿದರೂ ಅವರ ಮಾತಿಗೂ ಕಿಮ್ಮತ್ತು ನೀಡದ ಇಶಾನ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲು ಚಿಂತನೆ ನಡೆಸಿದೆ ಎಂಬ ವರದಿಯಾಗಿದೆ.
ಪಾರ್ಟಿಗೆ ಹೋಗಿದ್ದ ಕಿಶನ್
ನಾನು ಆಯಾಸಗೊಂಡಿದ್ದೇನೆ. ನನಗೆ ರೆಸ್ಟ್ ಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ ಬಳಿ ಮನವಿ ಮಾಡಿದ್ದ ಇಶಾನ್, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದಾಗಿ ಹೇಳಿದ್ದರು. ಹಾಗಾಗಿ ವಿಶ್ರಾಂತಿ ನೀಡಲಾಗಿತ್ತು. ಆದರೆ ಮಾನಸಿಕ ಆಯಾಸವೆಂದು ಹೇಳಿ ದುಬೈನಲ್ಲಿ ಪಾರ್ಟಿಗೆ ಹೋಗಿದ್ದ ಕಿಶನ್, ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ಬನೇಗಾ ಕರೋಡ್ಪತಿಯಲ್ಲೂ ಭಾಗವಹಿಸಿದ್ದರು.
ಇಶಾನ್ ಕಿಶಾನ್ ನಡೆ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್ಮೆಂಟ್ಗೆ ಕೋಪ ತರಿಸಿತ್ತು. ಹಾಗಾಗಿ ರಣಜಿ ಆಡಿದರೆ ಮಾತ್ರ ಭಾರತ ತಂಡಕ್ಕೆ ಆಯ್ಕೆ ಮಾಡುತ್ತೇವೆ ಎಂದು ಮುಖ್ಯಕೋಚ್ ರಾಹುಲ್ ದ್ರಾವಿಡ್ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಆದರೆ, ಗುರು ಮಾತಿಗೂ ಬೆಲೆ ಕೊಡದ ಯುವ ಆಟಗಾರ ಜಾರ್ಖಂಡ್ ಪರ ಒಂದು ಪಂದ್ಯವೂ ರಣಜಿ ಆಡಿಲ್ಲ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.
ಬೇಸತ್ತ ಬಿಸಿಸಿಐ
ಇಶಾನ್ ಕಿಶನ್ ನಡೆದುಕೊಂಡ ಅಶಿಸ್ತಿನಿಗೆ ಬೇಸರಗೊಂಡ ಬಿಸಿಸಿಐ, ಅಫ್ಘನ್ ವಿರುದ್ಧದ ಟಿ20 ಸರಣಿಗೆ ಆತನನ್ನು ಆಯ್ಕೆ ಮಾಡಲಿಲ್ಲ. ಇದಕ್ಕೂ ಮೊದಲು ಟೆಸ್ಟ್ ಕ್ರಿಕೆಟ್‌ಗೆ ಮೊದಲ ಆದ್ಯತೆಯಾಗಿದ್ದ ಇಶಾನ್ ಅವರನ್ನು ಇಂಗ್ಲೆಂಡ್ ಸರಣಿಗೂ ಸೆಲೆಕ್ಟ್ ಮಾಡಲಾಗಿಲ್ಲ. ಬದಲಿಗೆ ಯುವ ಆಟಗಾರ ದ್ರುವ್ ಜುರೆಲ್ಗೆ ಮಣೆ ಹಾಕಲಾಯಿತು. ಇಷ್ಟಾದರೂ ರಣಜಿ ಆಡುವಂತೆ ಮತ್ತೊಮ್ಮೆ ಬಿಸಿಸಿಐ ಸೂಚಿಸಿತ್ತು.
ತದನಂತರವೂ ಬಿಸಿಸಿಐ ಹೇಳಿದ ಮಾತನ್ನು ಲೆಕ್ಕಿಸದೆ ಇಶಾನ್ ಮತ್ತೆ ರಣಜಿ ಆಡದೆ ದೂರ ಉಳಿದರು. ಹೀಗಾಗಿ ಸಾಕಷ್ಟು ಕೋಪ ತರಿಸಿದ ಕಾರಣ ಆತನಿಗೆ ಮತ್ತೊಂದು ಶಿಕ್ಷೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ತಂಡಕ್ಕೆ ಆಯ್ಕೆಯಾಗದೆ ದೂರವಾಗಿರುವ ವಿಕೆಟ್ ಕೀಪರ್ರನ್ನು ಗುತ್ತಿಗೆಯಿಂದ ಬಿಸಿಸಿಐ ನಿರ್ಧರಿಸಿದೆ ಎಂಬ ವದಂತಿಗಳು ಹರಡಿವೆ. ಆದರೆ ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಿಸಿಸಿಐ ಅಧಿಕಾರಿ ಹೇಳಿದ್ದೇನು?
ಪಿಟಿಐ ಜೊತೆಗಿನ ಸಂವಾದದಲ್ಲಿ, ಕಿಶನ್ ಅವರನ್ನು ಅವರ ಸೆಂಟ್ರಲ್ ಗುತ್ತಿಗೆ ಒಪ್ಪಂದದಿಂದ ನಿಜವಾಗಿಯೂ ಬಿಡುಗಡೆ ಮಾಡಲಾಗಿದೆಯೇ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರನ್ನು ಕೇಳಿದಾಗ, 'ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ' ಎಂದು ಅವರು ಉತ್ತರಿಸಿದ್ದಾರೆ. 'ಕೇಂದ್ರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆದಿಲ್ಲ' ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.