ಕನ್ನಡ ಸುದ್ದಿ  /  Cricket  /  Slc Ceo Confirms Wanindu Hasaranga To Miss Ipl 2024 Due To Heel Injury Srh Sunrisers Hyderabad Indian Premier League Jra

ಐಪಿಎಲ್ ಟೂರ್ನಿಯಿಂದಲೇ ವನಿಂದು ಹಸರಂಗ ಹೊರಕ್ಕೆ; ಸನ್‌ರೈಸರ್ಸ್ ತಂಡಕ್ಕೆ ಬರಲ್ಲ ಆರ್‌ಸಿಬಿ ಮಾಜಿ ಆಲ್‌ರೌಂಡರ್

Wanindu Hasaranga: ಎಡ ಹಿಮ್ಮಡಿ ಗಾಯದಿಂದಾಗಿ ಆರ್‌ಸಿಬಿ ಮಾಜಿ ಕ್ರಿಕೆಟಿಗ ವನಿಂದು ಹಸರಂಗ ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಗೆ ಮರಳುತ್ತಿಲ್ಲ. ಹೀಗಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಹಿನ್ನಡೆಯಾಗಿದೆ.

ಐಪಿಎಲ್ ಟೂರ್ನಿಯಿಂದಲೇ ವನಿಂದು ಹಸರಂಗ ಹೊರಕ್ಕೆ
ಐಪಿಎಲ್ ಟೂರ್ನಿಯಿಂದಲೇ ವನಿಂದು ಹಸರಂಗ ಹೊರಕ್ಕೆ

ಐಪಿಎಲ್‌ 2024ರಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಎಸ್‌ಆರ್‌ಎಚ್‌ ತಂಡಕ್ಕೆ ಇದೀಗ ಭಾರಿ ಹೊಡೆತ ಬಿದ್ದಿದೆ. ಶ್ರೀಲಂಕಾದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ (Wanindu Hasaranga), ತಂಡ ಸೇರಿಕೊಳ್ಳುವುದಕ್ಕೆ ಹಿನ್ನಡೆಯಾಗಿದೆ. ಟೂರ್ನಿಯ ಆರಂಭಿಕ ಪಂದ್ಯಗಳಿಂದ ಮಾತ್ರ ಹೊರಗುಳಿದಿದ್ದ ಆಲ್‌ರೌಂಡರ್‌, ಇದೀಗ ಸಂಪೂರ್ಣ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಎಡ ಹಿಮ್ಮಡಿ ಗಾಯದಿಂದಾಗಿ 2024ರ ಐಪಿಎಲ್‌ ಋತುವಿನಿಂದ ಹೊರಗುಳಿಯಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೆ ಡಿ ಸಿಲ್ವಾ ತಿಳಿಸಿದ್ದಾರೆ.

ಕಳೆದ ಆವೃತ್ತಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಹಸರಂಗ, ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆಯಾಗಿದ್ದರು. ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಹಸರಂಗ ಅವರನ್ನು ಮೂಲ ಬೆಲೆ 1.5 ಕೋಟಿ ರೂಪಾಯಿಗೆ ತಂಡಕ್ಕೆ ಕರೆತಂದಿತು.

ಟೂರ್ನಿಯ ಆರಂಭಕ್ಕೂ ಮುನ್ನ, ಪಂದ್ಯಾವಳಿಗೆ ಕನಿಷ್ಠ ಒಂದು ವಾರ ಹಸರಂಘಗ ಅಲಭ್ಯ ಎಂಬ ವರದಿಯಿತ್ತು. ಆದರೆ, ಗಾಯವು ಹೆಚ್ಚು ಗಂಭೀರವಾದ ಕಾರಣದಿಂದಾಗಿ ಟೂರ್ನಿಯಿಂದಲೇ ಅವರು ಹೊರಗುಳಿದಿದ್ದಾರೆ.‌

ಇದನ್ನೂ ಓದಿ | ವಿಶ್ವಕಪ್ ಗೆದ್ದ ಮೈದಾನದಲ್ಲಿ ಟಾಸ್ ಗೆದ್ದ ಎಸ್‌ಆರ್‌ಎಚ್‌ ನಾಯಕ ಕಮಿನ್ಸ್ ಬ್ಯಾಟಿಂಗ್‌ ಆಯ್ಕೆ; ಗುಜರಾತ್‌ ತಂಡದಲ್ಲಿ 2 ಬದಲಾವಣೆ

"ಪುನರ್ವಸತಿಗೆ ಒಳಗಾಗಬೇಕಿರುವುದರಿಂದ ಅವರು ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ. ಹಿಮ್ಮಡಿಯಲ್ಲಿ ಊತ ಆಗಿರುವುದರಿಂದ ಅವನು ಇಂಜೆಕ್ಷನ್‌ ತೆಗೆದುಕೊಂಡು ಆಡುತ್ತಿದ್ದಾರೆ. ವಿಶ್ವಕಪ್‌ಗೆ ಮುಂಚಿತವಾಗಿ ಗಾಯದ ಸಮಸ್ಯೆಯನ್ನು ಪರಿಹರಿಸಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ಈ ವರ್ಷದ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ನಮಗೆ ತಿಳಿಸಿದ್ದಾರೆ" ಎಂದು ಶ್ರೀಲಂಕಾದ ಸಿಇಒ ಆಶ್ಲೆ ಡಿ ಸಿಲ್ವಾ ಹೇಳಿದ್ದಾರೆ.

ಒಂದು ವಾರದ ಹಿಂದೆ ಐಪಿಎಲ್‌ ಆಡುವ ಸುಳಿವು

ಕೆಲವು ದಿನಗಳಿಗಿಂತ ಮುಂಚೆ, ಹಸರಂಗ ಐಪಿಎಲ್‌ಗೆ ಮರಳುವ ಸುಳಿವಿತ್ತು. ಶೀಘ್ರದಲ್ಲೇ ಅವರು ಎಸ್ಆರ್‌ಎಚ್ ತಂಡ ಸೇರಲಿದ್ದಾರೆ" ಎಂದು ಹಸರಂಗ ಅವರ ಮ್ಯಾನೇಜರ್ ಕ್ರಿಕ್‌ಬಜ್‌ಗೆ ತಿಳಿಸಿದ್ದರು.

ಸುಸ್ಥಿತಿಯಲ್ಲಿ ಎಸ್‌ಆರ್‌ಎಚ್

ಅತ್ತ, ಹಸರಂಗ ಅನುಪಸ್ಥಿತಿಯಲ್ಲಿಯೂ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋತ ಬಳಿಕ, ಮುಂಬೈ ಇಂಡಿಯನ್ಸ್ ವಿರುದ್ಧ 20 ಓವರ್‌ಗಳಲ್ಲಿ ದಾಖಲೆಯ 277 ರನ್‌ ದಾಖಲಿಸಿ ಭರ್ಜರಿ ಜಯ ಸಾಧಿಸಿತು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಎಸ್‌ಆರ್‌ಎಚ್‌ ನಿರ್ಮಿಸಿತು. ಅಲ್ಲದೆ ಪಂದ್ಯವನ್ನು ಪ್ಯಾಟ್‌ ಕಮಿನ್ಸ್‌ ಬಳಗವು 31 ರನ್ ಗಳಿಂದ ಗೆದ್ದುಕೊಂಡಿತು.‌

ಎಸ್‌ಆರ್‌ಎಚ್‌ ತಂಡವು ಮಾರ್ಚ್‌ 31ರ ಐಪಿಎಲ್‌ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸುತ್ತಿದೆ. ಪಂದ್ಯದಲ್ಲಿ ವಿರುದ್ಧ ಟಾಸ್‌ ಗೆದ್ದ ಸನ್‌ರೈಸರ್ಸ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. 162 ರನ್‌ ಕಲೆ ಹಾಕಿರುವ ತಂಡವು ಎದುರಾಳಿಗೆ ಸಾಧಾರಣ ಗುರಿ ನೀಡಿದೆ.

ಗುಜರಾತ್‌ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಆಡುವ ಬಳಗ

ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್.